ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಚಿರಿಯಂಕಂಡತ್ ಜೋಸೆಫ್ ರಾಯ್ (ಸಿ.ಜೆ. ರಾಯ್) ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ನಂತರವೂ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರಿನ ಕಚೇರಿಯಲ್ಲಿ ಇಲಾಖೆಯ ಹೆಚ್ಚುವರಿ ಆಯುಕ್ತ ಕೃಷ್ಣ ಪ್ರಸಾದ್ ನೇತೃತ್ವದಲ್ಲಿ ನಡೆದ ದಾಳಿ ಮತ್ತು ವಿಚಾರಣೆಯಿಂದ ರಾಯ್ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. 2025ರ ಡಿಸೆಂಬರ್‌ನಲ್ಲಿ ನಡೆದಿದ್ದ ದಾಳಿಯ ಮುಂದುವರಿದ ಭಾಗವಾಗಿ, ಕಳೆದ ಮೂರು ದಿನಗಳಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಹಿಂದೆಯೇ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಒದಗಿಸಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನೆಯ ವಿವರ: ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಯ್ ಅವರನ್ನು ಬೆಂಗಳೂರಿನ ಕಚೇರಿಗೆ ಕರೆಯಲಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ, ಕೆಲವು ದಾಖಲೆಗಳನ್ನು ಹಾಜರುಪಡಿಸಲು ಅಧಿಕಾರಿಗಳು ಕೇಳಿದರು. ದಾಖಲೆ ತರುವ ನೆಪದಲ್ಲಿ ಎದ್ದ ರಾಯ್, ತಮ್ಮಲ್ಲಿದ್ದ ಬಂದೂಕಿನಿಂದ ಐಟಿ ಅಧಿಕಾರಿಗಳ ಮುಂದೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೂಡಲೇ ಐಟಿ ಅಧಿಕಾರಿಗಳೇ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ದಾಖಲಿಸಿದರಾದರೂ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶನಿವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
