Home ಅಂಕಣ ಐಪಿಎಲ್ ಸಂಭ್ರಮವನ್ನು ಮೊದಲು ರಾಜಕೀಯಗೊಳಿಸಿದ್ದು ಬಿಜೆಪಿ! 2022ರ ಗುಜರಾತ್ ಕಥೆ ಏನು ಹೇಳುತ್ತೆ ಗೊತ್ತಾ…?

ಐಪಿಎಲ್ ಸಂಭ್ರಮವನ್ನು ಮೊದಲು ರಾಜಕೀಯಗೊಳಿಸಿದ್ದು ಬಿಜೆಪಿ! 2022ರ ಗುಜರಾತ್ ಕಥೆ ಏನು ಹೇಳುತ್ತೆ ಗೊತ್ತಾ…?

0

“..ಬಿಜೆಪಿ ಕೇಳುತ್ತಿರುವ ಅಷ್ಟೂ ಪ್ರಶ್ನೆಗಳಲ್ಲಿ ಅರ್ಥವಿದೆ. ಆದರೆ ಅವುಗಳನ್ನು ಕೇಳಲು ಬಿಜೆಪಿಗೆ ನೈತಿಕತೆ ಇದೆಯೇ? ಖಂಡಿತ ಇಲ್ಲ, ಅನ್ನೋದನ್ನು 2022ರ ಐಪಿಎಲ್ ಟ್ರೋಫಿ ನಮಗೆ ಮನದಟ್ಟುಮಾಡಿಸುತ್ತದೆ..” ಚಿಂತಕರಾದ ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆ ಈಗ ದುರಂತದ ನೆನಪು. ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದಲ್ಲಿ ಸತ್ತ ಹನ್ನೊಂದು ಜೀವಗಳು ಮತ್ತೆ ಮರಳಲಾರವು. ಅವರನ್ನು ಕಳೆದುಕೊಂಡ ಕುಟುಂಬಸ್ಥರ ನೋವನ್ನು ಪರಿಹಾರದ ಮೊತ್ತಗಳು ತುಂಬಲಾರವು. ಇದರಲ್ಲಿ ಯಾರದೆಲ್ಲ? ಎಷ್ಟೆಲ್ಲ ತಪ್ಪಿದೆ? ಅನ್ನೋದು ತನಿಖೆಗಳ ನಂತರ ಸ್ಪಷ್ಟವಾಗಲಿದೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ, ಹೈಕೋರ್ಟ್‌ನ ನಿಗಾವಣೆಯಲ್ಲಿ ಪ್ರತ್ಯೇಕ ತನಿಖೆ/ವಿಚಾರಣೆಗಳು ನಡೆಯುತ್ತಿವೆ.

