Home ಅಂಕಣ ದಸರಾ ನಾಡಹಬ್ಬ : ಗೌಣ ಸಂಪ್ರದಾಯಗಳು vs ನೂತನ ಸುಧಾರಣೆಗಳು

ದಸರಾ ನಾಡಹಬ್ಬ : ಗೌಣ ಸಂಪ್ರದಾಯಗಳು vs ನೂತನ ಸುಧಾರಣೆಗಳು

0

“..ದೇವರೆಂಬ ಮಿಥ್ಯೆಗೆ ಅವಕಾಶ ಕೊಟ್ಟಷ್ಟು ಈ ಸಮಾಜದಲ್ಲಿ ಕಂದಾಚಾರಗಳು ಮೂಢನಂಬಿಕೆಗಳು ಇನ್ನೂ ಹೆಚ್ಚುತ್ತವೆ. ದಸರಾ ಹಬ್ಬದ ಅಂಬಾರಿ ಹೊರುವ ಪದ್ಧತಿ ಕೂಡಾ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಸುವ ಪದ್ಧತಿಯಾಗಿಲ್ಲ.. ಯಾಕೆಂದರೆ..” ಓದಿ.. ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಕನ್ನಡನಾಡಿನ ನಾಡಹಬ್ಬ ಎಂದು ಖ್ಯಾತಿ ಪಡೆದಿರುವ ಮತ್ತು ಆಚರಿಸುವ ಮೈಸೂರು ದಸರಾ ಹಬ್ಬವು ನಾಡಿನ ಗೌರವದ ವಿಷಯವಾಗಿದೆ. ಈ ಹಬ್ಬವನ್ನು ಕರ್ನಾಟಕ ಸರ್ಕಾರವು ಕನ್ನಡನಾಡಿನ ಜನಸಾಮಾನ್ಯರಿಂದ ವಸೂಲಿ ಮಾಡಿದ ತೆರಿಗೆಯಿಂದ ಆಚರಿಸುತ್ತದೆ. ಈ ಆಚರಣೆಯಲ್ಲಿ ಜರುಗುವ ಅಂಬಾರಿ ಮೆರವಣಿಗೆಯಲ್ಲಿ ಅಂಬಾರಿ ಒಳಗೆ ಕಲ್ಪಿತ ದೇವತೆಯಾದ ಚಾಮುಂಡಿ ಮೂರ್ತಿಯನ್ನು ಇಡುವುದು ಖಂಡನಾರ್ಹ.

ಯಾಕೆಂದರೆ ಸರ್ಕಾರ ಪ್ರತಿಯೊಬ್ಬರಿಂದಲೂ ತೆರಿಗೆ ವಸೂಲಿ ಮಾಡುವುದರಿಂದ, ಆ ಹಣಕಾಸಿನಿಂದ ನಾಡಹಬ್ಬ, ಉತ್ಸವ ಮಾಡಬೇಕಾದರೆ ಅದು ಎಲ್ಲರಿಗೂ ಸಂಬಂಧಪಟ್ಟದ್ದಾಗಿರುತ್ತದೆ. ಆದರೆ ಒಂದು ದೇವರ ಮೂರ್ತಿಯನ್ನು ಇಟ್ಟು ದಸರಾ ಆಚರಿಸುವುದು ಅಪೂರ್ಣವಾದದು. ಚಾಮುಂಡಿ ಎಂಬ ಕಲ್ಪಿತ ದೇವರು ಎಲ್ಲ ಜನರಿಗೂ ಸೇರಿದ್ದಲ್ಲ ಮತ್ತು ಎಲ್ಲರಿಗೂ ಬೇಕಾಗಿಯೂ ಇಲ್ಲ. ಹಾಗಾಗಿ ಕನ್ನಡ ನಾಡಿನ ಭೂಪಟದ ಮೂರ್ತಿಯನ್ನು ಇಡುವುದರ ಮೂಲಕ ಹೊಸ ಸುಧಾರಣೆ ತಂದು, ನಾಡ ಹಬ್ಬ ಮುಖಾಂತರವೂ ಕನ್ನಡ ಕಂಪನ್ನು ಸಾರಬಹುದು, ಇಲ್ಲದಿದ್ದರೆ ದೇವರೆಂಬ ಮಿಥ್ಯೆಗೆ ಅವಕಾಶ ಕೊಟ್ಟಷ್ಟು ಈ ಸಮಾಜದಲ್ಲಿ ಕಂದಾಚಾರಗಳು ಮೂಢನಂಬಿಕೆಗಳು ಇನ್ನೂ ಹೆಚ್ಚುತ್ತವೆ ಹಾಗೂ ಇವುಗಳಿಗೆ ಬಲಿಯಾಗುವ ಬಲಿಪಶುಗಳು ಹೆಚ್ಚಗುತ್ತಾರೆ.

