ರಾಜ್ಯದಲ್ಲಿ ಈಗ ಪಕ್ಷಾಂತರ ಪರ್ವ ಜೋರಾಗಿಯೇ ಸದ್ದು ಮಾಡುತ್ತಿದೆ. ಒಂದು ಕಡೆ ‘ಬಾಂಬೆ ಬಾಯ್ಸ್’ ಆದರೆ, ಇನ್ನೊಂದು ಕಡೆ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬೇರೆ ಬೇರೆ ಪಕ್ಷ ಸೇರಿದ ನಾಯಕರು ಒಂದು ಭದ್ರ ನೆಲೆಗಾಗಿ ಸೂಕ್ತ ಪಕ್ಷ ಆರಿಸಿಕೊಳ್ಳಲು ಹೊರಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆಯುವ ಶಿವಮೊಗ್ಗದಲ್ಲೂ ಕೂಡಾ ಈ ಬಾರಿ ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಹೊರಟವರ ಪಟ್ಟಿ ತುಸು ದೊಡ್ಡದೇ ಇದೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ತೊಡೆ ತಟ್ಟಿ ಸುದ್ದಿ ಮಾಡಿದ್ದ ಆಯನೂರು ಮಂಜುನಾಥ್ ಜೆಡಿಎಸ್ ಸೇರಿ ವಿಧಾನಸಭಾ ಟಿಕೆಟ್ ಗಿಟ್ಟಿಸಿದ್ದರು. ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಆಯನೂರು ಮಂಜುನಾಥ್ ಉತ್ಸುಕತೆ ತೋರಿದ್ದಾರೆ ಎಂಬುದು ಶಿವಮೊಗ್ಗ ಭಾಗದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ತೊರೆಯುವವರ ಪಟ್ಟಿ ಸ್ವಲ್ಪ ದೊಡ್ಡದೇ ಇದೆ ಎನ್ನಬಹುದು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆಯುವ ಮುನ್ನ ಕಾಂಗ್ರೆಸ್ ಸೇರಲು ಆಯನೂರು ಮಂಜುನಾಥ್ ಉತ್ಸುಕತೆ ತೋರಿದ್ದರು. ಆದರೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೇ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಗಾಲು ಹಾಕಿದ್ದರು.
ಶಿವಮೊಗ್ಗದಲ್ಲಿ ಸ್ವಲ್ಪ ಮಟ್ಟಿಗೆ ಜೆಡಿಎಸ್ ಅಸ್ತಿತ್ವದಲ್ಲಿ ಇದ್ದರೂ ಗೆಲ್ಲಲು ಸಮರ್ಥ ನಾಯಕತ್ವದ ಕೊರತೆ ಇತ್ತು. ಆಯನೂರು ಮಂಜುನಾಥ್ ಜೆಡಿಎಸ್ ಸೇರಿದ್ದ ಹಿನ್ನೆಲೆಯಲ್ಲಿ ಅವರು ಗೆಲ್ಲಬಹುದು ಎಂಬ ನಿರೀಕ್ಷೆ ಕೂಡಾ ಇತ್ತು. ಆದರೆ ಶಿವಮೊಗ್ಗ ಕ್ಷೇತ್ರ ಬಿಜೆಪಿ ಪಾಲಾಗಿದೆ. ಜೆಡಿಎಸ್ ಕೂಡಾ ಇಲ್ಲಿ ಅಸ್ತಿತ್ವ ಕಂಡುಕೊಳ್ಳಲು ಏದುಸಿರು ಬಿಡುತ್ತಿರುವ ಸಂದರ್ಭದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂಬುದು ಈಗಿನ ಲೇಟೆಸ್ಟ್ ಸುದ್ದಿ.
ಶಿವಮೊಗ್ಗದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್, ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತವರ ಬೆಂಬಲಿಗರು ತಮ್ಮ ಮಾತೃಪಕ್ಷವನ್ನು ತೊರೆದು ಜೆಡಿಎಸ್ ಸೇರಿದ್ದರು. ಸಾಗರದಲ್ಲಿ ಕಾಂಗ್ರೆಸ್‌ನಲ್ಲಿಯೇ ಇದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಸೇರಿದಂತೆ ಹಲವು ಪ್ರಭಾವಿ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸೊರಬದಲ್ಲಿ ಕಾಂಗ್ರೆಸ್‌ನಲ್ಲಿದ್ದ ರಾಜು ತಲ್ಲೂರು ಬಿಜೆಪಿ ಸೇರಿದ್ದರು. ಶಿಕಾರಿಪುರದಲ್ಲಿ ಜೆಡಿಎಸ್‌ನಲ್ಲಿದ್ದ ಪ್ರಭಾವಿ ನಾಯಕ ಎಚ್.ಟಿ. ಬಳಿಗಾರ್ ಬಿಜೆಪಿ ಸೇರಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಲೆಯಿಂದ ತದ್ವಿರುದ್ಧ ದಿಕ್ಕಿನಲ್ಲಿ ತಿರುಗಿದೆ ಎಂದರೂ ತಪ್ಪಿಲ್ಲ.
