ಪ್ರಿಯಾಂಕ್‌ ಖರ್ಗೆ | ದಲಿತನಿಗೆ ಆರ್‌ಎಸ್‌ಎಸ್ ಬಗ್ಗೆ ಯಾಕೆ ಚಿಂತೆ? ಸಂಘವನ್ನು ಎದುರುಹಾಕಿಕೊಂಡ ಯಾರೂ ರಾಜಕೀಯವಾಗಿ ಉಳಿದಿಲ್ಲ: ಸಂಸದ ಜಿಗಜಿಣಗಿ ಧಮ್ಕಿ

ವಿಜಯಪುರ: ಆರ್‌ಎಸ್‌ಎಸ್ (RSS) ನೋಂದಣಿ ಮಾಡಿಸಬೇಕು ಎಂದು ಒತ್ತಾಯಿಸುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ, “ಒಬ್ಬ ದಲಿತ ಸಮುದಾಯದ ವ್ಯಕ್ತಿಗೆ ಆರ್‌ಎಸ್‌ಎಸ್ ಬಗ್ಗೆ ಯಾಕೆ ಇಷ್ಟೊಂದು ಕಾಳಜಿ ಅಥವಾ ಆತಂಕ?” ಎಂದು ನೇರವಾಗಿ ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಬುಧವಾರ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಜಿಗಜಿಣಗಿ, “ಈ ಹಿಂದೆ ಆರ್‌ಎಸ್‌ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡವರು ಯಾರೂ ರಾಜಕೀಯವಾಗಿ ಉಳಿದಿಲ್ಲ. ಪರಿಸ್ಥಿತಿ ಹೀಗಿರುವಾಗ ಒಬ್ಬ ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್ ಕುರಿತು ಯಾಕೆ ಇಷ್ಟೊಂದು ತಲೆನೋವು?” ಎಂದು ಪ್ರಶ್ನಿಸಿದರು.

“ಆರ್‌ಎಸ್‌ಎಸ್ ಸಂಘಟನೆಯನ್ನು ನೋಂದಣಿ ಮಾಡಿಸುವುದರಿಂದ ನೀವು ಸಾಧಿಸುವುದಾದರೂ ಏನಿದೆ? ಮೊದಲು ಸಾಮಾನ್ಯ ಜನರನ್ನು ಕೇಳಿ ಆರ್‌ಎಸ್‌ಎಸ್ ಎಂದರೇನು ಎಂದು ಅವರೇ ನಿಮಗೆ ತಿಳಿಹೇಳುತ್ತಾರೆ. ಇಂತಹ ಹೇಳಿಕೆಗಳನ್ನು ನೀಡುವುದು ಒಬ್ಬ ಗೃಹ ಸಚಿವರ ಕೆಲಸವಲ್ಲ,” ಎಂದು ಅವರು ಕಟುವಾಗಿ ಟೀಕಿಸಿದರು.

ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಜಿಗಜಿಣಗಿ, “ಅವರ ತಂದೆ (ಮಲ್ಲಿಕಾರ್ಜುನ ಖರ್ಗೆ) ಕಾಂಗ್ರೆಸ್ ಪಕ್ಷಕ್ಕಾಗಿ ದೀರ್ಘಕಾಲ ದುಡಿದಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಇವರಿಗೆ ಗೃಹ ಖಾತೆಯ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಇವರಿಗೆ ಕನಿಷ್ಠ ರಾಜಕೀಯ ಪ್ರಬುದ್ಧತೆಯಾಗಲಿ ಅಥವಾ ವಿವೇಚನೆಯಾಗಲಿ ಇಲ್ಲ. ಇಂತಹ ಅನಗತ್ಯ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಬದಲು, ಅವರು ತಮ್ಮ ಇಲಾಖೆಯ ಜವಾಬ್ದಾರಿಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಶ್ರಮಿಸಬೇಕು,” ಎಂದು ಲೇವಡಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು