ಭೋಪಾಲ್: ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಈ ಬಾರಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಾಲಾಗಿದೆ.
ಬಿಜೆಪಿ ಗುರುವಾರ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎರಡು ರಾಜ್ಯಗಳಲ್ಲಿ ಹಿಂದುಳಿದ ಸಮುದಾಯಗಳ ನಡುವೆ ಹಿಡಿತ ಸಾಧಿಸಲು ಬಿಜೆಪಿ ಹಿಂದಿನಿಂದಲೂ ಪ್ರಯತ್ನ ನಡೆಸುತ್ತಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾವಾಗಲೂ ಇದಕ್ಕೆ ಅಡ್ಡಿಯಾಗಿರುತ್ತಿದ್ದರು. ಈ ಕಾರಣಕ್ಕಾಗಿ ಬಿಜೆಪಿ ನಾಯಕತ್ವ ಈ ಕ್ರಮಕ್ಕೆ ಮುಂದಾಗಿದೆ. ಅಭ್ಯರ್ಥಿಗಳಿಗೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಲು ಸಾಕಷ್ಟು ಸಮಯ ಸಿಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಬಹುಬೇಗ ಪಟ್ಟಿ ಪ್ರಕಟಿಸಿದೆ.
ಬಿಜೆಪಿ ಮೊದಲ ಹಂತದ ಪಟ್ಟಿಯಲ್ಲಿ ಛತ್ತೀಸ್‌ಗಢ ವಿಧಾನಸಭೆಗೆ 21 ಅಭ್ಯರ್ಥಿಗಳು ಮತ್ತು ಮಧ್ಯಪ್ರದೇಶ ವಿಧಾನಸಭೆಗೆ 39 ಅಭ್ಯರ್ಥಿಗಳನ್ನು ಘೋಷಿಸಿದೆ. ಗ್ವಾಲಿಯರ್ ಚಂಬಲ್ ಪ್ರದೇಶದ 34 ಸ್ಥಾನಗಳಿಗೆ ಆರು ಹಿಂದುಳಿದ ಜಾತಿ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದೇ ವೇಳೆ 2018ರ ಚುನಾವಣೆಯಲ್ಲಿ ಸೋತ 14 ಅಭ್ಯರ್ಥಿಗಳಿಗೆ ಪಕ್ಷದ ನಾಯಕತ್ವ ಮತ್ತೆ ಟಿಕೆಟ್ ನೀಡಿದೆ. ಅವರಲ್ಲಿ ಮಾಜಿ ಸಚಿವರಾದ ಅಚಲ್ ಸೋಂಕರ್, ನಾನಾಜಿ ಮೊಹಮ್ಮದ್, ಓಂಪ್ರಕಾಶ್ ಧುರ್ವೆ, ಐದಲ್ ಸಿಂಗ್ ಕಮ್ಸನಾ, ನಿರ್ಮಲಾ ಭೂರಿಯಾ, ಲಲಿತಾ ಯಾದವ್ ಮತ್ತು ಲಾಲ್ ಸಿಂಗ್ ಆರ್ಯ ಸೇರಿದ್ದಾರೆ.
ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು, ಪಕ್ಷವು ತನ್ನ ಅಭ್ಯರ್ಥಿಗಳ ಮೇಲೆ ನಂಬಿಕೆ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.
ಜ್ಯೋತಿದಾದಿತ್ಯ ಸಿಂಧಿಯಾ ಅವರ ಆಪ್ತ ಸ್ನೇಹಿತ ರಣವೀರ್ ಜಾತವ್ ಅವರಿಗೆ ಟಿಕೆಟ್ ತಪ್ಪಿಸಿ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಅವರು ಗೋಹಾಡ್ ವಿಧಾನಸಭಾ ಸ್ಥಾನಕ್ಕೆ ಟಿಕೆಟ್ ನೀಡಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಲಾಲ್ ಸಿಂಗ್ ಅವರ ಆಯ್ಕೆ ಪ್ರಭಾವ ಬೀರಬಹುದು ಎಂದು ಪಕ್ಷದ ನಾಯಕತ್ವ ಭಾವಿಸಿದಂತಿದೆ.
2018 ರಲ್ಲಿ ಕಾಂಗ್ರೆಸ್ ಪರವಾಗಿ ಗೆದ್ದಿದ್ದ ರಣವೀರ್ ಜಾತವ್, ಜ್ಯೋತಿರಾಧಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2020ರ ಉಪಚುನಾವಣೆಯಲ್ಲಿ ರಣವೀರ್ ಜಾತವ್ ಸೋತ ನಂತರ, ಬಿಜೆಪಿ ಅವರನ್ನು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಕ್ಯಾಬಿನೆಟ್ ಸ್ಥಾನವನ್ನು ನೀಡಿತು, ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ.
