ಹಾಸನ: ಇತ್ತೀಚೆಗೆ ಬಿಡುಗಡೆಯಾಗಿರುವ ಕನ್ನಡ ಚಲನಚಿತ್ರ “ಲ್ಯಾಂಡ್ ಲಾರ್ಡ್” ತಳ ಸಮುದಾಯಗಳ ನೋವು, ಸಂಕಟ ಹಾಗೂ ಪ್ರತಿರೋಧವನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿರುವ ಸಾಮಾಜಿಕ ಬದ್ಧತೆಯ ಚಲನಚಿತ್ರವಾಗಿದ್ದು, ಇಂತಹ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಸಿನಿಮಾ ನಿರ್ಮಿಸಿರುವ ತಂಡದ ಧೈರ್ಯವನ್ನು ಮೆಚ್ಚಬೇಕಾಗಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷರಾದ ಕೃಷ್ಣದಾಸ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವನ್ನು ಯಾವುದೋ ಒಂದು ಜಾತಿಗೆ ಸೀಮಿತಗೊಳಿಸದೆ, ಶೋಷಿತ ವರ್ಗಗಳ ಒಟ್ಟಾರೆ ಬದುಕನ್ನು ಕಥೆಯಾಗಿ ನಿರೂಪಿಸಿರುವುದು ವಿಶೇಷವಾಗಿದೆ ಎಂದರು. ಸ್ವಾತಂತ್ರ್ಯ ಲಭಿಸಿ 79 ವರ್ಷಗಳು, ಸಂವಿಧಾನ ಜಾರಿಯಾಗಿ 76 ವರ್ಷಗಳು ಕಳೆದರೂ ತಳ ಸಮುದಾಯಗಳ ಬದುಕಿನಲ್ಲಿ ದೌರ್ಜನ್ಯ, ಹಲ್ಲೆ, ಕೊಲೆಗಳು ಮುಂದುವರಿಯುತ್ತಲೇ ಇರುವುದನ್ನು ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ. ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಘಟನೆ ಜಾತಿಯ ಕ್ರೌರ್ಯಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು. ಚಲನಚಿತ್ರವು ಹಿಂಸೆಯಿಂದ ಅಹಿಂಸೆ ಕಡೆಗೆ ಸಮಾಜವನ್ನು ಕರೆದೊಯ್ಯುವ ಸಂದೇಶವನ್ನು ನೀಡುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ಒದಗಿಸಿರುವ ಸಮಾನ ಹಕ್ಕುಗಳು ಹಾಗೂ ಅವಕಾಶಗಳು ಎಲ್ಲರಿಗೂ ದೊರಕಬೇಕು ಎಂಬ ಆಶಯವನ್ನು ಈ ಚಿತ್ರ ಬಲವಾಗಿ ಪ್ರತಿಪಾದಿಸುತ್ತದೆ. ಜೊತೆಗೆ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರಿಗೆ ಇನ್ನೂ ಸಮಾನ ಹಕ್ಕುಗಳು ದೊರಕದಿರುವ ವಾಸ್ತವವನ್ನು ಚಿತ್ರಣಗೊಳಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ “ಶಿಕ್ಷಣವೇ ಶೋಷಿತ ವರ್ಗ ಹಾಗೂ ಮಹಿಳೆಯರ ವಿಮೋಚನೆಗೆ ಏಕೈಕ ದಾರಿ” ಎಂಬ ತತ್ವವನ್ನು ವಿಭಿನ್ನವಾಗಿ ನಿರೂಪಿಸಲಾಗಿದೆ ಎಂದು ಹೇಳಿದರು.
ರಾಚಯ್ಯನ ಪಾತ್ರದಲ್ಲಿ ನಾಯಕ ನಟ ದುನಿಯಾ ವಿಜಯ್ ಅವರ ಮನೋಜ್ಞ ಅಭಿನಯ, ಖಳನಟನಾಗಿ ರಾಜ್ ಬಿ. ಶೆಟ್ಟಿ ಅವರ ಪ್ರತಿಭೆ, ಉಮಾಶ್ರೀ ಅವರ ಮಾಂತ್ರಿಕ ಅಭಿನಯ, ನಿರ್ದೇಶಕ ಜಡೇಶ್ ಕೆ. ಹಂಪಿ ಅವರ ಸೂಕ್ಷ್ಮ ನಿರ್ದೇಶನ ಹಾಗೂ ಚಿತ್ರದಲ್ಲಿನ ಎಲ್ಲಾ ಪಾತ್ರಧಾರಿಗಳ ಅಭಿನಯವನ್ನು ಸಂಘಟನೆ ಶ್ಲಾಘಿಸಿದೆ ಎಂದರು.
ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಈ ಚಲನಚಿತ್ರವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದರು. ಜೊತೆಗೆ “ಲ್ಯಾಂಡ್ ಲಾರ್ಡ್” ಚಿತ್ರಕ್ಕೆ ಶೇ.100 ರಷ್ಟು ತೆರಿಗೆ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದಲ್ಲದೆ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ವತಿಯಿಂದ ಜಿಲ್ಲಾದ್ಯಂತ ಶೀಘ್ರದಲ್ಲೇ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಹಾಸನ ಜಿಲ್ಲೆ ಅಧ್ಯಕ್ಷ ಸಣ್ಣೇಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಸನದ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಕೃಷ್ಣ ಹಾಸ್, ಜಾಗೃತ ಅಲೆಮಾರಿ ಸಮುದಾಯಗಳ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ವಿ. ಗೋವಿಂದರಾಜು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗುದ್ದೇನಹಳ್ಳಿ ರಂಗಸ್ವಾಮಿ, ನಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
