ಮತದಾನದ ಹಕ್ಕು ಕಸಿದುಕೊಂಡರೆ, ಸಂವಿಧಾನದ ಮೇಲೆ ದಾಳಿ ಸಮ – ನ್ಯಾ. ಉಜ್ಜಲ್ ಭುಯಾನ್

ನವದೆಹಲಿ : ಲಕ್ಷಾಂತರ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ ಯಾವುದೇ ಪ್ರಕ್ರಿಯೆಯು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಸ್ವಯಂಪ್ರೇರಿತವಾಗಿದೆ. ಇದು ದೇಶದ ಸಂವಿಧಾನದ ಮೂಲ ಆಶಯಕ್ಕೇ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ತೆರವುಗೊಳಿಸುವ ಪ್ರಕ್ರಿಯೆಯ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ. ಭಾರತದ ಸಂವಿಧಾನವು ದೇಶದಲ್ಲಿ ಎರಡು ದರ್ಜೆಯ ನಾಗರಿಕರನ್ನು ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ಮತದಾನದ ಹಕ್ಕು ಇರುವ ನಾಗರಿಕರು ಮತ್ತು ಮತದಾನದ ಹಕ್ಕು ಇಲ್ಲದ ನಾಗರಿಕರು ಎಂದು ವಿಭಾಗಿಸಲು ಸಾಧ್ಯವಿಲ್ಲ. ಮತ ಚಲಾಯಿಸುವ ಹಕ್ಕಿಲ್ಲದ ನಾಗರಿಕನನ್ನು ಸ್ವಂತ ದೇಶದಲ್ಲೇ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವುದು ಸಂವಿಧಾನ ಬಾಹಿರ. ಇದನ್ನು ಯಾವುದೇ ಪ್ರಾಧಿಕಾರ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ನ್ಯಾಯಾಲಯವೂ ಇದನ್ನು ಸಹಿಸುವುದಿಲ್ಲ  ಎಂದು ಜಸ್ಟಿಸ್ ಭುಯಾನ್ ಸ್ಪಷ್ಟಪಡಿಸಿದರು.

ಸಂವಿಧಾನದ ವಿಧಿ 14 ಮತ್ತು 326 ರ ಉಲ್ಲಂಘನೆ!

ಈ ರೀತಿ ಮತದಾನದ ಹಕ್ಕು ಕಸಿಯುವುದು ಸಮಾನತೆಯ ಹಕ್ಕು ನೀಡುವ ಸಂವಿಧಾನದ ವಿಧಿ 14 ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ನೀಡುವ ವಿಧಿ 326 ರ ನೇರ ಉಲ್ಲಂಘನೆಯಾಗಿದೆ. ನಾಗರಿಕನೊಬ್ಬನ ದೇಹದಿಂದ ಆತ್ಮವನ್ನು ಬೇರ್ಪಡಿಸಿದರೆ ಹೇಗೋ, ಹಾಗೆಯೇ ಆತನಿಂದ ಮತದಾನದ ಹಕ್ಕನ್ನು ಕಸಿಯುವುದು. ವ್ಯಕ್ತಿ ಮೃತನಾಗಿದ್ದರೆ ಹೊರತುಪಡಿಸಿ, ಬೇರೆ ಯಾವುದೇ ಸಂದರ್ಭದಲ್ಲಿಯೂ ಪೂರ್ವಭಾವಿ ನೋಟಿಸ್ ಮತ್ತು ವಿಚಾರಣೆ ಇಲ್ಲದೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತಿಲ್ಲ ಎಂದರು.

ಮತದಾನದ ಹಕ್ಕು ಮೂಲಭೂತ ಚೌಕಟ್ಟಿನ ಭಾಗ:

ಸಂವಿಧಾನ ಶಿಲ್ಪಿಗಳು ದೇಶದ ಸಾಮಾನ್ಯ ಪ್ರಜೆಯ ಮೇಲೆ ಇಟ್ಟಿರುವ ಅಖಂಡ ನಂಬಿಕೆಯೇ ಈ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು. ದೇಶದಲ್ಲಿ ಕೋಟ್ಯಾಧಿಪತಿಯೇ ಇರಲಿ ಅಥವಾ ರಿಕ್ಷಾ ಚಲಾಯಿಸುವವನೇ ಇರಲಿ, ಇಬ್ಬರ ಮತಕ್ಕೂ ಒಂದೇ ಮೌಲ್ಯ. ಉನ್ನತ ಪ್ರಜಾಪ್ರಭುತ್ವದಲ್ಲಿ ಯಾವುದೇ ಅಧಿಕಾರಿಗಿಂತ ಪ್ರಜೆಯೇ ಅತ್ಯುನ್ನತ ಸ್ಥಾನದಲ್ಲಿರುತ್ತಾನೆ. ಹೀಗಾಗಿ ಭಾರತೀಯ ನಾಗರಿಕನ ಮತದಾನದ ಹಕ್ಕು ಸಂವಿಧಾನದ ಮೂಲ ರಚನೆಯ (Basic Structure) ಕೇಂದ್ರಬಿಂದುವಾಗಿದೆ ಎಂದು ಅಭಿಪ್ರಾಯಪಟ್ಟರು. ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೋಟಿಗಟ್ಟಲೆ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸಿರುವುದನ್ನು ವಿರೋಧ ಪಕ್ಷಗಳು ಉಗ್ರವಾಗಿ ಖಂಡಿಸುತ್ತಿರುವ ಮಧ್ಯೆಯೇ ನ್ಯಾಯಮೂರ್ತಿಗಳ ಈ ಹೇಳಿಕೆ ಹೊರಬಿದ್ದಿರುವುದು ಮಹತ್ವ ಪಡೆದುಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು