Home ಬೆಂಗಳೂರು ಹೊರಟ್ಟಿ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವುದು ತಮ್ಮ ಇಚ್ಛೆಯಲ್ಲ –  ಬಿಕೆ ಹರಿಪ್ರಸಾದ್

ಹೊರಟ್ಟಿ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವುದು ತಮ್ಮ ಇಚ್ಛೆಯಲ್ಲ –  ಬಿಕೆ ಹರಿಪ್ರಸಾದ್

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರನ್ನು ಭೇಟಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ (Bk Hariprasad), ಅವರ ವಿರುದ್ಧ ಅವಿಶ್ವಾಸ ನಿರ್ಣಯ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹಿರಿಯ ನಾಯಕರಾದ ಹೊರಟ್ಟಿ ಅವರ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವುದು ತಮ್ಮ ಇಚ್ಛೆಯಲ್ಲ ಎಂದು ಹೇಳಿದರು. ವಿಧಾನ ಪರಿಷತ್ತು ಚಿಂತಕರ ಚಾವಡಿಯಾಗಿದ್ದು, ಅದರ ಘನತೆ ಮತ್ತು ಗೌರವವನ್ನು ಎಲ್ಲರೂ ಕಾಪಾಡಬೇಕು ಎಂಬುದಾಗಿ ತಾವು ಮನವಿ ಮಾಡಿರುವುದಾಗಿ ತಿಳಿಸಿದರು.

ಹೊರಟ್ಟಿ ಅವರನ್ನು ಮುಂದುವರಿಸುವ ವಿಚಾರದಲ್ಲಿ ಕೆಲ ಸಚಿವರು ಒತ್ತಡ ಹೇರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಯಾವುದೇ ಸಚಿವರು ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ಗೆ ವಿಧಾನ ಪರಿಷತ್ತಿನಲ್ಲಿ ಸಂಖ್ಯಾಬಲ ಇರುವುದರಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ ಎಂದರು.

ಈ ವೇಳೆ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಯಾವ ರೀತಿಯಲ್ಲಿ ಸ್ಥಾನದಿಂದ ತೆರವುಗೊಳಿಸಲಾಗಿತ್ತು ಎಂಬುದು ತನಗೆ ಗೊತ್ತಿದೆ. ಆದರೆ ಕಾಂಗ್ರೆಸ್ ಆ ರೀತಿಯ ನಡೆ ಅನುಸರಿಸುವುದಿಲ್ಲ. ನಿಯಮಾವಳಿ, ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹರಿಪ್ರಸಾದ್ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣಪ್ಪ ಅವರನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಹರಿಪ್ರಸಾದ್, ತಮ್ಮ ಮತ್ತು ಕೃಷ್ಣಪ್ಪ ಅವರ ಸಂಬಂಧ ಕಾಲೇಜು ದಿನಗಳಿಂದಲೂ ಇದೆ ಎಂದು ಹೇಳಿದರು. ರೇಣುಕಾಚಾರ್ಯ ಕೂಡ ತಮ್ಮ ಕಾಲೇಜಿನ ಹಿರಿಯರಾಗಿದ್ದು, ಸುಮಾರು 45 ರಿಂದ 50 ವರ್ಷಗಳ ಸಂಬಂಧ ನಮ್ಮ ನಡುವೆಯಿದೆ ಎಂದು ತಿಳಿಸಿದರು.

ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಹೇಳಿದ ಅವರು, ಇಬ್ಬರೂ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದವರಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ಕೃಷ್ಣಪ್ಪ ಅವರಿಗೆ ಆಗಿರುವ ನೋವಿನ ಬಗ್ಗೆ ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನಹರಿಸಿದ್ದು, ಇನ್ನೂ ಕೆಲವು ದಿನಗಳಲ್ಲಿ ಅವರು ಕೃಷ್ಣಪ್ಪ ಅವರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲಿಯವರೆಗೆ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಕೃಷ್ಣಪ್ಪ ನಡೆದುಕೊಂಡಿರುವುದು ಸಂತೋಷದ ಸಂಗತಿ ಎಂದರು.

ಹಿರಿಯ ನಾಯಕರಿಗೆ ಅನ್ಯಾಯವಾಗಿದೆ ಎಂಬ ಭಾವನೆ ಮೂಡಿದಾಗ ಬೇಸರವಾಗುವುದು ಸಹಜ. ಆದರೆ ಈಗ ಅವರು ಸಮಾಧಾನವಾಗಿದ್ದೇನೆ ಎಂದು ಹೇಳಿರುವುದು ಸಂತೋಷ ತಂದಿದೆ ಎಂದು ಹರಿಪ್ರಸಾದ್ ಹೇಳಿದರು.

ಕೃಷ್ಣಪ್ಪ ಅವರಿಗೆ ಯಾವ ಜವಾಬ್ದಾರಿ ಅಥವಾ ಸ್ಥಾನ ನೀಡಬೇಕು ಎಂಬುದನ್ನು ರಾಹುಲ್ ಗಾಂಧಿಯವರೇ ತೀರ್ಮಾನಿಸಲಿದ್ದಾರೆ. ಅವರು ನೇರವಾಗಿ ಮಾತುಕತೆ ನಡೆಸಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ರಾಜಕೀಯದಲ್ಲಿ ಯಾವಾಗ ಏನು ನಡೆಯುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. “Politics is a game of possibilities” ಎಂದು ಹೇಳಿದ ಹರಿಪ್ರಸಾದ್, ಸಾಧ್ಯತೆಗಳು ಇರುವವರೆಗೆ ಎಲ್ಲವೂ ಸಾಧ್ಯ. ಆದ್ದರಿಂದ ಯಾವಾಗಲೂ ಸಕಾರಾತ್ಮಕ ಮನೋಭಾವದಿಂದ ಇರಬೇಕು, ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

You cannot copy content of this page

Exit mobile version