ಬಿಜೆಪಿ ಪ್ರಕಟಿಸಿರುವ ಪಟ್ಟಿಯಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ಕೆಲ ನಾಯಕರೂ ಇದ್ದಾರೆ ಎಂಬುದು ಗಮನಾರ್ಹ. ಇವರಲ್ಲಿ ಭೋಪಾಲ್ ಸೆಂಟ್ರಲ್ ಅಸೆಂಬ್ಲಿ ಅಭ್ಯರ್ಥಿ ಧ್ರುವ ನಾರಾಯಣ್ ಸಿಂಗ್ ಆರ್‌ಟಿಐ ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಶೆಹ್ಲಾ ಮಸೂದ್ ಕುಟುಂಬಸ್ಥರು ಪ್ರಕರಣದ ಮರು ತನಿಖೆಗೆ ಸಿಬಿಐಗೆ ಒತ್ತಾಯಿಸಿದ್ದರು.
ಪಕ್ಷದ ನಾಯಕತ್ವವು ಶಿವಪುರಿ ಜಿಲ್ಲೆಯ ಕಾಂಗ್ರೆಸ್ ಕಂಚುಕೋಟಾ ಪಿಚೋರ್ ವಿಧಾನಸಭಾ ಸ್ಥಾನವನ್ನು ಪ್ರೀತಮ್ ಸಿಂಗ್ ಲೋಧಿಗೆ ಹಂಚಿಕೆ ಮಾಡಿದೆ. ಅಲ್ಲಿ ಕಾಂಗ್ರೆಸ್ ನಾಯಕ ಕೆ.ಪಿ.ಸಿಂಗ್ ಕಕ್ಕಾಜು ವಿರುದ್ಧ ಪ್ರೀತಮ್ ಸಿಂಗ್ ಲೋಧಿ ಸ್ಪರ್ಧಿಸುತ್ತಿರುವುದು ಇದು ಮೂರನೇ ಬಾರಿ. ಕೆಲವು ದಿನಗಳ ಹಿಂದೆ ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಲೋಧಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಟಿಕೆಟ್ ನೀಡಿ ಬೆಂಬಲಿಸಲಾಗಿದೆ.
ಇವರೊಂದಿಗೆ ಕೆಲ ರಾಜಕೀಯ ವಾರಸುದಾರರೂ ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಸಬಲ್ಗಢದ ಮಾಜಿ ಶಾಸಕ ಮೆಹರ್ಬಾನ್ ಸಿಂಗ್ ರಾವತ್ ಅವರ ಸೊಸೆ ಸರಳಾ ರಾವತ್, ದಮೋಹ್ ಮಾಜಿ ಸಂಸದ ಶಿವರಾಜ್ ಸಿಂಗ್ ಲೋಧಿ ಅವರ ಪುತ್ರ ವೀರೇಂದ್ರ ಸಿಂಗ್ ಲೋಧಿ ಮತ್ತು ಮಾಜಿ ಶಾಸಕಿ ಪ್ರತಿಭಾ ಸಿಂಗ್ ಅವರ ಪುತ್ರ ನೀರಜ್ ಸಿಂಗ್ ಈ ಪಟ್ಟಿಯಲ್ಲಿದ್ದಾರೆ. ಬಿಜೆಪಿ ನಾಯಕರು ಸಾಗರದ ಬಂಡಾ ವಿಧಾನಸಭಾ ಕ್ಷೇತ್ರವನ್ನು ವೀರೇಂದ್ರ ಸಿಂಗ್ ಲೋಧಿ ಅವರಿಗೆ ಹಂಚಿಕೆ ಮಾಡಿದ್ದಾರೆ. ಇಲ್ಲಿಂದ ತರ್ವಾರ್ ಸಿಂಗ್ ಲೋಧಿ ಅವರು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಮಾಜಿ ಶಾಸಕ ಮಾನವೇಂದ್ರ ಸಿಂಗ್ ಅವರ ಪುತ್ರ ಕಾಮಾಖ್ಯ ಪ್ರತಾಪ್ ಸಿಂಗ್ ಅವರು ಛತ್ತರ್‌ಪುರ ಜಿಲ್ಲೆಯ ಮಹಾರಾಜಪುರದಿಂದ ಟಿಕೆಟ್ ಪಡೆದಿದ್ದಾರೆ.
ಮೊನ್ನೆಯಷ್ಟೇ ನರೇಂದ್ರ ಮೋದಿಯವರು ವಂಶ ರಾಜಕಾರಣದ ಕುರಿತು ಕಿಡಿ ಕಾರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.