ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ತಮ್ಮ ವೈಯಕ್ತಿಕ ಹಾಗೂ ಆರ್ಥಿಕ ತುರ್ತು ಪರಿಸ್ಥಿತಿಗಳಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಜುಲೈ 30 ರಂದು ನೀಡಿದ್ದ ರಾಜೀನಾಮೆಯನ್ನು ಪಕ್ಷವು ತಿರಸ್ಕರಿಸಿ, ಮರುಪರಿಶೀಲಿಸುವಂತೆ ಕೋರಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜೀನಾಮೆ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಾವು ಖಾಸಗಿ ವಲಯದಲ್ಲಿ ಮುಂದುವರಿಯುವುದಾಗಿ ಹೇಳಿರುವ ಪೂನಾವಾಲಾ, ಕೇವಲ ಪಕ್ಷದ ವ್ಯವಸ್ಥೆಯಿಂದ ಹೊರಬರುತ್ತಿದ್ದೇನೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಸಿದ್ಧಾಂತದಿಂದಲ್ಲ ಎಂದು ಉಲ್ಲೇಖಿಸಿದ್ದಾರೆ.
ಪಸ್ಮಾಂದ ಮುಸ್ಲಿಂ ಸಮುದಾಯಕ್ಕೆ ಸೇರಿದ ರಾಜಕೀಯ ಹಿನ್ನೆಲೆಯಿಲ್ಲದ ಯುವಕನಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬಿಜೆಪಿ ನೀಡಿದ ವೇದಿಕೆ ಮತ್ತು ಅವಕಾಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಹಿರಿಯ ನಾಯಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
