Home ರಾಜ್ಯ ಮತದಾರರ ಪಟ್ಟಿ ವಿವಾದ: ಬೆಳಗಾವಿ ಪೊಲೀಸರ ವಿಚಾರಣೆಗೆ ಹಾಜರಾದ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್

ಮತದಾರರ ಪಟ್ಟಿ ವಿವಾದ: ಬೆಳಗಾವಿ ಪೊಲೀಸರ ವಿಚಾರಣೆಗೆ ಹಾಜರಾದ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್

0

ಬೆಳಗಾವಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ವೇಳೆ ‘ಫಾರ್ಮ್ 7’ ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಿಹಾಕಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಸೋಮವಾರ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಸಿಪಿ ಸಂತೋಷ್ ಸತ್ಯನಾಯಕ್ ಅವರು ಡಾ. ರವಿ ಪಾಟೀಲ್ ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದರು.

ವಿಚಾರಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವಿ ಪಾಟೀಲ್, “ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ,” ಎಂದು ಸ್ಪಷ್ಟಪಡಿಸಿದರು. ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಮತದಾರರ ವಿವರಗಳ ಸರಿಯಾದ ಪರಿಶೀಲನೆಗಾಗಿ ಮಾತ್ರ ನಾನು ಫಾರ್ಮ್ 7 ರ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸಿದ್ದೆನೇ ಹೊರತು ಯಾವುದೇ ಸಮುದಾಯದ ಮತಗಳನ್ನು ತೆಗೆದುಹಾಕುವ ಅಥವಾ ಸಾರ್ವಜನಿಕ ಶಾಂತಿ ಕದಡುವ ಯಾವುದೇ ಉದ್ದೇಶ ನನಗಿರಲಿಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ವಾರ್ಡ್ ನಂ. 12 ರಲ್ಲಿ 198 ಮತದಾರರ ಹೆಸರುಗಳನ್ನು ನಕಲಿ ದಾಖಲೆಗಳ ಮೂಲಕ ತೆಗೆದುಹಾಕಲು ಯತ್ನಿಸಲಾಗಿದೆ ಎಂಬ ಆರೋಪದಡಿ ಬೂತ್ ಮಟ್ಟದ ಏಜೆಂಟ್ ನೀಡಿದ್ದ ದೂರಿನ ಮೇರೆಗೆ ಮಾರ್ಕೆಟ್ ಠಾಣೆ ಪೊಲೀಸರು ರವಿ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version