ಮೊದಲಿಗೆ ದಸರಾ, ಅಂಬಾರಿ ಮೆರವಣಿಗೆ ಎಲ್ಲಾ ಆಚರಣೆಗೆ ಬಂದದ್ದು ರಾಜರ ಕಾಲದಲ್ಲಿ. ರಾಜರ ಪ್ರೌಢಿಮೆ ತೋರಿಕೆಯು ಸಹ ದಸರಾದ ಪ್ರಮುಖ ಭಾಗವಾಗಿತ್ತು. ದಸರಾವು ರಾಜರ, ರಾಜ ಪುರೋಹಿತರ ಮಾರ್ಗದರ್ಶನದಲ್ಲಿ ನಡೆಯುತ್ತಿತ್ತು. ರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರಾದಲ್ಲಿ ಆನೆ ಹೋರುವ ಅಂಬಾರಿ ಒಳಗೆ ಸ್ವತಃ ರಾಜನೇ ಕೂರುತ್ತಿದ್ದ ಆಗ ಕಲ್ಪಿತ ಚಾಮುಂಡಿ ಮೂರ್ತಿ ಇಡುವುದಕ್ಕೆ ಅವಕಾಶವಿರಲಿಲ್ಲ. ಜನರು ಆ ಮೆರವಣಿಗೆಯಲ್ಲಿ ಸಾಗುತ್ತಿದ್ದ ರಾಜನನ್ನು ನೋಡುತ್ತಿದ್ದರು.

ನಂತರ ಬ್ರಿಟಿಷರ ಆಳ್ವಿಕೆಯಲ್ಲಿಯೂ ಸಹ ಯತಪ್ರಕಾರವಾಗಿ ದಸರಾ ನಡೆಯುತ್ತಿತ್ತು. ಕಾಲ ಬದಲಾದಂತೆ ಬ್ರಿಟಿಷರಿಂದ ಸ್ವತಂತ್ರ ದೊರಕಿತು, ಆಗ ಸ್ವತಂತ್ರ ಹೋರಾಟಗಾರರಿಗೆ ಸ್ವತಂತ್ರಗೊಂಡ ದೇಶೀಯ ಸಂಸ್ಥಾನಗಳನ್ನೆಲ್ಲ ಒಗ್ಗೂಡಿಸಿ ಇಂಡಿಯಾ ಒಕ್ಕೂಟವನ್ನು ರಚಿಸಬೇಕೆಂಬ ಆಶಯವಿತ್ತು. ಹಾಗಾಗಿ ರಾಜರನ್ನು ಮನವೊಲಿಸಿ ಸಂಸ್ಥಾನಗಳನ್ನು ಇಂಡಿಯಾ ಒಕ್ಕೂಟದೊಳಗೆ ಸೇರಿಸಿ ಕೊಳ್ಳಬೇಕಾದ ಅನಿವಾರ್ಯತೆ ಇತ್ತು, ಆದಕಾರಣ ಇಂಡಿಯಾ ಸರ್ಕಾರವು ದೇಶಿಯ ಸಂಸ್ಥಾನದ ರಾಜರುಗಳೊಂದಿಗೆ 1950 ರಲ್ಲಿ ಒಪ್ಪಂದ ಮಾಡಿಕೊಂಡವು, ಅದೇನೆಂದರೆ ಅಧಿಕಾರ ಮತ್ತು ಕಂದಾಯ ವಸೂಲಿ ಮಾಡುವಿಕೆಯನ್ನು ಸರ್ಕಾರಕ್ಕೆ ವಹಿಸಬೇಕು ಇದಕ್ಕೆ ಪ್ರತಿಯಾಗಿ ಸರ್ಕಾರವು ಸಂಸ್ಥಾನದ ಹಿಂದಿನ ಆದಾಯ, ವಿಸ್ತೀರ್ಣ ಎಲ್ಲವನ್ನು ಗಮನಿಸಿ, ಅದಕ್ಕೆ ತಕ್ಕಂತೆ ರಾಜರ ವೈಯಕ್ತಿಕ ಖರ್ಚಿಗಾಗಿ ಮತ್ತು ಕುಟುಂಬ ನಿರ್ವಹಣೆಗಾಗಿ ವಾರ್ಷಿಕ ಹಣಕಾಸಿನ ಭತ್ಯೆಯನ್ನು (Privy Purse) ನೀಡುತ್ತಾ ಬರುತ್ತದೆ. ಇದರ ಜೊತೆಗೆ ರಾಜಮನೆತನಗಳಿಗೆ ರಾಜಕೀಯ ಮಾನ್ಯತೆ ಮತ್ತು ವಿಶೇಷ ಸೌಲಭ್ಯಗಳು ಮತ್ತು ಪ್ರಿವಿ ಪರ್ಸ್ ಗಳು ಸಿಗುತ್ತಿದ್ದವು. ರಾಜರುಗಳಿಗೆ ಸಿಗುತ್ತಿದ್ದ ಈ ಸೌಲಭ್ಯಗಳಿಗೆ ಸಂವಿಧಾನದ ಆರ್ಟಿಕಲ್ 291 ಮತ್ತು ಆರ್ಟಿಕಲ್ 362 ರಕ್ಷಣೆ ಒದಗಿಸುತ್ತಿದ್ದವು.