ಆಯನೂರು ಮಂಜುನಾಥ್ ಅವರ ಬೆನ್ನಲ್ಲೇ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಡೆಗೆ ಮುಖ ಮಾಡಿದ ಅನೇಕ ಮಂದಿ ಈಗ ಕಾಂಗ್ರೆಸ್ ಕಡೆ ವಾಲುತ್ತಿರುವುದು ವಿಶೇಷವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್ ಹೈಕಮಾಂಡ್ ಟೊಂಕ ಕಟ್ಟಿ ನಿಂತ ಹಿನ್ನೆಲೆಯಲ್ಲಿ ಎಲ್ಲಾ ಅಂದುಕೊಂಡಂತೆ ಆದರೆ ಶಿವಮೊಗ್ಗ ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಒಲಿಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಪರ್ಕಕ್ಕೂ ಮುಂದಾದ ಆಯನೂರು ಮಂಜುನಾಥ್ ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಅವರ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇಲ್ಲಿ ಹಸಿರು ಸಿಗ್ನಲ್ ಸಿಕ್ಕರೆ ಸೇರ್ಪಡೆ ಖಚಿತವಾಗಬಹುದು.
ಈಗ ಎದುರಿಗೆ ವಿಧಾನ ಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಇದೆ. ಈ ಚುನಾವಣೆ ದೃಷ್ಟಿಯಿಂದಲೇ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆಯನೂರು ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ಮಟ್ಟದಲ್ಲಿ ಸಣ್ಣ ವಿರೋಧವಿದೆ. ಅದರಲ್ಲೂ ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಂದ ಮಾತ್ರ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ.
ಅಂದುಕೊಂಡಂತೆ ನಡೆದು ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾದರೆ ಅವರ ಹಿಂದೆಯೇ ಕಾಂಗ್ರೆಸ್ ತೊರೆದಿದ್ದ ಸಾಗರದ ರಾಜನಂದಿನಿ, ರಾಜು ತಲ್ಲೂರು, ಹೆಚ್.ಟಿ.ಬಳಿಗಾರ್ ರಂತಹ ನಾಯಕರು ಕಾಂಗ್ರೆಸ್ ಸೇರಬಹುದು ಎನ್ನಲಾಗಿದೆ. ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಮುಂಚಿನಂತೆ ಬಿಜೆಪಿಗೆ ಅಂತಹ ಪೂರಕ ವಾತಾವರಣ ಇಲ್ಲದೇ ಇರುವುದರಿಂದ ಇವರಷ್ಟೇ ಅಲ್ಲದೇ ಇನ್ನೂ ಅನೇಕರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಬಹುದು ಎನ್ನಲಾಗಿದೆ.
ಇತ್ತ ಕಾಂಗ್ರೆಸ್ ಸೇರ್ಪಡೆ ಆದರೆ ಮುಂದೇನು ಎಂಬ ಪ್ರಶ್ನೆ ಕೂಡಾ ಆಯನೂರು ಮಂಜುನಾಥ್ ಮುಂದಿದೆ. ಈಗಾಗಲೇ ಸಾಂವಿಧಾನಿಕವಾಗಿ ಇರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಈ ನಾಲ್ಕೂ ಸದನಗಳಲ್ಲಿ ಸ್ಥಾನ ಗಿಟ್ಟಿಸಿರುವ ಆಯನೂರು ಮಂಜುನಾಥ್ ಮುಂದಿನ ದಿನಗಳಲ್ಲಿ ಒಂದಲ್ಲಾ ಒಂದು ಟಿಕೆಟ್ ನ ಆಕಾಂಕ್ಷಿ ಆಗೇ ಆಗುತ್ತಾರೆ. ಲೋಕಸಭೆಗೂ ಮುನ್ನ ಬರುವ ವಿಧಾನ ಪರಿಷತ್ ಗೆ ಟಿಕೆಟ್ ಕೊಟ್ಟರೆ, ಈಗಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಇದೂ ಸಹ ಕಾಂಗ್ರೆಸ್ ಹೈಕಮಾಂಡ್ ಗೆ ಒಂದು ತಲೆನೋವಿನ ವಿಚಾರ.
ಇನ್ನು ವಿಧಾನಸಭಾ ಚುನಾವಣೆಗೆ ಕೇವಲ 10 ದಿನ ಇದ್ದಾಗ ಜೆಡಿಎಸ್ ಸೇರ್ಪಡೆಯಾಗಿ, ಪ್ರಚಾರಕ್ಕೂ ಅವಕಾಶ ಸಿಗದಂತಾ ಸ್ಥಿತಿ ಮುಂದೆ ಎದುರಾಗಬಹುದು ಎಂದು, ಈಗಲೇ ಕಾಂಗ್ರೆಸ್ ಸೇರ್ಪಡೆ ಆದರೆ ಲೋಕಸಭೆಗಾದರೂ ಟಿಕೆಟ್ ಗಿಟ್ಟಿಸಿ ಪ್ರಚಾರ ಪಡೆಯಬಹುದು ಎಂಬ ಲೆಕ್ಕಾಚಾರ ಆಯನೂರು ಅವರಿಗಿದೆ ಎನ್ನಲಾಗಿದೆ. ಆದರೆ ಶಿವಮೊಗ್ಗ ಲೋಕಸಭಾ ಟಿಕೆಟ್ ಗೆ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ ಮುಂದಿದೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರುಗಳು ಮಾಜಿ ಸಚಿವ ಕಿಮ್ಮನೆ ರತ್ನಾಕರ, ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಸೇರಿದಂತೆ ಪ್ರಮುಖ ಮುಖಂಡರ ಪಟ್ಟಿ ಹೈಕಮಾಂಡ್ ಮುಂದಿದೆ.
ಹೀಗಾಗಿ ಚುನಾವಣಾ ಆಕಾಂಕ್ಷಿ ಹಿನ್ನೆಲೆಯಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದರೆ ಹಲವಷ್ಟು ಸವಾಲುಗಳನ್ನು ಎದುರಿಸಬೇಕಾದೀತು ಎಂಬುದಂತೂ ಸತ್ಯ.