ಈ ದುರಂತದಲ್ಲಿ, ರಾಜ್ಯ ಸರ್ಕಾರದ ವೈಫಲ್ಯವನ್ನು ಬಹಳಷ್ಟು ಜನ ಬೊಟ್ಟು ಮಾಡುತ್ತಿದ್ದಾರೆ. ಮುಖ್ಯವಾಗಿ ಮೀಡಿಯಾ ಟ್ರಯಲ್‌ ಮತ್ತು ಬಿಜೆಪಿಯ ಆರೋಪಗಳು ರಾಜ್ಯ ಸರ್ಕಾರವನ್ನು ಈಗಾಗಲೇ ತಪ್ಪಿತಸ್ಥನೆಂದು ತೀರ್ಪಿತ್ತು ಸಿಎಂ, ಡಿಸಿಎಂ, ಗೃಹಮಂತ್ರಿಯ ರಾಜೀನಾಮೆಗೆ ಆಗ್ರಹಿಸುತ್ತಿವೆ. ಮೀಡಿಯಾಗಳನ್ನು ಬಿಡಿ, ಇತ್ತೀಚಿನ ದಿನಗಳಲ್ಲಿ ಅವು ಯಾವ ರಾಜಕೀಯ ಅಜೆಂಡಾದ ಕಾರ್ಯಸೂಚಿ ಹೊತ್ತು ಕೆಲಸ ಮಾಡುತ್ತಿವೆ ಅನ್ನೋದು ನಗ್ನಸತ್ಯ. ಆದರೆ ವಿರೋಧಪಕ್ಷವಾಗಿ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ತರಾತುರಿಯಲ್ಲಿ ಆಚರಣೆಗೆ ಅನುಮತಿ ಯಾಕೆ ನೀಡಬೇಕಿತ್ತು? ಕಾಂಗ್ರೆಸ್ ನಾಯಕರ ಫೋಟೊ ಶೂಟ್ ರಾಜಕಾರಣಕ್ಕೆ ಅಮಾಯಕರನ್ನು ಬಲಿ ಹಾಕಲಾಯ್ತೆ? ಆರ್ ಸಿ ಬಿಗೂ ಕರ್ನಾಟಕಕ್ಕೂ ಏನು ಸಂಬಂಧ? ಅದರಲ್ಲಿ ಕನ್ನಡಿಗರೆಲ್ಲಿದ್ದಾರೆ? ಅದರ ಗೆಲುವಿನ ಸಮಾರಂಭದಲ್ಲಿ ಸರ್ಕಾರದ ಪ್ರತಿನಿಧಿಗಳು ಯಾಕೆ ಭಾಗಿಯಾಗಬೇಕಿತ್ತು? ಎಕ್ಸೆಟ್ರಾ, ಎಕ್ಸೆಟ್ರಾ ಪ್ರಶ್ನೆಗಳನ್ನು ಬಿಜೆಪಿ ಮುಂದೊಡ್ಡುತ್ತಿದೆ.
ನೋ ಡೌಟ್…. ಬಿಜೆಪಿ ಕೇಳುತ್ತಿರುವ ಅಷ್ಟೂ ಪ್ರಶ್ನೆಗಳಲ್ಲಿ ಅರ್ಥವಿದೆ. ಆದರೆ ಅವುಗಳನ್ನು ಕೇಳಲು ಬಿಜೆಪಿಗೆ ನೈತಿಕತೆ ಇದೆಯೇ? ಖಂಡಿತ ಇಲ್ಲ, ಅನ್ನೋದನ್ನು 2022ರ ಐಪಿಎಲ್ ಟ್ರೋಫಿ ನಮಗೆ ಮನದಟ್ಟು ಮಾಡಿಸುತ್ತದೆ.

2022ನೇ ಸಾಲಿನ ಐಪಿಎಲ್ ಟ್ರೋಫಿಯ ಫೈನಲ್‌ ಪಂದ್ಯ ಮೇ 29, 2022ರ ಭಾನುವಾರದಂದು ಇದೇ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಾಗ, ಗುಜರಾತ್‌ ಚುನಾವಣೆಗೆ ಇನ್ನು ಕೇವಲ ಐದು ತಿಂಗಳು ಮಾತ್ರ ಬಾಕಿ ಇತ್ತು. ಇಂಟರೆಸ್ಟಿಂಗ್ಲಿ, ಆ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ತಂಡವು ರಾಜಸ್ಥಾನ ರಾಯಲ್ಸ್‌ ತಂಡವನ್ನು ಮಣಿಸಿ ಟ್ರೋಫಿ ಗೆದ್ದಿತು. ಈ ಸಂಭಾವ್ಯ ಗೆಲುವನ್ನು (ಬಹಳಷ್ಟು ಜನ ಆರೋಪಿಸುವಂತೆ ಪ್ರಿ ಸ್ಕ್ರಿಪ್ಟೆಡ್ ಗೆಲುವನ್ನು) ರಾಜಕೀಯವಾಗಿ ಎನ್‌ಕ್ಯಾಶ್ ಮಾಡಿಕೊಳ್ಳಲು ಗುಜರಾತಿನ ಬಿಜೆಪಿ ಸರ್ಕಾರ ಅಮಿತ್‌ ಶಾ ಮಾರ್ಗದರ್ಶನದಲ್ಲಿ ಹೇಗೆಲ್ಲ ಅಣಿಯಾಗಿತ್ತು ಅನ್ನೋದನ್ನು ನೋಡಿದಾಗ ಇವತ್ತಿನ ಬಿಜೆಪಿ ವಾದಗಳ ಬಣ್ಣ ಕಳಚಿಬೀಳುತ್ತೆ.

