ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ, ಋತುಸ್ರಾವದ ನೈರ್ಮಲ್ಯದ (Menstrual Hygiene) ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಋತುಸ್ರಾವದ ನೈರ್ಮಲ್ಯವು ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳ ಅಡಿಯಲ್ಲಿಯೇ ಬರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಬೇಕು ಮತ್ತು ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇರಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠವು ಈ ಆದೇಶ ನೀಡಿದೆ.
“ಸಂವಿಧಾನದ 21ನೇ ವಿಧಿಯ ಪ್ರಕಾರ ಋತುಸ್ರಾವದ ನೈರ್ಮಲ್ಯವು ಪ್ರತಿಯೊಬ್ಬರ ಮೂಲಭೂತ ಹಕ್ಕು. ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಬೇಕು. ಇದನ್ನು ಕೇವಲ ದಾನ ಅಥವಾ ದಯೆ ಎಂದು ಭಾವಿಸಬಾರದು, ಅಥವಾ ಕೇವಲ ಒಂದು ನೀತಿಯಾಗಿ ಜಾರಿಗೊಳಿಸಬಾರದು. ಬದಲಿಗೆ ಇದೊಂದು ಸಾಂವಿಧಾನಿಕ ಹಕ್ಕು ಎಂದು ಪರಿಗಣಿಸಬೇಕು,” ಎಂದು ಕೋರ್ಟ್ ಹೇಳಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿರಬೇಕು. ಈ ನಿಯಮ ಪಾಲಿಸದ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಬಹುದು. ವಿದ್ಯಾರ್ಥಿನಿಯರ ಹಕ್ಕುಗಳನ್ನು ಕಡೆಗಣಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದೆ.
ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವಲ್ಲಿ ವಿಫಲವಾದರೆ ಅದರ ಹೊಣೆ ಸರ್ಕಾರವೇ ಹೊರಬೇಕಾಗುತ್ತದೆ. ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲದಿದ್ದರೆ ಬಾಲಕಿಯರ ಆರೋಗ್ಯ ಹದಗೆಡುತ್ತದೆ. ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳಲು ವಿದ್ಯಾರ್ಥಿನಿಯರು ಸಂಕೋಚ ಪಡುವಂತಿರಬಾರದು ಮತ್ತು ಶಿಕ್ಷಕರಿಗೆ ಸಂಪನ್ಮೂಲದ ಕೊರತೆ ಇರಬಾರದು. ಪರಿಣಾಮಕಾರಿ ಮತ್ತು ಗುಣಮಟ್ಟದ ಋತುಸ್ರಾವದ ನೈರ್ಮಲ್ಯವನ್ನು ಪಾಲಿಸುವುದರಿಂದ ಹೆಣ್ಣುಮಕ್ಕಳ ಆರೋಗ್ಯ ಸುಧಾರಿಸುವುದರ ಜೊತೆಗೆ ಅವರ ಉತ್ತಮ ಶಿಕ್ಷಣಕ್ಕೂ ಇದು ದಾರಿಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
