ಹಾಸನ: ಹಾಸನದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಹೇಳಿಕೆಗಳನ್ನು ನೀಡಿದರು. ಇಂದು ಹಾಸನದಲ್ಲಿ ಸಣ್ಣ ಸಣ್ಣ ಸಮುದಾಯದವರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿದ್ದು, ಇದು ಮೊದಲ ಹಂತವಾಗಿದ್ದು, ಸಣ್ಣ ಕೆಲಸಗಾರರಿಗೆ ಹಲವು ಸೌಲಭ್ಯಗಳು ಸಿಗಲಿವೆ ಎಂದು ಹೇಳಿದರು. ಈ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಹಣ ನೀಡಿಲ್ಲವೆಂದು ಅವರು ಆರೋಪಿಸಿದರು.
ಎಲ್‌ಐಸಿ ಹೂಡಿಕೆ ಕುರಿತು ಟೀಕೆ: ಎಲ್‌ಐಸಿ ಹಣ 50 ರಿಂದ 60 ಸಾವಿರ ಕೋಟಿ ರೂಪಾಯಿ ಅಂಬಾನಿ, ಅದಾನಿ ಸೇರಿದಂತೆ ಸಾಹುಕಾರ್‌ಗಳಿಗೆ ಹೂಡಿಕೆ ಆಗುತ್ತಿದೆ ಎಂದು ಸಂತೋಷ್ ಲಾಡ್ ಕೇಂದ್ರವನ್ನು ಟೀಕಿಸಿದರು.
ಜಾತಿಗಣತಿ ಕುರಿತು ಸ್ಪಷ್ಟನೆ
ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿ ಬಗ್ಗೆ ಮಾತನಾಡಿದ ಅವರು, “ಇದು ಜಾತಿ ಸಮೀಕ್ಷೆ ಅಲ್ಲ; ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಜಾತಿ ಎನ್ನುವುದು ಕೇವಲ ಎರಡು ಪಾಯಿಂಟ್ ಮಾತ್ರ, 58 ಬೇರೆ ಅಂಶಗಳಿವೆ. ಯಾರೂ ಬೇಕಾದರೂ ಕೋರ್ಟ್‌ಗೆ ಹೋಗಬಹುದು, ಇದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು,” ಎಂದರು.
ಹಾಸನ ಹಿಮ್ಸ್ ಘಟನೆಗೆ ಆಕ್ರೋಶ
ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಎಡಗಾಲಿನ ರಾಡ್ ತೆಗೆಯುವ ಬದಲು ಬಲಗಾಲು ಕುಯಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದು ತುಂಬಾ ದುಃಖದ ಸಂಗತಿ, ಇಂತಹ ಘಟನೆ ಆಗಬಾರದು. ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ,” ಎಂದು ಖಾತ್ರಿಪಡಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಜಿಎಸ್‌ಟಿ, ವಿದೇಶಿ ವಾಹನ ಮತ್ತು ವಸ್ತ್ರ ಬಳಕೆಯ ಬಗ್ಗೆ ಕೇಂದ್ರವನ್ನು ಟೀಕಿಸಿದ ಲಾಡ್, “ಸ್ವದೇಶಿ ಬಟ್ಟೆ ಹಾಕಿಕೊಳ್ಳಲಿ, ಆದರೆ ಓಡಾಡುವುದು ಇಂಪೋರ್ಟೆಡ್ ಗಾಡಿಗಳಲ್ಲಿ. ವಿಶ್ವಗುರು ಎಂಬ ಮಾತಿನ ಅರ್ಥವೇನು? ರಾಹುಲ್ ಗಾಂಧಿ ಮೂರು ಸಾವಿರ ಪ್ರೆಸ್‌ಮೀಟ್ ಮಾಡಿದ್ದಾರೆ, ಆದರೆ ವಿಶ್ವಗುರು ಒಮ್ಮೆ ಪ್ರೆಸ್‌ಮೀಟ್ ಮಾಡಿಲ್ಲ. ಬಿಜೆಪಿ ಪಾರ್ಟಿ ಸಾಹುಕಾರ್ ಪಾರ್ಟಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.