ಗುಜರಾತ್ ತಂಡ ಫೈನಲ್ ಪ್ರವೇಶಿಸಿ, ಟ್ರೋಫಿ ಗೆಲ್ಲಬಹುದಾದ ಸಂಭವನೀಯತೆಯನ್ನು ಪೊಲಿಟಿಕಲಿ ಎನ್‌ಕ್ಯಾಶ್‌ ಮಾಡಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿತ್ತು. ಇವತ್ತು ಸಿ ಟಿ ರವಿ ತರಹದ ರಾಜ್ಯ ನಾಯಕರು, ಆರ್‍‌ ಸಿ ಬಿ ಕರ್ನಾಟಕದ ತಂಡವೇ ಅಲ್ಲ ಎಂದು ಹೇಳುತ್ತಿದ್ದಾರೆ. ನಿಜವಿರಬಹುದು. ಆದರೆ, ಅವತ್ತು ಗುಜರಾತ್ ಟೈಟನ್ಸ್‌ ಫ್ರಾಂಚೈಸಿಯನ್ನು ಗುಜರಾತ್‌ನ ಅಸ್ಮಿತೆಯ ರೀತಿ ಪ್ರಚಾರ ಮಾಡಲಾಯ್ತು. ಗುಜರಾತ್‌ ಟೈಟನ್ಸ್‌ನ ಗೆಲುವನ್ನು ಗುಜರಾತ್‌ ರಾಜ್ಯದ ಗೆಲುವೆಂದು ಬಿಂಬಿಸುವ ಸಲುವಾಗಿ ಅವತ್ತಿನ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಖುದ್ದು ಅಮಿತ್‌ ಶಾ, ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ ಆರ್ ಪಾಟೀಲ್ ಜೊತೆಗೆ ರಾಜ್ಯ ಬಿಜೆಪಿಯ ಹಲವು ಮುಖಂಡರು ಕ್ರೀಡಾಂಗಣಕ್ಕೆ ದೌಡಾಯಿಸಿದ್ದರು. ನಿರೀಕ್ಷೆಯಂತೆ ಗುಜರಾತ್‌ ಟೈಟನ್ಸ್‌ ಗೆದ್ದಾಗ, ಇವರೆಲ್ಲರೂ ಆ ಸಂಭ್ರಮವನ್ನು ಗುಜರಾತಿಗಳ ಅಸ್ಮಿತೆಯ ಗೆಲುವಿನಂತೆ ಪರಿವರ್ತಿಸಿದರು.

