Home ರಾಜ್ಯ ಟಿ. ನರಸಿಪುರ ಗಣೇಶೋತ್ಸವ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

ಟಿ. ನರಸಿಪುರ ಗಣೇಶೋತ್ಸವ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

0

ಮೈಸೂರು: ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಹಾಗೂ ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಟಿ. ನರಸೀಪುರ ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯ ವೇಳೆ ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಮುಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೈಯಂಬಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕೆ.ಟಿ. ಮಧು ಅವರು ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಸಾರ್ವಜನಿಕ ಶಾಂತಿ ಕದಡುವ ದುರುದ್ದೇಶ (ಬಿಎನ್‌ಎಸ್ ಸೆಕ್ಷನ್ 352), ಕ್ರಿಮಿನಲ್ ಮಾನನಷ್ಟ (ಬಿಎನ್‌ಎಸ್ ಸೆಕ್ಷನ್ 356) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಅವರ ಜಾತಿಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ ಪ್ರತಾಪ್ ಸಿಂಹ, “ನಿಮ್ಮ ಜಾತಿಯ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿದ್ದೀರಿ, ಆತ ಕಳಪೆ ವ್ಯಕ್ತಿತ್ವದ ಇನ್ಸ್‌ಪೆಕ್ಟರ್” ಎಂದು ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ, ದಲಿತ ಸಂಘಟನೆಯ ಮುಖಂಡರನ್ನು ಉದ್ದೇಶಿಸಿ, “ಕೇವಲ ನೀಲಿ ಶಾಲು ಹಾಕಿಕೊಂಡು ಹೊಟ್ಟೆಪಾಡಿಗಾಗಿ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಬಗ್ಗೆ ಏನೂ ತಿಳಿದಿಲ್ಲ” ಎಂದು ಅವಹೇಳನ ಮಾಡಿದ್ದಲ್ಲದೆ, ಹಣ ಮತ್ತು ವೈಯಕ್ತಿಕ ಲಾಭಕ್ಕಾಗಿ ಹೋರಾಟ ನಡೆಸುತ್ತಾರೆ ಎಂದು ಸುಳ್ಳು ಆರೋಪ ಹೊರಿಸಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗೂಂಡಾ ಕಾಯ್ದೆ ದಾಖಲಿಸಿ, ಗಡಿಪಾರು ಮಾಡಲು ಆಗ್ರಹ

ಮತ್ತೊಂದೆಡೆ, ಗಣೇಶ ಮೆರವಣಿಗೆಯ ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತಲು ಯತ್ನಿಸುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಗೂಂಡಾ ಕಾಯ್ದೆ ಜಡಿದು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಹಾಸನದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಮಿತಿಯ ಮುಖಂಡರು, ಪ್ರತಾಪ್ ಸಿಂಹ ನಿರಂತರವಾಗಿ ನಿರ್ದಿಷ್ಟ ಜಾತಿ ಹಾಗೂ ಧರ್ಮವನ್ನು ಗುರಿಯಾಗಿಸಿ ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ಕಿಡಿಕಾರಿದರು. ದಲಿತ ಸಂಘರ್ಷ ಸಮಿತಿಯ 52 ವರ್ಷಗಳ ಸಂವಿಧಾನಬದ್ಧ ಹೋರಾಟವನ್ನು ಮತ್ತು ಹೋರಾಟಗಾರರು ಧರಿಸುವ ನೀಲಿ ಶಾಲನ್ನು ವ್ಯಂಗ್ಯವಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಕಳೆದ ಐದಾರು ವರ್ಷಗಳಲ್ಲಿ ಪ್ರತಾಪ್ ಸಿಂಹ ವಿರುದ್ಧ ದ್ವೇಷ ಭಾಷಣ ಸೇರಿದಂತೆ ಸುಮಾರು 22 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸಮಾಜದ ಶಾಂತಿ-ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

You cannot copy content of this page

Exit mobile version