ಇದಕ್ಕೆ ಮೈಸೂರು ಸಂಸ್ಥಾನವು ಸಹ ಸೇರಿತ್ತು, ಈ ರೀತಿ ಒಪ್ಪಂದ ಮಾಡಿಕೊಂಡ ಸಂಸ್ಥಾನಗಳಲ್ಲಿ ಹೈದರಾಬಾದ್ ಸಂಸ್ಥಾನದ ರಾಜರು ತಮ್ಮ ಖರ್ಚಿಗಾಗಿ ಇಂಡಿಯಾ ಒಕ್ಕೂಟ ಸರ್ಕಾರದಿಂದ ವರ್ಷಕ್ಕೆ 50 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು, ಹಾಗೆಯೇ ಮೈಸೂರಿನ ರಾಜರು 26.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು. ಪಡೆದ ಈ ಹಣದಲ್ಲಿ ಅರಮನೆಯ ಮತ್ತು ರಾಜರ ಖರ್ಚು ವೆಚ್ಚಗಳು ಸೇರಿ ದಸರಾ ಹಬ್ಬವು ನಡೆಯುತ್ತಿತ್ತು ಆಗ ಅಂಬಾರಿಯೊಳಗೆ ಆಗಿನ ರಾಜರಾದ ಜಯಚಾಮರಾಜೇಂದ್ರ ಒಡೆಯರ್ ಕೂರುತ್ತಿದ್ದರು. ಈ ಒಪ್ಪಂದವನ್ನು ಮತ್ತು ಅಂಬಾರಿಯೊಳಗೆ ರಾಜ ಕೂರುವುದನ್ನು ಕರ್ನಾಟಕದ ಸಮಾಜವಾದಿಯೆಂದು ಪ್ರಖ್ಯಾತಿ ಪಡೆದಿರುವ ಮತ್ತು ಅದರಂತೆ ಬಾಳಿ ಬದುಕಿದ ಶಾಂತವೇರಿ ಗೋಪಾಲಗೌಡರು 20 ವರ್ಷಗಳ ಕಾಲ ನಿರಂತರವಾಗಿ ವಿರೋಧಿಸುತ್ತಾ ಧಿಕ್ಕಾರ ಕೂಗುತ್ತಾ ಬರುತ್ತಾರೆ. ಯಾಕೆಂದರೆ ಜನರ ತೆರಿಗೆ ದುಡ್ಡನ್ನು ರಾಜರು ತಮ್ಮ ವೈಯಕ್ತಿಕ ಆಡಂಬರಕ್ಕಾಗಿ ದುಂಡು ವೆಚ್ಚ ಮಾಡಿ ಪೋಲು ಮಾಡುತ್ತಿದ್ದಾರೆ ಇವುಗಳನ್ನು ಸರ್ಕಾರ ರದ್ದುಪಡಿಸಬೇಕೆಂದು.

ಕೊನೆಗೂ ಶಾಂತವೇರಿ ಗೋಪಾಲಗೌಡರ ಸತತ 20 ವರ್ಷಗಳ ಹೋರಾಟಕ್ಕೆ ಮಣಿದು ಇಂಡಿಯಾ ಒಕ್ಕೂಟ ಸರ್ಕಾರದಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿಯವರು 1971ರಲ್ಲಿ, ಸಂವಿಧಾನದಲ್ಲಿ 26ನೇ ತಿದ್ದುಪಡಿ ತಂದಿದ್ದರ ಪರಿಣಾಮ ಆರ್ಟಿಕಲ್ 291 ಮತ್ತು 362 ರದ್ದದವು, ಮತ್ತು ಪ್ರಿವಿ ಪರ್ಸ್ ಕೂಡ ರದ್ದಾಯಿತು, ರಾಜರ ಅಧಿಕೃತ ಮಾನ್ಯತೆ (ಹಿಂದಿನ ಸಂಸ್ಥಾನಗಳ ರಾಜರನ್ನು ಭಾರತದ ರಾಷ್ಟ್ರಪತಿ ಅಧಿಕೃತವಾಗಿ ರೂಲರ್ ಎಂದು ಗುರುತಿಸುತ್ತಿದ್ದರು.) ರಾಜಮನೆತನದ ವಿಶೇಷ ಹಕ್ಕುಗಳು ಮತ್ತು ಸವಲತ್ತು, ಇವುಗಳನ್ನೆಲ್ಲ ರದ್ದುಪಡಿಸಲಾಯಿತು.

ಪ್ರಿವಿ ಪರ್ಸ್ ರದ್ದಾದ್ದರಿಂದ, ಅಧಿಕೃತ ಮಾನ್ಯತೆ ಕಳೆದುಕೊಂಡ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ನಾನು ಅಂಬಾರಿ ಒಳಗೆ ಕೂರುವುದಿಲ್ಲ ಮತ್ತು ದಸರಾ ಹಬ್ಬವನ್ನು ಮಾಡಲು ಹಣಕಾಸಿನ ಸಹಾಯವಿಲ್ಲ ಎಂದು ಹೇಳಿದರು. ಅಂಬಾರಿ ಮೆರವಣಿಗೆ ಮತ್ತು ದಸರಾ ಹಬ್ಬವು ನಿಂತುಹೋಗುವ ಹಂತ ತಲುಪಿದವು.

