Home ರಾಜಕೀಯ ವೈರಲ್ ಆಡಿಯೋ ಕ್ಲಿಪ್ ಪ್ರಕರಣ: ಬಿಜೆಪಿ ನಾಯಕ ವಿಜಯ್ ಚೌಧರಿ ಬಂಧನ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ

ವೈರಲ್ ಆಡಿಯೋ ಕ್ಲಿಪ್ ಪ್ರಕರಣ: ಬಿಜೆಪಿ ನಾಯಕ ವಿಜಯ್ ಚೌಧರಿ ಬಂಧನ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ

0

ಮಹಾರಾಷ್ಟ್ರದ ಬಿಜೆಪಿ ನಾಯಕ ವಿಜಯ್ ಚೌಧರಿ ಅವರನ್ನು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಂಸದರೊಬ್ಬರಿಗೆ ಸಂಬಂಧಿಸಿದ ಆಕ್ಷೇಪಾರ್ಹ ಆಡಿಯೋ ಕ್ಲಿಪ್ ವೈರಲ್ ಆದ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಗುರುವಾರ ತಡರಾತ್ರಿ ಧುಲಿಯಾ ರಸ್ತೆಯಲ್ಲಿ ವಿಜಯ್ ಚೌಧರಿ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ವೈದ್ಯಕೀಯ ತಪಾಸಣೆಯ ನಂತರ ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಡಿಯೋ ಕ್ಲಿಪ್ ಬಯಲಿಗೆ ಬಂದ ನಂತರ ಉತ್ತರ ಮಹಾರಾಷ್ಟ್ರದ ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡುವಂತೆ ಬಿಜೆಪಿ ಸೂಚಿಸಿದ ಕೆಲವೇ ದಿನಗಳಲ್ಲಿ ಈ ಬಂಧನವಾಗಿದೆ. ಬಿಜೆಪಿಯ ಮಾಜಿ ಸಂಸದೆ ಹೀನಾ ಗಾವಿತ್ ಮತ್ತು ಇತರ ಹಿರಿಯ ರಾಜಕೀಯ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡಿದೆ ಎನ್ನಲಾದ ಆಡಿಯೋ ಕ್ಲಿಪ್‌ಗೆ ಸಂಬಂಧಿಸಿದಂತೆ ನಂದೂರ್ಬಾರ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲು

ಮಾಜಿ ಸಂಸದೆ ಹೀನಾ ಗಾವಿತ್ ಅವರ ಸೋದರಸಂಬಂಧಿ ನೀಡಿದ ದೂರಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆಡಿಯೋ ಕ್ಲಿಪ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಹೀನಾ ಗಾವಿತ್ ಅವರ ವಿರುದ್ಧ ನಿಂದನೀಯ ಹೇಳಿಕೆಗಳಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಈ ಆಡಿಯೋ ಕ್ಲಿಪ್‌ನಲ್ಲಿ ಕೇಂದ್ರ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಮಾಜಿ ಸಂಸದೆ ಡಾ. ಹೀನಾ ಗಾವಿತ್, ಎನ್‌ಸಿಪಿ (ಎಸ್‌ಪಿ) ನಾಯಕ ಏಕನಾಥ್ ಖಡ್ಸೆ ಮತ್ತು ರೋಹಿಣಿ ಖಡ್ಸೆ ಅವರ ವಿರುದ್ಧವೂ ಆಕ್ಷೇಪಾರ್ಹ ಮಾತುಗಳಿದ್ದವು ಎನ್ನಲಾಗಿದೆ. ಆದಾಗ್ಯೂ, ಆಡಿಯೋ ಕ್ಲಿಪ್‌ನ ನೈಜತೆ ಇನ್ನೂ ಸಂಪೂರ್ಣವಾಗಿ ಸಾಬೀತಾಗಿಲ್ಲ. ಆಡಿಯೋದ ಮೂಲ, ಅದರ ನೈಜತೆ, ಧ್ವನಿ ಮುದ್ರಿಸಿದ ವ್ಯಕ್ತಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಹರಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯ್ ಚೌಧರಿ ಧ್ವನಿ ಮಾದರಿ ಸಂಗ್ರಹ

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಮಾತನಾಡಿ, “ನಾವು ವಿಜಯ್ ಚೌಧರಿ ಅವರ ಧ್ವನಿಯ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗಾಗಿ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಆಡಿಯೋ ಕ್ಲಿಪ್ ಕೇಳಿದಾಗ ಮಾತನಾಡುವವರಲ್ಲಿ ವಿಜಯ್ ಒಬ್ಬರು ಎಂದು ತೋರುತ್ತದೆ, ಆದರೆ ಫೋರೆನ್ಸಿಕ್ ವರದಿ ಬರುವವರೆಗೆ ನಾವು ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ,” ಎಂದಿದ್ದಾರೆ.

ಇನ್ನೊಂದೆಡೆ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ವಿಜಯ್ ಚೌಧರಿ, ಈ ಆಡಿಯೋ ಕ್ಲಿಪ್ ಅನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾಗಿದೆ ಮತ್ತು ತಮ್ಮ ಧ್ವನಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳಾ ನಾಯಕಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಆರೋಪವಾಗಿರುವುದರಿಂದ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿ ಕಾರ್ಯಕರ್ತರಿಂದಲೇ ತೀವ್ರ ಆಕ್ರೋಶ

ಈ ಆಡಿಯೋ ಕ್ಲಿಪ್‌ಗೆ ಬಿಜೆಪಿ ಒಳಗಡೆಯೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿವಸೇನೆ ಶಾಸಕ ಅಮಾಶಾ ಪದ್ವಿ ಕೂಡ ವಿಜಯ್ ಅವರನ್ನು ಖಂಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕ್ಲಿಪ್ ವೈರಲ್ ಆದ ನಂತರ ನಂದೂರ್ಬಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಚೌಧರಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.

You cannot copy content of this page

Exit mobile version