ಆಗ್ರಾ: ಪಕ್ಷದ ಮಹಿಳಾ ಕಾರ್ಯಕರ್ತರಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಬಿಜೆಪಿ ನಾಯಕನನ್ನು ಅವನ ಪತ್ನಿಯ ಸಮ್ಮುಖದಲ್ಲೇ ಮಹಿಳಾ ಸದಸ್ಯರು ಚಪ್ಪಲಿಯಿಂದ ಹೊಡೆದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭಾನುವಾರ, ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಬೂತ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಶರ್ಮಾನ ಮನೆಯ ಮೇಲೆ ಪಕ್ಷದ ಮಹಿಳಾ ಕಾರ್ಯಕರ್ತರು ದಾಳಿ ಮಾಡಿ, ಕುರ್ಚಿಯ ಮೇಲೆ ಕುಳಿತಿದ್ದ ಆನಂದ್ ಶರ್ಮಾ ಅವರನ್ನು ಅವರ ಶರ್ಟ್ ಹಿಡಿದು ಹೊರಗೆ ಎಳೆದು ಚಪ್ಪಲಿಯಿಂದ ಹೊಡೆದಿದ್ದಾರೆ.
ಮಹಿಳೆಯರು 75 ಸೆಕೆಂಡುಗಳಲ್ಲಿ 22 ಬಾರಿ ಆನಂದ್ ಶರ್ಮಾ ಅವರನ್ನು ಚಪ್ಪಲಿಯಿಂದ ಹೊಡೆಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಖಂಡೌಲಿಯಲ್ಲಿ ಕಲ್ಯಾಣ ಮಂಟಪವನ್ನು ನಡೆಸುತ್ತಿರುವ ಆನಂದ್ ಶರ್ಮಾ ಕಳೆದ ಒಂದು ತಿಂಗಳಿನಿಂದ ತಮ್ಮ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಯಕರ್ತರಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಆಶಾ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ ಮನಸ್ಸು ಬದಲಾಯಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.