ಆಗ ನಾಡಿನ ಬುದ್ದಿ ಜೀವಿಗಳು, ಪ್ರಗತಿಪರರು ಸೇರಿ, ಅವರಲ್ಲಿ ಪ್ರಮುಖರಾದವರು ಪ್ರೊ. ಡಿ. ನಂಜೇರಾಜ ಅರಸು, ಇವರೆಲ್ಲ ಒಗ್ಗೂಡಿ ರಾಜ ಅಂಬಾರಿ ಒಳಗೆ ಕೂರದಿದ್ದರೂ ಪರವಾಗಿಲ್ಲ ರಾಜನ ಬದಲು ಕನ್ನಡ ನಾಡಿನ ನಕಾಶೆಯ ಮೂರ್ತಿಯನ್ನಿಟ್ಟು ಅಂಬಾರಿ ಮೆರವಣಿಗೆ ಮಾಡಿ ದಸರಾ ಹಬ್ಬ ಮಾಡಬೇಕೆಂದು ಯೋಜನೆ ರೂಪಿಸಿದರು. ಆದರೆ ಅವರ ಬಳಿ ಅವರ ಯೋಜನೆಗೆ ಸಾಕಾಗುವಷ್ಟು ಹಣವಿಲ್ಲದ ಕಾರಣ ಈ ಯೋಜನೆ ಪೂರ್ಣಗೊಳ್ಳಲಿಲ್ಲ.

ಈ ಸಮಯದಲ್ಲಿ ಕರ್ನಾಟಕದಲ್ಲಿ ವ್ಯಾಪಾರ ಮಾಡುತ್ತಿದ್ದ ನಾರ್ತ್ ಇಂಡಿಯಾದ ಸೇಟುಗಳು ಅಂಬಾರಿಯೊಳಗೆ ಕನ್ನಡ ನಕಾಶೆ ಇಟ್ಟು ಮೆರವಣಿಗೆ ಮಾಡಿದರೆ, ಹಬ್ಬದ ಜೊತೆಗೆ ಕನ್ನಡ ಪ್ರೇಮವು ಹಬ್ಬಿ, ಹೊರಗಿನವರಾದ ನಮಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಬಹುದು ಎಂಬ ದುರ್ಬುದ್ಧಿಯಿಂದ ನಕಾಶೆ ಬದಲು ಅಂಬಾರಿಯೊಳಗೆ ಕಲ್ಪಿತ ದೇವರಾದ ಚಾಮುಂಡಿ ಮೂರ್ತಿ ಇಟ್ಟು ಮೆರವಣಿಗೆ ಮಾಡುವುದಾದರೆ ನಾವು ಹಣಸಹಾಯ ಮಾಡುತ್ತೇವೆಂದಾಗ. ದಸರಾ ನಡೆದರೆ ಸಾಕು ಏನ್ನುತ್ತಿದ ಜನ ಇವರ ಕುತಂತ್ರವನ್ನು ಒಪ್ಪುತ್ತಾರೆ. ಅಲ್ಲಿಂದ ಕಲ್ಪಿತ ದೇವರ ಮೆರವಣಿಗೆ ಶುರುವಾಗುತ್ತದೆ. 1973 ರಿಂದ ದಸರಾ ಹಬ್ಬಕ್ಕೆ ಸರ್ಕಾರವೇ ದೇಣಿಗೆ ನೀಡುತ್ತದೆ ಮತ್ತೆ ಆಗಲು ಸಹ ಕಲ್ಪಿತ ಮೂರ್ತಿಯನ್ನೇ ಇಟ್ಟು ಮೆರವಣಿಗೆ ಮಾಡುತ್ತಾರೆ.

ಇದರಿಂದಾಗಿ ಕನ್ನಡ ಪ್ರೇಮದ ಬದಲು ಮೌಡ್ಯ, ಕಂದಾಚಾರ, ಮೂಢನಂಬಿಕೆ, ಕೋಮುಗಲಭೆಗಳು ಹೆಚ್ಚುತ್ತಾ ಬಂದವು. ಇವುಗಳಿಗೆ ಪರಿಹಾರವಾಗಿ ನಾಡು ನುಡಿ ಬೆಳೆಸಬೇಕು ಆಗ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವಾಗುತ್ತದೆ. ಒಂದು ನಾಡ ಹಬ್ಬ ಎಂದು ಕರೆಸಿಕೊಳ್ಳುವುದನ್ನು ಕಲ್ಪಿತ ದೇವರಿಗೆ ಸೀಮಿತವಾಗಿಸದೆ, ನಾಡಹಬ್ಬಗಳು ನಾಡ ನುಡಿಗೆ ಪೂರಕವಾಗಿರಬೇಕು. ಕೆಟ್ಟದ್ದಗಲಿ ಒಳ್ಳೆಯದಾಗಲಿ ಹೇಗೆ ಸಮಾಜದಲ್ಲಿ ರೂಢಿಯಲ್ಲಿ ಇರುತ್ತವೆ ಎಂದರೆ ಆಚರಣೆಗಳ ಮುಖಾಂತರ. ಕನ್ನಡ ನಾಡಿನಲ್ಲಿ ಕನ್ನಡದ ಅಪಮೌಲ್ಯೀಕರಣವಾಗುತ್ತಿರುವುದಕ್ಕೆ ಇಂತಹ ಅರ್ಥವಿಲ್ಲದ ಆಚರಣೆಗಳು ಪ್ರಮುಖ ಕಾರಣ.

