ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ಸಮೀಪ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಸ್ಟುಡಿಯೋವೊಂದರಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಥ್ ಆಚಾರ್ಯ (30) ಮೃತ ಯುವಕ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಅವರ ತಾಯಿ ಮನೆಯ ಹಿಂದಿರುವ ತೋಟಕ್ಕೆ ಕಟ್ಟಿಗೆ ತರಲು ತೆರಳಿದ ವೇಳೆ ಅಶ್ವಥ್ ಅವರ ಮೃತದೇಹ ಪತ್ತೆಯಾಗಿದೆ.
ಮಾಹಿತಿ ಪಡೆದ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಶ್ವಥ್ ಅವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅಶ್ವಥ್ ಮೃದು ಸ್ವಭಾವದ ಯುವಕನಾಗಿದ್ದು, ಯಾರೊಂದಿಗೂ ವೈಮನಸ್ಸು ಹೊಂದಿರಲಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಆನ್‌ಲೈನ್ ಫೈನಾನ್ಸ್ ಆ್ಯಪ್‌ಗಳ ಮೂಲಕ ಸಾಲ ಮಾಡಿಕೊಂಡಿದ್ದು, ಇದರಿಂದ ಮಾನಸಿಕ ಒತ್ತಡದಲ್ಲಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
