Home ರಾಜಕೀಯ ಫಾರ್ಮ್ 7 ವಿವಾದ: 243 ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಕೊಪ್ಪ...

ಫಾರ್ಮ್ 7 ವಿವಾದ: 243 ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಕೊಪ್ಪ ಬಿಜೆಪಿ ಮುಖಂಡ ಎಚ್.ಕೆ. ದಿನೇಶ್

0

ಚಿಕ್ಕಮಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆಯ ಸಂದರ್ಭದಲ್ಲಿ ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಿ 243 ಮತದಾರರ ಹೆಸರುಗಳನ್ನು ಅಳಿಸಿಹಾಕಲು ಮುಂದಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಬಿಜೆಪಿ ಮುಖಂಡ ಎಚ್.ಕೆ. ದಿನೇಶ್, ತೀವ್ರ ವಿವಾದ ಮತ್ತು ಆಕ್ರೋಶದ ಬೆನ್ನಲ್ಲೇ ತಮ್ಮ ಆಕ್ಷೇಪಣಾ ಅರ್ಜಿಗಳನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ.

ಸೆಪ್ಟೆಂಬರ್ 21 ಮತ್ತು 22 ರಂದು ಕೊಪ್ಪ ತಾಲೂಕಿನ ವಿವಿಧ ಮತಗಟ್ಟೆಗಳಲ್ಲಿ 243 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ತಾಲೂಕು ಮುಖಂಡರಾದ ಎಚ್.ಕೆ. ದಿನೇಶ್, ಅರ್ಜುನ್, ಹಾಲಪ್ಪ, ಕಾರ್ತಿಕ್ ಹಾಗೂ ಬ್ರಿಜೇಶ್ ಅವರು ಫಾರ್ಮ್ 7 ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಈ ಪಟ್ಟಿಯಲ್ಲಿದ್ದ 243 ಮತದಾರರೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ಸ್ಥಳೀಯ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ವಜೀರ್ ಖಾನ್ ಮತ್ತು ಅವರ ಕುಟುಂಬಸ್ಥರ ಹೆಸರುಗಳೂ ಸೇರಿದ್ದವು ಎಂಬುದು ಬೆಳಕಿಗೆ ಬಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ಬೆಳವಣಿಗೆಯ ನಡುವೆ, ಕೊಪ್ಪ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗೆ (ಎಇಆರ್‌ಒ) ಅಕ್ಟೋಬರ್ 1 ರಂದು ಪತ್ರ ಬರೆದಿರುವ ಬಿಜೆಪಿ ಮುಖಂಡ ಎಚ್.ಕೆ. ದಿನೇಶ್, ತಾವು ಸಲ್ಲಿಸಿದ್ದ ಎಲ್ಲಾ ಫಾರ್ಮ್ 7 ಆಕ್ಷೇಪಣೆಗಳನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. “ಮತದಾರರ ಮಾಹಿತಿಯ ಬಗ್ಗೆ ಸಂಶಯ ಬಂದಿದ್ದರಿಂದ ಈ ಹಿಂದೆ ಆಕ್ಷೇಪಣೆ ಸಲ್ಲಿಸಲಾಗಿತ್ತು.

ಆದರೆ ಮರುಪರಿಶೀಲನೆ ನಡೆಸಿದಾಗ, ಆಕ್ಷೇಪಣೆ ಸಲ್ಲಿಸಲಾದ ಎಲ್ಲ ಮತದಾರರೂ ಸಂಬಂಧಪಟ್ಟ ಮತಗಟ್ಟೆ ವ್ಯಾಪ್ತಿಯಲ್ಲೇ ವಾಸಿಸುತ್ತಿರುವುದು ದೃಢಪಟ್ಟಿದೆ. ಆದ್ದರಿಂದ ಈ ಹಿಂದೆ ಸಲ್ಲಿಸಲಾದ ಆಕ್ಷೇಪಣೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು,” ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಫ್ಯಾಕ್ಟ್-ಚೆಕರ್ ಮೊಹಮ್ಮದ್ ಜುಬೇರ್ ಈ ಪತ್ರವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಳಗಾವಿ ಮತ್ತು ಬೀದರ್‌ನಲ್ಲಿ ಈಗಾಗಲೇ ಎಫ್‌ಐಆರ್‌‌ಗಳು ದಾಖಲಾಗಿರುವ ನಡುವೆಯೇ ಕೊಪ್ಪದ ಈ ಬೆಳವಣಿಗೆ ಮುನ್ನೆಲೆಗೆ ಬಂದಿದೆ. ಬೆಳಗಾವಿಯಲ್ಲಿ 198 ಮುಸ್ಲಿಂ ಮತದಾರರ ಹೆಸರು ತೆಗೆಯಲು ಯತ್ನಿಸಿದ ಆರೋಪಕ್ಕೆ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ವಿರುದ್ಧ ಹಾಗೂ ಬೀದರ್‌ನಲ್ಲಿ 3,244 ಮತದಾರರನ್ನು ಸುಳ್ಳಾಗಿ “ಸ್ಥಳಾಂತರಗೊಂಡವರು” ಎಂದು ಬಿಂಬಿಸಿದ ಆರೋಪಕ್ಕೆ 32 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

You cannot copy content of this page

Exit mobile version