ಇದರ ಜೊತೆಗೆ ರಾಜ್ಯ ಸರ್ಕಾರವು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯನ್ನು ಈ ವರ್ಷದ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಒಪ್ಪುವಂತಹದ್ದಲ್ಲ ಏಕೆಂದರೆ ಮಠದ ಸ್ವಾಮಿಗಳು ದೇವರು ಜಾತಿ ಅಂತ ಹೇಳಿಕೊಂಡು ಮತ್ತು ಗುರುತಿಸಿಕೊಂಡು ಸಾಮಾನ್ಯವಾಗಿ ಒಂದು ಜಾತಿಗೆ ತಳಕು ಹಾಕಿಕೊಂಡಿರುತ್ತಾರೆ, ಇಂತಹವರು ಸಾರ್ವಜನಿಕ ಕಾರ್ಯಕ್ರಮಗಳಿಗೆ, ಸರ್ಕಾರದ ಕಾರ್ಯಕ್ರಮಗಳಿಗೆ, ರಾಜಕೀಯಕ್ಕೆ ಪ್ರವೇಶಿಸುವುದು ಸಮಂಜಸವಲ್ಲ.

ಹಿಂದಿನ ವರ್ಷ ಸಿದ್ದರಾಮಯ್ಯ ಸರ್ಕಾರವಿದ್ದಾಗ ದಸರಾ ಉದ್ಘಾಟಿಸಲು ಬರಹಗಾರರಾದ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು ಸಮಂಜಸ, ಅವರನ್ನು ಮುಸ್ಲಿಂ ಸಮುದಾಯದವರು ಎಂದು ಆರಿಸಲಿಲ್ಲ. ಬದಲಾಗಿ ಕನ್ನಡವನ್ನು ವಿಶ್ವಮಟ್ಟದಲ್ಲಿ ಗುರುತಿಸಿ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಸಾಧಕಿ ಎಂದು. ಆದರೆ ಕೆಲವು ಗಿಡಿಗೇಡಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲೆಂದೇ ಜೀವಿಸಿರುವ ಕಾರಣ ಅವರನ್ನು ಮುಸ್ಲಿಂ ಮಹಿಳೆ ಎಂದು ಅವರಿಗೆ ಅಪಚಾರ ಎಸಗಿದರು.

ಇದರ ಹಿಂದಿನ ವರ್ಷವು ಇದ್ದ ಸಿದ್ದರಾಮಯ್ಯ ಸರ್ಕಾರವು ದಸರಾ ಉದ್ಘಾಟನೆಗೆ ಹಂಸಲೇಖ ಅವರನ್ನು ಆಯ್ಕೆ ಮಾಡಿತ್ತು. ಕನ್ನಡ ಸಿನಿಮಾ ಲೋಕದಲ್ಲಿ ಮತ್ತು ಸಾಹಿತ್ಯದಲ್ಲಿ ಹಂಸಲೇಖ ಅವರ ಕೊಡುಗೆ ಅದ್ವಿತೀಯ. ಈ ಆಯ್ಕೆಗೆ ಅವರು ಸಹ ಅರ್ಹರು.

ಈ ನಿಟ್ಟಿನಲ್ಲಿ ನೋಡುವುದಾದರೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಸಾಧನೆಯೇನು? ಅವರು ಸ್ವಾಮೀಜಿ ಆಗಿದ್ದಾರೆ ಎಂಬುದೇ ಅವರ ಅರ್ಹತೆಯೇ? ಹಾಗಾದರೆ ಈ ಮಾನದಂಡ ಎಲ್ಲರಿಗೂ ಅನ್ವಯವಾಗಬೇಕಲ್ಲವೇ ? ಬೌದ್ಧ ಧರ್ಮದ – ಬಿಕ್ಕುಗಳನ್ನು;
ಕ್ರೈಸ್ತರ – ಪಾದ್ರಿಗಳನ್ನು;
ಮುಸ್ಲಿಮರ – ಇಮಾಮ್, ಮುಲ್ಲಾಗಳನ್ನು;
ಸಿಖ್ ಧರ್ಮದ – ಗ್ರಂಥಿಗಳನ್ನು;
ಜೈನ ಧರ್ಮದ- ಮುನಿ, ಸಾಧುಗಳನ್ನು; ಮತ್ತು ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಮತ್ತು ಹಿಂದುಳಿದ ವರ್ಗಗಳು ಪೂಜಿಸುವ ದೇವರುಗಳ ಪೂಜಾರಿಗಳನ್ನು, ಗುಡ್ಡಪ್ಪಗಳನ್ನು, ತಮ್ಮಡಿಗಳನ್ನು. ಇವರುಗಳನ್ನೆಲ್ಲ ಕರೆಯಿಸಿ, ಇವರುಗಳಿಗೆಲ್ಲ ಸಮಾನವಾಗಿ ಗೌರವಿಸಿ ಇವರಿಂದ ದಸರಾ ಉದ್ಘಾಟಿಸುವುದಾದರೆ ದಸರಾ ಸರ್ವಧರ್ಮಗಳಿಗೂ, ಸರ್ವಜಾತಿಗಳಿಗೂ ಸೇರಿದ ‘ನಾಡಹಬ್ಬ’, ಎಂದು ಕರೆಯುವುದಕ್ಕೆ ಅರ್ಥ ಬರುತ್ತದೆ.

