ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನು ಅನುಸರಿಸಲು ವಿಫಲವಾಗಿದ್ದೇ ರಾಜ್ಯದಲ್ಲಿ ಬಿಜೆಪಿ 66 ಸ್ಥಾನಗಳಿಗೆ ಕುಸಿಯಲು ಕಾರಣವಾಯಿತು. ಒಂದು ವೇಳೆ ರಾಜ್ಯ ಘಟಕ ಮೋದಿ ತೋರಿಸಿದ ಹಾದಿಯಲ್ಲಿ ನಡೆದಿದ್ದರೆ, ಸಿದ್ದರಾಮಯ್ಯನವರು ಇನ್ನೂ 20 ವರ್ಷ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯಪಾಲರ ಭಾಷಣವನ್ನು ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ಟೀಕೆ ಮಾಡಲು ಬಳಸಿಕೊಂಡಿದೆ ಎಂದು ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಮೇಲೆ ಅತಿಯಾದ ಗಮನ ಹರಿಸಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕಡೆಗಣಿಸಲ್ಪಟ್ಟಿವೆ. ಅಲ್ಲದೆ, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಯುಪಿಎ ಆಡಳಿತಕ್ಕಿಂತ ಎನ್‌ಡಿಎ ಅವಧಿಯಲ್ಲೇ ಕರ್ನಾಟಕಕ್ಕೆ ಹೆಚ್ಚು ಅನುದಾನ ಬರುತ್ತಿದೆ ಎಂದು ಸಮರ್ಥಿಸಿಕೊಂಡರು.
ಗುತ್ತಿಗೆದಾರರ ಸಮಸ್ಯೆಯನ್ನು ಪ್ರಸ್ತಾಪಿಸಿದ ಯತ್ನಾಳ್, ನೀರಾವರಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು 38,000 ಕೋಟಿ ರೂ. ಬಾಕಿ ಉಳಿದಿದ್ದು, ಅವರು ಸಾಲದ ಸುಳಿಗೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಮತ್ತು ಸರ್ಕಾರ ಬದಲಾದರೂ ‘ಕಮಿಷನ್’ ದಂಧೆ ಮಾತ್ರ ನಿಂತಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.
