ಹಾಸನ: ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನ ಒತ್ತುವರಿ ವಿಚಾರವಾಗಿ ಖ್ಯಾತ ಚಿತ್ರ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ನಿವೇಶನ ಜಿಪಿಎ ಹೋಲ್ಡರ್ ದೇವರಾಜು ನಡುವಿನ ಜಟಾಪಟಿ ತೀವ್ರಗೊಂಡಿದೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿವೇಶನದಲ್ಲಿ ಅಳವಡಿಸಲಾಗಿದ್ದ ಕೋರ್ಟ್ ಆದೇಶದ ಬೋರ್ಡ್ ಅನ್ನು ಕಿತ್ತು ಹಾಕಿದ ಹಿನ್ನೆಲೆಯಲ್ಲಿ ವಿವಾದ ಆರಂಭಗೊಂಡಿದೆ. ಈ ಬಗ್ಗೆ ಪ್ರಶ್ನಿಸಲು ತೆರಳಿದ ದೇವರಾಜು ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೇಶನ ಒತ್ತುವರಿ ತೆರವುಗೊಳಿಸುವ ಸಂಬಂಧ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ನಡುವೆ ಈ ಹಿಂದೆಯೂ ದೂರು–ಪ್ರತಿ ದೂರುಗಳು ದಾಖಲಾಗಿದ್ದವು. ಕೋರ್ಟ್ ಆದೇಶ ಪಾಲಿಸುವಂತೆ ಪೊಲೀಸರು ಇಬ್ಬರಿಗೂ ತಿಳಿ ಹೇಳಿದ್ದರು ಎನ್ನಲಾಗಿದೆ. ಆದರೆ ಗುರುವಾರ ಪುಷ್ಪಾ ಅವರ ಸಂಬಂಧಿಕರು ನಿವೇಶನದಲ್ಲಿ ಹಾಕಲಾಗಿದ್ದ ಕೋರ್ಟ್ ಆದೇಶದ ಬೋರ್ಡ್ ಅನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ದೇವರಾಜು ಅವರನ್ನು ಪುಷ್ಪಾ ಅವರ ಅಕ್ಕನ ಮಗ ದುರ್ಗಾ ಪ್ರಸಾದ್, ಪಕ್ಕದ ನಿವೇಶನ ಮಾಲೀಕ ಹಾಗೂ ಅಳತೆ ಮತ್ತು ತೂಕ ಮಾಪನ ಇನ್ಸ್‌ಪೆಕ್ಟರ್ ನಟರಾಜ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ದೇವರಾಜು ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಜನಮಿತ್ರ ಪತ್ರಿಕೆಯೊಂದಿಗೆ ಮಾತನಾಡಿದ ದೇವರಾಜು, “ಕೋರ್ಟ್ ಆದೇಶ ಪಾಲಿಸುವಂತೆ ಪೊಲೀಸರು ಸೂಚಿಸಿದ್ದರೂ ಪುಷ್ಪಾ ಅವರ ಸಂಬಂಧಿಕರು ಬೋರ್ಡ್ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ತೆರಳಿದಾಗ ನನ್ನ ಮೇಲೆ ಹಲ್ಲೆಗೆ ಮುಂದಾದರು. ಈ ಕುರಿತು ಗುರುವಾರ ರಾತ್ರಿ ದೂರು ನೀಡಿದ್ದೇನೆ,” ಎಂದು ಹೇಳಿದರು.
ಇನ್ನೂ ಶುಕ್ರವಾರ ಕೂಡ ನಿವೇಶನದಲ್ಲಿ ಗುಂಡಿ ತೋಡಿ ಕಾಮಗಾರಿ ನಡೆಸಲಾಗುತ್ತಿತ್ತು. ತಕ್ಷಣ 112ಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಕೋರ್ಟ್ ಆದೇಶ ಉಲ್ಲಂಘನೆ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತರಲಾಗುವುದು ಎಂದು ದೇವರಾಜು ತಿಳಿಸಿದ್ದಾರೆ.