ದಸರಾ ಹಬ್ಬದಲ್ಲಿ ವೈದಿಕ ಪುರೋಹಿತರು ಬೇಕಾದಷ್ಟು ಹಣಕಾಸನ್ನು ಕೊಳ್ಳೆ ಹೊಡೆಯುತ್ತಾರೆ, ದೋಚುತ್ತಾರೆ. ಈ ಅವಕಾಶ ಬೇರೆ ಜಾತಿಯ ಬೇರೆ ಧರ್ಮದ ಪುರೋಹಿತರಿಗೂ ಸಿಗಬೇಕು ಇಲ್ಲದಿದ್ದರೆ ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಎಲ್ಲಾ ಜಾತಿಯವರು ತೆರಿಗೆ ಕಟ್ಟುತ್ತಾರೆ. ಜನರು ಕಟ್ಟಿದ ಹಣದಲ್ಲಿ ಸರ್ಕಾರ ಒಂದು ಕಾರ್ಯಕ್ರಮ ಮಾಡುತ್ತದೆ ಎಂದರೆ ಎಲ್ಲರಿಗೂ ಆದ್ಯತೆ ಮತ್ತು ಗೌರವ ಸಿಗಬೇಕು. ಈ ತೆರಿಗೆ ಕಟ್ಟುವವರಲ್ಲಿ ನಾಸ್ತಿಕರು ಸಹ ಸೇರುತ್ತಾರೆ ಅವರನ್ನು ಹೇಗೆ ಗೌರವಿಸುವುದು?

ಎಲ್ಲಾ ಜಾತಿಯ, ಎಲ್ಲಾ ಧರ್ಮದ ಪುರೋಹಿತರರಿಂದಲೂ ಈ ವರ್ಷದ ದಸರಾ ಉದ್ಘಾಟಿಸಬೇಕು. ಇಲ್ಲವಾದಲ್ಲಿ ಇವರನ್ನು ಉದ್ಘಾಟನೆಗೆ ಆಹ್ವಾನಿಸಲೇಬಾರದು. ರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರಾ ಆಚರಣೆಯನ್ನು ಪ್ರಶ್ನಿಸುವ ಹಕ್ಕು ಜನರಿಗೆ ಇದಿದ್ದಿಲ್ಲ, ಅದನ್ನು ನಿರ್ಧರಿಸುವುದು ಕೇವಲ ರಾಜರು ಮತ್ತು ರಾಜ ಪುರೋಹಿತರು ಅಷ್ಟೇ. ಆದರೆ ಈಗ ಪ್ರಜಾಪ್ರಭುತ್ವ ಚಾಲ್ತಿಯಲ್ಲಿ ಇರುವ ಕಾರಣ ಜನರಿಗೆ ಪ್ರಶ್ನಿಸುವ ಮತ್ತು ಸುಧಾರಣೆ ಬಯಸುವ, ಬಯಸಿದ ಸುಧಾರಣೆ ತರುವ ಹಕ್ಕಿದೆ. ಹಾಗಾಗಿ ಜನರು ಪ್ರಶ್ನಿಸಬೇಕು ಸುಧಾರಣೆ ತರುವಲ್ಲಿ ಕಾರ್ಯಮಗ್ನರಾಗಬೇಕು.

