ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆ ಹಾಗೂ ಘರ್ಷಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಹಿನ್ನೆಲೆ, ಬಿಜೆಪಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಜನವರಿ 17ರಿಂದ ಫೆಬ್ರವರಿ 5ರವರೆಗೆ 20 ದಿನಗಳ ಪಾದಯಾತ್ರೆ ನಡೆಸುವ ಬಗ್ಗೆ ಬಹುತೇಕ ನಿರ್ಧಾರವಾಗಿದ್ದು, ಹೈಕಮಾಂಡ್‌ನ ಗ್ರೀನ್ ಸಿಗ್ನಲ್ ಮಾತ್ರ ಬಾಕಿಯಿದೆ.
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಒಂದೆರಡು ದಿನಗಳಲ್ಲಿ ಪಾದಯಾತ್ರೆ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ. ಇದು ಕೇವಲ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ಅಭಿಪ್ರಾಯವಲ್ಲ, ಪಕ್ಷದ ಬಹುತೇಕ ನಾಯಕರು ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ವರಿಷ್ಠರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಮೊದಲ ಹಂತದಲ್ಲಿ ಜನವರಿ 17ರಂದು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ತಿಳಿಸಿದರು.
ಪಾದಯಾತ್ರೆಗೆ ರೂಟ್ ಮ್ಯಾಪ್ ಸಿದ್ಧಗೊಂಡಿದ್ದು, ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬಳ್ಳಾರಿಯಿಂದ ಬೆಂಗಳೂರಿನ ಅರಮನೆ ಮೈದಾನವರೆಗೆ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ಪಾದಯಾತ್ರೆ ನಾಲ್ಕು ಜಿಲ್ಲೆಗಳ ಮೂಲಕ ಸಾಗಲಿದ್ದು, ಬಳ್ಳಾರಿಯಲ್ಲಿ 2 ದಿನ, ಚಿತ್ರದುರ್ಗದಲ್ಲಿ 10 ದಿನ, ತುಮಕೂರಿನಲ್ಲಿ 5 ದಿನ ಹಾಗೂ ಬೆಂಗಳೂರಿನಲ್ಲಿ 2 ದಿನ ಪಾದಯಾತ್ರೆ ನಡೆಯಲಿದೆ.
ಜನವರಿ 17ರೊಳಗೆ ಅನುಮತಿ ಸಿಕ್ಕಲ್ಲಿ ಅದೇ ದಿನದಿಂದಲೇ ಪಾದಯಾತ್ರೆ ಆರಂಭವಾಗುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್‌ನ ಅಂತಿಮ ಅನುಮತಿಯ ನಿರೀಕ್ಷೆಯಲ್ಲಿದೆ.
