ಲಕ್ನೋ: ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯಲ್ಲಿ ಪತ್ನಿ, ಪುತ್ರ ಹಾಗೂ ಪೂಜೆಗೆಂದು ಬಂದಿದ್ದ ಇಬ್ಬರು ಅರ್ಚಕರನ್ನು ಗುಂಡಿಕ್ಕಿ ಕೊಂದ ಆರೋಪಿ ಅರವಿಂದ್ ಸಿಂಗ್, ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.
ಆಜಂಗಢ ಜಿಲ್ಲೆಯ ಅಹ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಂಭೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು ಎರಡು ವರ್ಷಗಳ ಹಿಂದೆ ಗುಂಡೇಟಿಗೆ ಬಲಿಯಾಗಿದ್ದ ಕುಟುಂಬದ ಸದಸ್ಯ ಗುಡ್ಡು ಸಿಂಗ್ ಅವರ ಆತ್ಮಶಾಂತಿಗಾಗಿ ಮನೆಯಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಪೂಜೆ ನೆರವೇರಿಸಲು ಮಹೇಂದ್ರ ಪಾಠಕ್ ಮತ್ತು ಅಖಿಲೇಶ್ ಮಿಶ್ರಾ ಎಂಬ ಇಬ್ಬರು ಅರ್ಚಕರು ಮನೆಗೆ ಆಗಮಿಸಿದ್ದರು. ಆದರೆ, ಮನೆಯಲ್ಲಿ ಪೂಜೆ ಮಾಡುವುದನ್ನು ಅರವಿಂದ್ ಸಿಂಗ್ ತೀವ್ರವಾಗಿ ವಿರೋಧಿಸಿದ್ದನು. ಆತನ ವಿರೋಧದ ನಡುವೆಯೂ ಕುಟುಂಬಸ್ಥರು ಪೂಜೆ ಮುಂದುವರಿಸಿದ್ದರಿಂದ ತೀವ್ರ ಕೋಪಗೊಂಡ ಅರವಿಂದ್ ಸಿಂಗ್, ತನ್ನ ಪತ್ನಿ ಬಬಿತಾ ಸಿಂಗ್ ಹಾಗೂ ಇಬ್ಬರು ಅರ್ಚಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದನು.
ಹತ್ಯೆಯ ಬಳಿಕ ಆರೋಪಿಯು ತನ್ನ ಮಕ್ಕಳನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿ ಒತ್ತೆಯಿರಿಸಿಕೊಂಡಿದ್ದನು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನಿಗೆ ಶರಣಾಗುವಂತೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಬಿಡುವಂತೆ ಎಚ್ಚರಿಕೆ ನೀಡಿದರು. ಕುಟುಂಬಸ್ಥರ ಮೂಲಕವೂ ಸಂಧಾನಕ್ಕೆ ಯತ್ನಿಸಲಾಯಿತಾದರೂ, ಆರೋಪಿಯು ಪೊಲೀಸರು ಮತ್ತು ಸಂಬಂಧಿಕರ ಮೇಲೆ ಗುಂಡು ಹಾರಿಸುವುದಾಗಿ ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಈ ನಡುವೆ ಕೋಣೆಯ ಒಳಗಿದ್ದ ತನ್ನ ಮಗನ ಮೇಲೆಯೂ ಆತ ಗುಂಡು ಹಾರಿಸಿದನು.
ಮಗನ ಮೇಲೆ ಗುಂಡು ಹಾರಿಸಿದ ಶಬ್ದ ಕೇಳಿ ಪೊಲೀಸರು ತಕ್ಷಣವೇ ಕೋಣೆಯೊಳಗೆ ನುಗ್ಗಿದಾಗ, ಅರವಿಂದ್ ಸಿಂಗ್ ಪೊಲೀಸರ ಮೇಲೆಯೂ ನೇರ ಗುಂಡಿನ ದಾಳಿ ನಡೆಸಿದನು. ಎಚ್ಚರಿಕೆ ನೀಡಿದರೂ ಗುಂಡು ಹಾರಿಸುವುದನ್ನು ಮುಂದುವರಿಸಿದಾಗ, ಪೊಲೀಸರು ಆತ್ಮರಕ್ಷಣೆ ಹಾಗೂ ಮಕ್ಕಳ ಜೀವ ಉಳಿಸುವ ಉದ್ದೇಶದಿಂದ ಪ್ರತಿದಾಳಿ ನಡೆಸಿದರು. ಪೊಲೀಸರ ಎನ್‌ಕೌಂಟರ್‌ನಲ್ಲಿ ತೀವ್ರವಾಗಿ ಗಾಯಗೊಂಡ ಅರವಿಂದ್ ಸಿಂಗ್ ಹಾಗೂ ಆತನ ಮಗನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇಬ್ಬರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಮುಂದುವರಿಸಲಾಗಿದ್ದು, ಸಮಗ್ರ ತನಿಖೆ ಪ್ರಗತಿಯಲ್ಲಿದೆ ಎಂದು ಆಜಂಗಢ ಎಸ್‌ಎಸ್‌ಪಿ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
