ಮೋದಿ ಅಲೆ ಉತ್ತುಂಗದಲ್ಲಿದ್ದಾಗಲೂ ಗೆಲ್ಲಲಾಗದ ರಾಜ್ಯಗಳಲ್ಲಿ ಈಗ ಬಿಜೆಪಿ ಗೆಲ್ಲುತ್ತಿದೆ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಮುಖಂಡ ಅಭಿಜಿತ್ ದೀಪ್ಕೆ ವಾಗ್ದಾಳಿ

ಪುಣೆ: “ಪ್ರಧಾನಿ ನರೇಂದ್ರ ಮೋದಿಯವರ ಅಲೆ ಉತ್ತುಂಗದಲ್ಲಿದ್ದ ಕಾಲದಲ್ಲೂ ಬಿಜೆಪಿಗೆ ಗೆಲ್ಲಲು ಸಾಧ್ಯವಾಗದ ರಾಜ್ಯಗಳಲ್ಲಿ ಇಂದು ಆ ಪಕ್ಷ ನಿರಂತರ ಗೆಲುವು ಸಾಧಿಸುತ್ತಿದೆ. ಇದಕ್ಕೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಆಡಳಿತಾತ್ಮಕ ಕುತಂತ್ರಗಳೇ ನೇರ ಕಾರಣ,” ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಖಂಡ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) ಪರೀಕ್ಷಾ ಅಕ್ರಮಗಳು, ನಿರಂತರ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ವಿಳಂಬವನ್ನು ವಿರೋಧಿಸಿ ಪುಣೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಚುನಾವಣಾ ಪ್ರಕ್ರಿಯೆಗಳೆರಡರ ಮೇಲೂ ಸಾರ್ವಜನಿಕರಿಗೆ ನಂಬಿಕೆ ಸಂಪೂರ್ಣವಾಗಿ ಕುಸಿದಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

“ಜ್ಞಾನೇಶ್ ಕುಮಾರ್ ತಮ್ಮ ಸ್ಥಾನದಿಂದ ಕೆಳಗಿಳಿದು, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದಾಗ ಮಾತ್ರ ಬಿಜೆಪಿಯ ವಾಸ್ತವ ಸಂಖ್ಯಾಬಲ ಮತ್ತು ಅವರು ನಿಜವಾಗಿ ಎಷ್ಟು ಸ್ಥಾನಗಳನ್ನು ಗೆಲ್ಲಬಲ್ಲರು ಎಂಬ ಸತ್ಯಾಂಶ ಹೊರಬರಲಿದೆ,” ಎಂದ ದೀಪ್ಕೆ, ದೇಶದಲ್ಲಿ ಚುನಾವಣಾ ಫಲಿತಾಂಶಗಳು ಮೊದಲೇ ತೀರ್ಮಾನವಾಗಿರುತ್ತವೆ (Pre-determined) ಎಂದರು.

“ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತರಿಪಡಿಸುವವರೆಗೆ ಇಂತಹ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕೇ ಯಾವುದೇ ಅರ್ಥವಿಲ್ಲ,” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ವಿದ್ಯಾರ್ಥಿಗಳ ಹೋರಾಟಕ್ಕೆ ದನಿಗೂಡಿಸಿದ ಅವರು, “ನಿರಂತರ ಪೇಪರ್ ಸೋರಿಕೆಯಿಂದ ಲಕ್ಷಾಂತರ ಯುವಜನತೆಯ ಭವಿಷ್ಯ ಅತಂತ್ರವಾಗಿದೆ. ಸರ್ಕಾರ ಈ ಬಗ್ಗೆ ಕಿಂಚಿತ್ತೂ ಗಂಭೀರವಾಗಿಲ್ಲ. ಎಂಪಿಎಸ್‌ಸಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಸಿಜೆಪಿ ಈ ವಿದ್ಯಾರ್ಥಿ ಚಳವಳಿಗೆ ಸಂಪೂರ್ಣ ಬೆಂಬಲ ನೀಡಲಿದೆ,” ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಸಾಫ್ಟ್‌ವೇರ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಳಿದ ಇಬ್ಬರು ಚುನಾವಣಾ ಆಯುಕ್ತರು ದಾಖಲಿಸಿದ್ದ 14 ಆಕ್ಷೇಪಣೆಗಳ ವಿವಾದ ಭುಗಿಲೆದ್ದಿರುವ ನಡುವೆಯೇ ದೀಪ್ಕೆ ಈ ಹೇಳಿಕೆಗಳನ್ನು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು