ಬೆಂಗಳೂರು: ರಾಜ್ಯಕ್ಕೆ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗದ ಮುಂದೆ ಮಹತ್ವದ ಹಾಗೂ ಸಂವಿಧಾನಾತ್ಮಕ ಬೇಡಿಕೆಗಳನ್ನು ಮಂಡಿಸಿದ್ದಾರೆ. ರಾಜ್ಯಗಳ ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಬೇಕು ಮತ್ತು ಸೆಸ್ ಹಾಗೂ ಸರ್‌ಚಾರ್ಜ್‌ಗಳಿಗೆ ಮಿತಿ ಹೇರಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳು, 15ನೇ ಹಣಕಾಸು ಆಯೋಗದ ಶಿಫಾರಸುಗಳಿಂದ ರಾಜ್ಯಕ್ಕೆ ಆದ ನಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ, “ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ” ಎಂಬ ಅಭಿಯಾನಕ್ಕೂ ಕರೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಬೇಡಿಕೆಗಳು ಮತ್ತು ಆಕ್ಷೇಪಣೆಗಳು ಇಲ್ಲಿವೆ:
- 80 ಸಾವಿರ ಕೋಟಿ ರೂ. ನಷ್ಟ: 14ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ. 4.71ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ, 15ನೇ ಆಯೋಗವು ಇದನ್ನು ಶೇ. 3.64ಕ್ಕೆ ಇಳಿಸಿತು. ಇದರಿಂದ ಕರ್ನಾಟಕಕ್ಕೆ ನೇರವಾಗಿ ಸುಮಾರು 80,000 ಕೋಟಿ ರೂ.ಗಳಷ್ಟು ಬೃಹತ್ ನಷ್ಟವಾಗಿದೆ. 16ನೇ ಆಯೋಗವು ಕನಿಷ್ಠ ಪಕ್ಷ ಹಳೆಯ ಮಾನದಂಡವಾದ ಶೇ. 4.71ರಷ್ಟು ಪಾಲನ್ನು ಮರುಸ್ಥಾಪಿಸಬೇಕು ಎಂದು ರಾಜ್ಯ ಒತ್ತಾಯಿಸಿದೆ.
- ಆದಾಯ ದೂರ (Income Distance) ಸೂತ್ರಕ್ಕೆ ವಿರೋಧ: ರಾಜ್ಯದ ತಲಾ ಆದಾಯ ಹೆಚ್ಚಿದೆ ಎಂಬ ಕಾರಣಕ್ಕೆ ಅನುದಾನ ಕಡಿತಗೊಳಿಸುವುದು ಸರಿಯಲ್ಲ. ಶ್ರೀಮಂತರು ಮತ್ತು ಬಡವರ ಆದಾಯವನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ಹೀಗಾಗಿ ‘ಆದಾಯ ದೂರ’ ಮಾನದಂಡದ ಪ್ರಾಮುಖ್ಯತೆಯನ್ನು ಶೇ. 45ರಿಂದ ಶೇ. 25ಕ್ಕೆ ಇಳಿಸಬೇಕು.
- ಜನಸಂಖ್ಯಾ ಮಾನದಂಡ: ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ಶಿಕ್ಷೆ ನೀಡುವಂತಾಗಬಾರದು. 2011ರ ಜನಸಂಖ್ಯೆಯ ಬದಲಾಗಿ 1971ರ ಜನಸಂಖ್ಯೆಯನ್ನೇ ಮಾನದಂಡವಾಗಿ ಪರಿಗಣಿಸಬೇಕು.
- ಶೇ. 50ರಷ್ಟು ತೆರಿಗೆ ಪಾಲು: ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಈಗಿನ ಶೇ. 41ರಷ್ಟು ಪಾಲನ್ನು ಶೇ. 50ಕ್ಕೆ ಹೆಚ್ಚಿಸಬೇಕು. ಅಲ್ಲದೆ, ಕೇಂದ್ರದ ಆದಾಯದಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳ ಮೊತ್ತವನ್ನು ಶೇ. 5ಕ್ಕೆ ಸೀಮಿತಗೊಳಿಸಿ, ಉಳಿದ ಹಣವನ್ನು ರಾಜ್ಯಗಳಿಗೆ ಹಂಚಬೇಕು.
- ಬೆಂಗಳೂರಿಗೆ ವಿಶೇಷ ಅನುದಾನ: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 1.15 ಲಕ್ಷ ಕೋಟಿ ರೂ. ಹೂಡಿಕೆ ಅಗತ್ಯವಿದ್ದು, ಆಯೋಗವು ಕನಿಷ್ಠ 27,793 ಕೋಟಿ ರೂ. ಅನುದಾನ ನೀಡಲು ಶಿಫಾರಸು ಮಾಡಬೇಕು.
- ಕಲ್ಯಾಣ ಕರ್ನಾಟಕಕ್ಕೆ ಮ್ಯಾಚಿಂಗ್ ಗ್ರ್ಯಾಂಟ್: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 25,000 ಕೋಟಿ ರೂ. ಮೀಸಲಿಟ್ಟಿದ್ದು, ಕೇಂದ್ರವೂ ಇದಕ್ಕೆ ಸಮನಾದ (Matching Grant) ಮೊತ್ತವನ್ನು ನೀಡಬೇಕು. ಜೊತೆಗೆ 10,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡಬೇಕು.
- ಪ್ರಾಕೃತಿಕ ವಿಕೋಪ ಪರಿಹಾರ: ರಾಜ್ಯವು 2018-24ರ ಅವಧಿಯಲ್ಲಿ 1.56 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ. ಪ್ರಸ್ತುತ ಇರುವ ‘ರಿಸ್ಕ್ ಫ್ಯಾಕ್ಟರ್’ ಅಂಕವನ್ನು 5ರಿಂದ 15ಕ್ಕೆ ಏರಿಸುವ ಮೂಲಕ ವೈಜ್ಞಾನಿಕವಾಗಿ ಪರಿಹಾರ ಹಂಚಿಕೆ ಮಾಡಬೇಕು.
- ಪಶ್ಚಿಮ ಘಟ್ಟ ಮತ್ತು ಕರಾವಳಿ: ಪರಿಸರ ಸೂಕ್ಷ್ಮ ವಲಯಗಳಾದ ಮಲೆನಾಡು ಹಾಗೂ ಕರಾವಳಿ ಭಾಗದ ರೈತರ ಹಿತರಕ್ಷಣೆ ಮತ್ತು ಒಣ ಭೂಮಿ ಬೇಸಾಯಕ್ಕೆ ವಿಶೇಷ ಅನುದಾನ ಒದಗಿಸಬೇಕು.
ರಾಜ್ಯದ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುವ ಈ ಹೋರಾಟದಲ್ಲಿ ಕನ್ನಡಿಗರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