ಗುಜರಾತ್‌ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ಅಹಮದಾಬಾದ್ ವಿವಿಯ ಅಸಿಸ್ಟೆಂಟ್ ಪ್ರೊಫೆಸರ್, ರಾಜಕೀಯ ವಿಶ್ಲೇಷಕ ಸಾರ್ಥಕ್ ಬಾಗ್ಚಿ ಅವತ್ತಿನ ವಿದ್ಯಮಾನವನ್ನು ಹೀಗೆ ವಿವರಿಸಿದ್ದರು. “ಇದು ಬಿಜೆಪಿಯ ಚುನಾವಣಾ ತಯಾರಿಯ ತಂತ್ರಗಾರಿಕೆಯಲ್ಲದೆ ಬೇರೇನೂ ಅಲ್ಲ. ತಾನು ಏನು ಮಾಡಬೇಕೆಂಬುದು ಬಿಜೆಪಿಗೆ ಗೊತ್ತಿದೆ ಮತ್ತು ಅದನ್ನದು ಮಾಡುತ್ತಿದೆ. ಗುಜರಾತ್ ಟೈಟನ್ಸ್ ತಂಡ ಟ್ರೋಫಿಯನ್ನು ಗೆಲ್ಲುವುದು, ಸ್ವತಃ ಅಮಿತ್‌ ಶಾ ಅಲ್ಲಿ ಉಪಸ್ಥಿತಿಯಿದ್ದು ಆ ಗೆಲುವಿನ ಮೂಲಕ ಗುಜರಾತಿ ಅಸ್ಮಿತೆಯನ್ನು ಒಂದು ಕ್ರಿಕೆಟ್ ಫ್ರಾಂಚೈಸಿ ತಂಡಕ್ಕೆ ರವಾನಿಸುವುದು, ಆ ಗೆಲುವನ್ನು ನಂತರ ಬಿಜೆಪಿ ವ್ಯವಸ್ಥಿತವಾಗಿ ಸಂಭ್ರಮಿಸುವುದು ಇವೆಲ್ಲವೂ ತಂತ್ರಗಾರಿಕೆಯ ಭಾಗ. 1995ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಕಳೆದ ಸಲ (2017ರ ಚುನಾವಣೆಯಲ್ಲಿ) 99 ಸ್ಥಾನಕ್ಕೆ ಕುಸಿದದ್ದೇ ಬಿಜೆಪಿಯ ಅತ್ಯಂತ ಕಳಪೆ ಸಾಧನೆ. ಆ ಸಾಧನೆ 2022ರಲ್ಲಿ ಮರುಕಳಿಸಬಾರದು ಎಂದು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಯಾವ ಸಾಧ್ಯತೆಯನ್ನೂ ಕಡೆಗಣಿಸುತ್ತಿಲ್ಲ. ಗುಜರಾತ್ ಟೈಟನ್ಸ್ ಗೆದ್ದ ಐಪಿಎಲ್ ಟ್ರೋಫಿಯ ಸುತ್ತ ಗುಜರಾತಿ ಅಸ್ಮಿತೆಯನ್ನು ಬೆಸೆಯುತ್ತಿರುವುದೂ ಅದರ ಭಾಗ”.

ಸಾರ್ಥಕ್ ಭಾಗ್ಚಿ ಹೇಳಿದಂತೆ, ಫೈನಲ್‌ ಪಂದ್ಯ ಮುಗಿದ ಮಾರನೇ ದಿನವೇ ಅಂದರೆ ಮೇ 30, 2022 ಸೋಮವಾರದಂದು ಸ್ವತಃ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮತ್ತು ಕ್ರೀಡಾ ಸಚಿವ ಹರ್ಷ್‌ ಸಿಂಗ್ವಿ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಿ ಟ್ರೋಫಿ ವಿಜೇತ ಟೈಟನ್ಸ್‌ ತಂಡವನ್ನು ಸನ್ಮಾನಿಸಿದ್ದರು. ಅಷ್ಟೇ ಅಲ್ಲ, ಆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಅಧಿಕೃತ ಯೂ-ಟ್ಯೂಬ್ ಚಾನೆಲ್‌ನಲ್ಲಿ ಲೈವ್ ಮಾಡಲಾಗಿತ್ತು. ವಿಜೇತ ತಂಡದೊಟ್ಟಿಗೆ ಗುಜರಾತ್ ಸಿಎಂ ಕೂಡಾ ಟ್ರೋಫಿಯನ್ನು ಎತ್ತಿಹಿಡಿದು, ಕ್ರೀಡಾಭಿಮಾನಿಗಳ ಎದುರು ಫೋಜ್ ಕೊಟ್ಟಿದ್ದರು. ಮುಂದುವರೆದು, ಅಹಮದಾಬಾದ್ ಮುಖ್ಯಬೀದಿಯಲ್ಲಿ ತಂಡಕ್ಕೆ ತೆರೆದ ವಾಹನದಲ್ಲಿ ರೋಡ್ ಶೋ ಮಾಡಲು ಸರ್ಕಾರ ಅವಕಾಶ ನೀಡಿತ್ತು. ಇವೆಲ್ಲವೂ ಟ್ರೋಫಿ ಗೆದ್ದ ಮಾರನೇ ದಿನವೇ ನಡೆದಿದ್ದವು! ಬೆಂಗಳೂರಿನಲ್ಲಿ ನಡೆದಿದ್ದಂತೆ!!