ಈಗಿನ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು, ಸೆಪ್ಟೆಂಬರ್ 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಸ್ವಚ್ಚತಾ ಯೋಧರಿಗೆ ನಲ್ಮೆಯ ನಮನ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ -2026 ಸಮಾರಂಭವನ್ನು ಉದ್ಘಾಟಿಸಿದರು. ಮತ್ತು ಇವರ ಜೊತೆ ಪಕ್ಷದ ಮಂತ್ರಿಗಳು ಸೇರಿ ಪೌರಕಾರ್ಮಿಕರ ಸಮವಸ್ತ್ರ ಧರಿಸಿ ಗಮನ ಸೆಳೆದಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು “ ಪೌರ ಕಾರ್ಮಿಕರು ಇಲ್ಲದಿದ್ದರೆ ನಗರ ತಿಪ್ಪೆ ಗುಂಡಿಯಾಗುತ್ತದೆ ಎಂಬ ಅರಿವಿದೆ. ನೀವಿದ್ದರೆ ರಸ್ತೆ, ನಗರ ಎಲ್ಲವೂ ಸುಂದರ. ಹೀಗಾಗಿ ನಿಮ್ಮನ್ನು ಸ್ವಚ್ಛತೆಯ ರಾಯಭಾರಿಗಳು ಎಂದು ಗೌರವಯುತವಾಗಿ ಕಾಣುತ್ತಿದೆ. ನಿಮ್ಮ ಆರೋಗ್ಯಕ್ಕೆ ಗ್ಯಾರಂಟಿ ನೀಡುವುದು ನಮ್ಮ ಬದ್ಧತೆಯಾಗಿದೆ. ಸಮಾಜ ನಿಮ್ಮ ಮೇಲೆ ಅವಲಂಬಿತವಾಗಿದೆ. ನಿಮ್ಮ ಕೆಲಸ ದೇವರ ಸೇವೆಗೆ ಸಮಾನ ಎಂದು ಅಧಿಕಾರಿಗಳು ಹಾಗೂ ಸಾಮಾನ್ಯ ಜನ ಕಾಣುವಂತಾಗಬೇಕು ಎಂದು ಅವರು ತಿಳಿಸಿದರು.
ಇದರ ಜೊತೆಗೆ ಪೌರ ಕಾರ್ಮಿಕರ ಭತ್ಯೆ ಏರಿಕೆ, ಉಪಾಹಾರ ಭತ್ತೆಯನ್ನು 35ರಿಂದ 70 ರೂ.ಗೆ ಏರಿಕೆಗೆ ಶೀಘ್ರದಲ್ಲಿಯೇ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ.

ಇದರ ಜೊತೆಗೆ ಪೌರಕಾರ್ಮಿಕರನ್ನು ಗೌರವಿಸುತ್ತೆವೆಂದು ಸುಮ್ಮನಾಗುವುದಲ್ಲ ಪೌರಕಾರ್ಮಿಕರು ಮಾಡುವ ಕೆಲಸವನ್ನು ನಿರ್ಮೂಲನೆ ಮಾಡಿ, ಮನುಷ್ಯರ ಬದಲು ಯಂತ್ರಿಕರಣವನ್ನು ಅಳವಡಿಸಬೇಕು, ಆಗ ಅವರಿಗೆ ಗೌರವ ಧನ ಕೊಟ್ಟು ಅವರ ಜೀವನ ಸುಧಾರಿಸುವಂತೆ ಮಾಡಬೇಕು.

ಪೌರಕಾರ್ಮಿಕರನ್ನು ಇಷ್ಟೊಂದು ಗೌರವಯುತವಾಗಿ ಕಾಣುವ ಮುಖ್ಯಮಂತ್ರಿಗಳು ಸಿಕ್ಕಿದ್ದು ನಮ್ಮ ನಾಡಿನ ಪುಣ್ಯ, ಇವರೇಕೆ ಪೌರಕಾರ್ಮಿಕರಿಂದ ಈ ವರ್ಷದ ದಸರಾವನ್ನು ಉದ್ಘಾಟಿಸಲು ಅವಕಾಶ ಮಾಡಿಕೊಡಬೇಕೆಂದು ಯೋಚಿಸುತ್ತಿಲ್ಲ? ಪೌರಕಾರ್ಮಿಕರ ಸಮವಸ್ತ್ರ ಧರಿಸಿ, ಪೌರಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಿ, ಪೌರ ಕಾರ್ಮಿಕರ ಕೆಲಸ ದೇವರ ಕೆಲಸವೆಂದು ಹಾಡಿ ಹೊಗಳಿದ ಮುಖ್ಯಮಂತ್ರಿಗಳು ಅಂಬಾರಿಯೊಳಗೆ ಕನ್ನಡ ನಕಾಶೆ ಮೂರ್ತಿಯನ್ನು ಇಟ್ಟು ದಸರಾ ಉದ್ಘಾಟನೆಯನ್ನು ಪೌರಕಾರ್ಮಿಕರಿಂದ ಉದ್ಘಾಟಿಸಲು ಅವಕಾಶ ಮಾಡಿಕೊಡುವುದರಿಂದ. ಇವರಿಗೆ ಉಂಟಾಗಿರುವ ತೊಂದರೆಯಾದರೂ ಏನು? ಸಾಮಾಜಿಕವಾಗಿ ತೊಂದರೆಯೇ? ರಾಜಕೀಯವಾಗಿ ತೊಂದರೆಯೇ? ಅಥವಾ ಮಾನಸಿಕವಾಗಿ ತೊಂದರೆಯೇ?

