Home ದೇಶ ಯುಪಿಯಲ್ಲಿ ಬಿಜೆಪಿ vs ಬಿಜೆಪಿ: ನೀರಿನ ಸಮಸ್ಯೆ ಬಗೆಹರಿಸದ ಸಚಿವನನ್ನೇ ತಡೆದು ನಿಲ್ಲಿಸಿದ ಸ್ವಪಕ್ಷದ ಶಾಸಕ!

ಯುಪಿಯಲ್ಲಿ ಬಿಜೆಪಿ vs ಬಿಜೆಪಿ: ನೀರಿನ ಸಮಸ್ಯೆ ಬಗೆಹರಿಸದ ಸಚಿವನನ್ನೇ ತಡೆದು ನಿಲ್ಲಿಸಿದ ಸ್ವಪಕ್ಷದ ಶಾಸಕ!

0

ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದೊಳಗೇ ನಡೆದ ವಿಚಿತ್ರ ಘಟನೆಯೊಂದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಹೋಬಾ ಜಿಲ್ಲೆಯಲ್ಲಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರೂ ಸ್ಪಂದಿಸದೆ ನಿರ್ಲಕ್ಷ್ಯ ತೋರಿ ಹೊರಟಿದ್ದ ಸ್ವಪಕ್ಷದ ಜಲಶಕ್ತಿ ಸಚಿವರನ್ನೇ, ಬಿಜೆಪಿ ಶಾಸಕರೊಬ್ಬರು ತಡೆದು ನಿಲ್ಲಿಸಿ ನಿರ್ಬಂಧಿಸಿದ ಪ್ರಸಂಗ ವರದಿಯಾಗಿದೆ.

ಘಟನೆಯ ವಿವರ ಹೀಗಿದೆ: ಜಲಶಕ್ತಿ ಸಚಿವ ಸ್ವತಂತ್ರದೇವ್ ಸಿಂಗ್ ಅವರು ಕಾರ್ಯಕ್ರಮವೊಂದಕ್ಕಾಗಿ ಮಹೋಬಾ ಜಿಲ್ಲೆಗೆ ಭೇಟಿ ನೀಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ, ಸ್ಥಳೀಯ ಚರ್ಖಾರಿ ಕ್ಷೇತ್ರದ ಶಾಸಕ ಬ್ರಿಜ್ ಭೂಷಣ್ ಸಿಂಗ್ ಅವರು ಸಚಿವರ ಬಳಿ ಬಂದು, ‘ಜಲ ಜೀವನ್ ಮಿಷನ್’ ಅಡಿಯಲ್ಲಿ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಇನ್ನೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ದೂರಿದರು. ಗ್ರಾಮದ ಸರಪಂಚ್‌ಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು. ಆದರೆ, ಸಚಿವರು ಇದನ್ನು ಲಕ್ಷಿಸದೆ ಹೊರಡಲು ಪ್ರಯತ್ನಿಸಿದಾಗ, ಕೆಂಡಾಮಂಡಲರಾದ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಸೇರಿ ಸಚಿವರನ್ನು ತಡೆದರು. ಈ ವೇಳೆ ಇಬ್ಬರ ಅನುಯಾಯಿಗಳ ನಡುವೆ ತಳ್ಳಾಟ-ನೂಕುನುಗ್ಗಲು ಉಂಟಾಗಿ, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಬಳಿಕ, ಶಾಸಕರ ತಂಡವು ಸಚಿವರನ್ನು ಜಿಲ್ಲಾಧಿಕಾರಿ ಕಚೇರಿಗೆ (ಕಲೆಕ್ಟರೇಟ್) ಕರೆದೊಯ್ದು, ಅಲ್ಲಿ ಕೆಲಹೊತ್ತು ಮಾತುಕತೆ ನಡೆಸಿತು. ಅಂತಿಮವಾಗಿ, 20 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ ಬಳಿಕ ವಿವಾದ ಸುಖಾಂತ್ಯವಾಯಿತು. ಈ ಕುರಿತು ಮಾತನಾಡಿದ ಶಾಸಕ ಬ್ರಿಜ್ ಭೂಷಣ್, “ರಾಜ್ಯದಲ್ಲಿ ರಸ್ತೆಗಳು ಸರಿಯಿಲ್ಲ, ನೀರಿನ ಪೈಪ್‌ಗಳು ಸೋರುತ್ತಿವೆ ಹಾಗೂ ನಮಾಮಿ ಗಂಗೆ ಯೋಜನೆ ಮೂಲೆಗುಂಪಾಗಿದೆ,” ಎಂದು ಸ್ವಂತ ಸರ್ಕಾರದ ವಿರುದ್ಧವೇ ಆಕ್ರೋಶ ಹೊರಹಾಕಿದರು. ಇದೇ ವೇಳೆ, ಈ ಘಟನೆಯನ್ನು ಪ್ರಸ್ತಾಪಿಸಿರುವ ನೆಟ್ಟಿಗರು, “ಡಬಲ್ ಇಂಜಿನ್ ಸರ್ಕಾರದಿಂದ ಜನರಿಗೆ ಡಬಲ್ ಕಷ್ಟ ತಪ್ಪಿದ್ದಲ್ಲ,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

You cannot copy content of this page

Exit mobile version