ವಿಶೇಷ ಸಂಗತಿ ಏನೆಂದರೆ, 2022ರ ಐಪಿಎಲ್ ಪಂದ್ಯಾವಳಿ ಆರಂಭವಾಗುವುದಕ್ಕು ಕೇವಲ ಒಂದು ತಿಂಗಳ ಹಿಂದಷ್ಟೇ ಗುಜರಾತ್ ಟೈಟನ್ಸ್ ಎಂಬ ಫ್ರಾಂಚೈಸಿಯನ್ನು ಹುಟ್ಟುಹಾಕಲಾಗಿತ್ತು. ಅದಕ್ಕು ಮೊದಲು ಈ ತಂಡ ಅಸ್ತಿತ್ವದಲ್ಲೇ ಇರಲಿಲ್ಲ! ತಾನು ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೊದಲ ಆವೃತ್ತಿಯಲ್ಲೆ, ಅಂದರೆ ಗುಜರಾತ್‌ ಚುನಾವಣೆ ಎದುರಿಸಲಿದ್ದ ವರ್ಷದಲ್ಲೇ ಅದು ಗೆದ್ದೂ ಬಿಟ್ಟಿತು! ಆ ಗೆಲುವನ್ನು ಸಮಸ್ತ ಗುಜರಾತ್ ಅಸ್ಮಿತೆಯ ಗೆಲುವಿನಂತೆ ಬಿಜೆಪಿ ಬಿಂಬಿಸಿತು. ಹೊಚ್ಚಹೊಸ ತಂಡವಾದ್ದರಿಂದ ಬೇರೆಲ್ಲ ಫ್ರಾಂಚೈಸಿಗಳಿಗೆ ಇರುವಂತೆ ದೊಡ್ಡ ಅಭಿಮಾನಿ ಪಡೆ ಗುಜರಾತ್‌ ಟೈಟನ್ಸ್‌ಗೆ ಆಗಿನ್ನೂ ಇರಲಿಲ್ಲ. ಹಾಗಾಗಿ ರೋಡ್‌ ಶೋ ಆಗಲಿ, ಸರ್ಕಾರಿ ಕಾರ್ಯಕ್ರಮವಾಗಲಿ ಅವಾಂತರವಾಗದೆ ಸುಸೂತ್ರವಾಗಿ ಮುಗಿದವು.

ಈಗ ಹೇಳಿ, ತರಾತುರಿಯಲ್ಲಿ ಸನ್ಮಾನವನ್ನು ಆಯೋಜಿಸಿದ್ದೇಕೆ? ಆರ್‍‌ ಸಿ ಬಿ ಗೆಲುವನ್ನು ತಮ್ಮ ರಾಜಕೀಯ ಇಮೇಜ್‌ ಹೆಚ್ಚಿಸಿಕೊಳ್ಳುವ ಫೋಟೊಶೂಟ್‌ಗೆ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು? ಕರ್ನಾಟಕದ ಅಸ್ಮಿತೆಯೊಟ್ಟಿಗೆ ಆರ್‍‌ ಸಿ ಬಿ ಗೆ ಏನು ಸಂಬಂಧ? ಕ್ರೀಡೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿರೊದೇಕೆ? ಎಂಬೆಲ್ಲ ತೂಕದ ಪ್ರಶ್ನೆಗಳನ್ನು ಕೇಳಲು ಬಿಜೆಪಿಗೆ ನೈತಿಕತೆ ಇದೆಯೇ?

ನಿಜ…..! ದ್ವಂದ್ವ ನಿಲುವಿನ ಬಿಜೆಪಿಯಾಚೆಗೆ ಈ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗದು; ಜೊತೆಗೆ, ಬಿಜೆಪಿಯ ಇಬ್ಬಂದಿತನವನ್ನು ಮರೆಯಲಾಗದು.

You cannot copy content of this page

Exit mobile version