Home ರಾಜಕೀಯ ಬಿಜಪಿ ಸರ್ಕಾರಕ್ಕೆ ನೈತಿಕತೆ ಇದೆಯಾ?: ಹೆಚ್‌ಡಿಕೆ

ಬಿಜಪಿ ಸರ್ಕಾರಕ್ಕೆ ನೈತಿಕತೆ ಇದೆಯಾ?: ಹೆಚ್‌ಡಿಕೆ

0

ತುಮಕೂರು : ನವೆಂಬರ್‌ 2ರಂದು ತುಮಕೂರಿನಲ್ಲಿ ನಡೆದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಘಟನೆ ಕುರಿತು ಹೆಚ್‌ಡಿಕೆ ಅಂದೇ ಸುಧಾಕರ್‌ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಉತ್ತರಿಸಲು ಹೊರಟ ಸುಧಾಕರ್‌ ತಮ್ಮ ಕೆಲಸಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ಮಾಡಿದ್ದು, ಈ ವಿರುದ್ಧ ಹೆಚ್‌ಡಿಕೆ ʼನಿಮ್ಮ ವಿಕೃತ ಮನಸ್ಸಿಗೆ ದಿಕ್ಕಾರವಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಸಚಿವರ ವಿರುದ್ಧ ಟ್ವೀಟ್‌ ಮಾಡಿರುವ   ಮಾಜಿ ಮುಖ್ಯಮಂತ್ರಿ ಹೆಚ್.‌ಡಿ ಕುಮಾರಸ್ವಾಮಿಯವರು, ʼಮಾನ್ಯ ಸುಧಾಕರ್‌ ಅವರೇ ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ʼಸಾವುಗೇಡಿ ಸರಕಾರʼದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ?ʼ ಎಂದು ಕೇಳಿದ್ದಾರೆ.

ʼಆರೋಗ್ಯ ಸಚಿವರು ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ  ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆʼ ಎಂದು ಕಿಡಿಕಾರಿದ್ದಾರೆ.

ʼತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ & ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ . ನನ್ನ ಸರಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ,ಇಲ್ಲಿ ನಡೆದದ್ದು ಕ್ರೌರ್ಯʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು .ಕಾಸಿಗಾಗಿ ಹುದ್ದೆ, ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿʼ ಎಂದು ಹೆಚ್‌ಡಿಕೆ ಗರಂ ಆಗಿದ್ದಾರೆ.

ʼತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ ಬಿಜೆಪಿ ಸರಕಾರಕ್ಕೆ ಇದೆಯಾ?ʼ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಅವರಿಗೆ ಪ್ರಶ್ನೆ ಮಾಡಿದ್ದಾರೆ.

You cannot copy content of this page

Exit mobile version