ಒಂದು ತಿಂಗಳ ಹಿಂದೆ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಜಾಣಗೆರೆ ವೆಂಕಟರಾಮಯ್ಯ ಮತ್ತು ಮಳವಳ್ಳಿ ಶಿವಣ್ಣ ಇವರ ನೇತೃತ್ವದಲ್ಲಿ ಪೌರಕಾರ್ಮಿಕರಿಂದ ದಸರಾ ಉದ್ಘಾಟನೆ ಆಗಬೇಕೆಂದು ಹೋರಾಟ ಮಾಡಿದರು. ಜನರಿಗೆ ಕೇಳುವ ಹಕ್ಕಿದ್ದ ಮೇಲೆ, ಜನರ ಬೇಡಿಕೆ ನ್ಯಾಯಯುತವಾಗಿದ್ದಾಗ ಅವರ ಬೇಡಿಕೆಯನ್ನು ಈಡೇರಿಸುವುದರಲ್ಲಿ ತಪ್ಪೇನಿದೆ?

ಮಾನವನ ವಿಕಾಸವಾಗುವಾಗ ಸಮಾಜವು ವಿಕಾಸವಾಯಿತು, ಈ ಮಾನವ ಮತ್ತು ಸಮಾಜವು ವಿಕಾಸವಾಗುವಾಗ ಸಮಾಜಲ್ಲಿ ಹಲವಾರು ಬದಲಾವಣೆಗಳು ಆಗಿವೆ. ವಿಕಾಸಗೊಳ್ಳಬೇಕಾದ ಸಮಾಜ ವೈಜ್ಞಾನಿಕ ಮನೋದೃಷ್ಟಿಯಲ್ಲಿ ಮುಂದೆ ಸಾಗಬೇಕೆ ಹೊರತು. ದೇವರು-ಧರ್ಮ-ಜಾತಿ-ಸಾಮಾಜಿಕ ಅಸಮಾನತೆ ಗಳನ್ನು ಪಾಲಿಸುತ್ತಾ, ಅವುಗಳನ್ನೆ ಹಿಂಬಾಲಿಸುತ್ತಾ ಗತಕಾಲಕ್ಕೆ ಹೋಗಬಾರದು. ಈ ವರ್ಷದ ದಸರಾ ಆಚರಣೆಯಲ್ಲಿ ಮತ್ತು ಉದ್ಘಾಟನೆಯಲ್ಲಿ ಮಹತ್ವದ ಬದಲಾವಣೆ ಆಗಬೇಕಾಗಿದೆ.

ಮಾನವನ ಮೆದಳು ಬಾಹ್ಯಕಾಶದ ಬಗ್ಗೆಯೆಲ್ಲಾ ಯೋಚಿಸಿದರು, ಅನ್ವೇಶಿಸಿದರು ಒಮ್ಮೆ ದೇವರು, ಮೌಡ್ಯ, ಕಂದಾಚಾರ ಎಂಬಂತವು ಮಾನವನ ಮೆದುಳನ್ನು ಹೊಕ್ಕಿದರೆ ಆ ಮೆದುಳು ನಿಷ್ಕ್ರಿಯವಾಗಿ ಕಸದ ತೊಟ್ಟಿಯಾತ್ತದೆ. ಅಲ್ಲಿಂದಲೇ ಸಮಾಜದ ನಿಷ್ಕ್ರಿಯತೆ ಆರಂಭವಾಗುತ್ತದೆ.

ಈ ನಡೆಯನ್ನು ಮೂಲಭೂತವಾದಿಗಳು, ಸಂಪ್ರದಾಯವಾದಿಗಳು ವಿರೋಧಿಸುತ್ತಾರೆ ಎಂಬುದು ಗೊತ್ತು ಮತ್ತು ಯಥಾ ಸ್ಥಿತಿ ಮುಂದುವರೆಯಲು ಕೆಲಸ ಮಾಡುತ್ತಾರೆ ಎಂಬುದು ಗೊತ್ತು. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾದಾಗ ಸುಮ್ಮನಿರುವುದು ಕೇಡಿಗಳ ಲಕ್ಷಣ. ಇಂತಹ ಕೇಡಿಗಳಿಂದ ಸಮಾಜ ಹಾಳಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ವಿಶ್ವಮಾನವರಾದ ಕುವೆಂಪುರವರ ಸಂದೇಶ ‘ನೂರು ದೇವರುಗಳನ್ನು ನೂಕಾಚೆ ದೂರ’. ಎಂಬಂತೆ ಈ ಕವನದ ಸಾಲನ್ನು ಕಾರ್ಯಗತಗೊಳಿಸುವುದು ಈ ನಾಡಿನ ಜನತೆಯ ಕರ್ತವ್ಯವಾಗಿದೆ.

ಈ ನಾಡಿನ ಸಾಮಾಜಿಕತೆಯಲ್ಲಿ ದೇವರಿದ್ದಾನೆ, ವೈಜ್ಞಾನಿಕತೆಯಲ್ಲಿ ದೇವರಿಲ್ಲ, ವೈಜ್ಞಾನಿಕತೆಯೊಂದಿಗೆ ಸಾಮಾಜಿಕತೆ ಸಮ್ಮಿಲನಗೊಂಡು ವಿಕಾಸವಾಗುವ ಸಮಾಜ ಸಂಪತ್ಭರಿತವಾಗಿ. ಜ್ಞಾನ ಕೇಂದ್ರವಾಗಿ ಪ್ರಕಾಶಿಸುತ್ತದೆ.

You cannot copy content of this page

Exit mobile version