ಹಾಸನ: ನಗರದ ಹೃದಯ ಭಾಗದಲ್ಲಿ ಅರ್ಧಕ್ಕೆ ನಿಂತು ಈಗ ಮತ್ತೆ ಆರಂಭವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿವಿಲ್ ಕಾಮಗಾರಿಯನ್ನು ಇದೇ ವರ್ಷದ ಮಾರ್ಚ್ ಅಂತ್ಯಕ್ಕೆ ಪೂರ್ಣ ಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಹಾಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಅವರು ಉತ್ತರಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ 2018-19ನೇ ಸಾಲಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಆರಂಭ ಆಯಿತು. 2025 ಸೆ.22 ರಲ್ಲಿ ಸದರಿ ಕಾಮಗಾರಿ ಮೊತ್ತ 63.34 ಕೋಟಿ ರೂ.ಗಳಿಗೆ ಪರಿಷ್ಕೃತಗೊಂಡಿದೆ. ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. 2026 ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರಿದು 2025 ಡಿ.9 ರಂದು ಸದರಿ ಆಸ್ಪತೆ ಕಟ್ಟಡಕ್ಕೆ ಅಗತ್ಯವಿರುವ ಸರ್ವೀಸಸ್ಗಳನ್ನು ಅಳವಡಿಸುವ ಕಾಮಗಾರಿಯ 21 ಕೋಟಿ ರೂ.ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಉಳಿದಂತೆ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ, ಮೊದಲ ಹಂತದಲ್ಲಿ 150 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಡಿಯೋಲಜಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಯುರಾಲಜಿ, ಕಾರ್ಡಿಯೊಥೋರಾಸಿಕ್ ಸರ್ಜರಿ ವಿಭಾಗ ಮತ್ತು ಕ್ಯಾತ್ಲ್ಯಾಬ್ ಯೂನಿಟ್ ಆರಂಭಿಸಲು ಅಗತ್ಯವಿರುವ ಉಪಕರಣ ಸೇರಿ ಒಟ್ಟು 2392.95 ಲಕ್ಷ ರೂ.ಗಳ ಅಂದಾಜು ಮೊತ್ತಕ್ಕೆ 2025 ಡಿ.9 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದೇಶದಲ್ಲಿ ಕ್ಯಾತ್ಲ್ಯಾಬ್ ಕಾರ್ಡಿಯಾಕ್ ಯೂನಿಟ್ ಆರಂಭಿಸಲು ೯೪೨ ಲಕ್ಷಗಳಿಗೆ ಅನುಮೋದನೆಯಾಗಿದೆ ಹಾಗೂ ಆಸ್ಪತ್ರೆಗೆ ಅಗತ್ಯ ವಿರುವ ಹುದ್ದೆಗಳ ಸೃಜನೆ ಮಾಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅವರು ವಿವರಣೆ ನೀಡಿದ್ದಾರೆ. ಜನಸಾಮಾನ್ಯರ ಚಿಕಿತ್ಸೆಗಾಗಿ ಸದರಿ ಆಸ್ಪತ್ರೆಯನ್ನು ಯಾವಾಗಿನಿಂದ ಕಾರ್ಯಾರಂಭ ಮಾಡುವಿರಿ ಎಂಬ ಶಾಸಕರ ಮತ್ತೊಂದು ಪ್ರಶ್ನೆಗೆ, ಅಗತ್ಯವಿರುವ ಸರ್ವೀಸಸ್ಗಳು, ವೈದ್ಯಕೀಯ ಉಪಕರಣಗಳನ್ನು ಅಳವಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಆಸ್ಪತ್ರೆಗೆ ಅಗತ್ಯವಿರುವ ವಿವಿಧ ಹುದ್ದೆಗಳನ್ನು ಸೃಜನೆ ಮಾಡಿದ ನಂತರ ಆದಷ್ಟು ಶೀಘ್ರವೇ ಕಾರ್ಯಾರಂಭ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
