ಬೆಂಗಳೂರು: ಇತ್ತ ಬಿಜೆಪಿ ತನ್ನ ಅತೃಪ್ತ ನಾಯಕರನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದರೆ, ಅತ್ತ ಅತೃಪ್ತರು ಪಕ್ಷದ ಉಚ್ಛಾಟಿತ ನಾಯಕ ಕೆ ಎಸ್ ಈಶ್ವರಪ್ಪ ಅವರ ಮನೆಯ ಬಾಗಿಲನ್ನು ತಟ್ಟುತ್ತಿದ್ದಾರೆ.
ಈಶ್ವರಪ್ಪ ಹಾಗೂ ಬಿಜೆಪಿಯ ಬಂಡಾಯದ ದನಿ ಯತ್ನಾಳ್ ಆರ್‌ಸಿಬಿ ಸಂಘಟನೆ ಕಟ್ಟುತ್ತಾರೆನ್ನುವ ಸುದ್ದಿ ಹೊರಬಿದ್ದ ನಂತರ ಈ ನಾಯಕರು ಈಶ್ವರಪ್ಪ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿದ್ಧರಾಮಯ್ಯ ವಿರುದ್ಧದ ತನಿಖೆಗೆ ಹಸಿರು ನಿಶಾನೆ ದೊರೆತಿರುವುದರ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿದ್ದರೆ, ಅವರ ವಿರೋಧಿ ಬಣ ಈಶ್ವರಪ್ಪನವರ ಮನೆಯಲ್ಲಿ ಕುಳಿತು ಅವರಿಗೆ ಖೆಡ್ಡಾ ತೋಡುವುದರಲ್ಲಿ ನಿರತವಾಗಿರುವುದು ಸದ್ಯದ ರಾಜಕೀಯದ ಬ್ರೇಕಿಂಗ್.
ಬೆಂಗಳೂರಿನ ಕುಮಾರ ಪಾರ್ಕ್ ನಲ್ಲಿರುವ ಕೆ.ಎಸ್. ಈಶ್ವರಪ್ಪ ನಿವಾಸದಲ್ಲಿ ಮಂಗಳವಾರ ರಾತ್ರಿ ಸಭೆ ನಡೆದಿದೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ರಾಜೂಗೌಡ ಅವರು ಈಶ್ವರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಕಟ್ಟುವ ಕುರಿತು ಮುಂದಿನ ಯೋಜನೆಗಳನ್ನು ಚರ್ಚೆ ನಡೆಸಲು ಈ ಸಭೆ ನಡೆದಿದೆ ಎನ್ನಲಾಗಿದೆ. ದಿನದಿಂದ ದಿನಕ್ಕೆ ಬಿಜೆಪಿಯೊಳಗಿನ ಭಿನ್ನಮತ ತಾರಕಕ್ಕೆ ಏರುತ್ತಿದ್ದು ಅದ್ಯಕ್ಷ ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಭಿನ್ನಮತೀಯರಿಗೆ ಹೈಕಮಾಂಡ್ ಬೆಂಬಲವಿಲ್ಲದ ಕಾರಣ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಸಾಧ್ಯವಾಗುತ್ತಿಲ್ಲ.
ಇದೀಗ ಅದೇ ಭಿನ್ನಮತೀಯರು ತಮ್ಮ ತಂಡವನ್ನು ಇನ್ನಷ್ಟು ಬಲಪಡಿಸುತ್ತಿರುವುದು ವಿಜಯೇಂದ್ರ ಬಣಕ್ಕೆ ತಲೆನೋವಾಗಿ ಪರಿಣಮಿಸಿದೆ.