ಮಹಿಳೆಯರ ಕುರಿತು ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ; ವೇದಿಕೆಯಲ್ಲೇ ಸಿಡಿದು ನಿಂತ ಬಿಜೆಪಿ ಮಹಿಳಾ ಶಾಸಕಿ

ಭೋಪಾಲ್ : ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಶಾಸಕರ ನಡುವೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿರುವ ಘಟನೆ ಗಮನ ಸೆಳೆದಿದೆ. ಮಹಿಳೆಯರು ಮತ್ತು ಯುದ್ಧಗಳ ನಡುವಿನ ಸಂಬಂಧವನ್ನು ಪೌರಾಣಿಕ ಹಾಗೂ ಐತಿಹಾಸಿಕ ಉದಾಹರಣೆಗಳ ಮೂಲಕ ವಿವರಿಸಲು ಮುಂದಾದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರ ಹೇಳಿಕೆಗೆ, ಅದೇ ವೇದಿಕೆಯಲ್ಲಿದ್ದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಣಾದ ನಾನಾಖೇಡಿ ಮಂಡಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಬಲರಾಮ ಕೃಷಿ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಉಪಸ್ಥಿತಿಯಲ್ಲಿದ್ದ ಕಾರ್ಯಕ್ರಮದಲ್ಲಿ ಆರಂಭದಲ್ಲಿ ರೈತರು, ರಸಗೊಬ್ಬರ ಹಾಗೂ ವಿದ್ಯುತ್ ಸಮಸ್ಯೆಗಳ ಕುರಿತು ಮಾತನಾಡಿದ ಶಾಕ್ಯ, ಬಳಿಕ ತಮ್ಮ ಭಾಷಣವನ್ನು ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಂಗಗಳತ್ತ ತಿರುಗಿಸಿದರು.

ರಾಮಾಯಣ, ಮಹಾಭಾರತ ಹಾಗೂ ಪೃಥ್ವಿರಾಜ್ ಚೌಹಾಣ್-ಸಂಯೋಗಿತಾ ಪ್ರಸಂಗಗಳನ್ನು ಉಲ್ಲೇಖಿಸಿದ ಶಾಕ್ಯ, ಇತಿಹಾಸದಲ್ಲಿ ಮಹಿಳೆಯರ ಕಾರಣದಿಂದಲೇ ಅನೇಕ ಯುದ್ಧಗಳು ನಡೆದಿದ್ದು, ಸಾವಿರಾರು ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ರಾವಣನು ಸೀತೆಯನ್ನು ಅಪಹರಿಸಿದ್ದರಿಂದ ಲಂಕೆಯ ವಿನಾಶ ಸಂಭವಿಸಿತು ಎಂದು ಅವರು ಉದಾಹರಣೆ ನೀಡಿದರು.

ಆದರೆ ಶಾಕ್ಯ ಅವರ ಈ ಹೇಳಿಕೆಗೆ ಚಾಚೌಡಾ ಕ್ಷೇತ್ರದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ವೇದಿಕೆಯಲ್ಲೇ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರನ್ನು ದೋಷಾರೋಪಣೆಗೆ ಗುರಿಪಡಿಸುವ ರೀತಿಯಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ಬಳಸಬಾರದು ಎಂದು ಅವರು ಆಕ್ಷೇಪಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಶಾಕ್ಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಕೃಷಿ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿದ್ದ ಕಾರ್ಯಕ್ರಮ ಕ್ಷಣಾರ್ಧದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ವೇದಿಕೆಯಾಯಿತು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿವಾದಗಳಿಗೆ ಹೊಸದೇನಲ್ಲ
ಪನ್ನಾಲಾಲ್ ಶಾಕ್ಯ ಅವರ ಹೆಸರು ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿತ್ತು. 2018ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಕುರಿತು ಮಾತನಾಡುವಾಗ ಅವರು ನೀಡಿದ್ದ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು. ಅದೇ ವರ್ಷ ಮಹಿಳೆಯರ ಪಾತ್ರದ ಕುರಿತು ನೀಡಿದ್ದ ಮತ್ತೊಂದು ಹೇಳಿಕೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಇದರ ಜೊತೆಗೆ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿದೇಶದಲ್ಲಿ ವಿವಾಹವಾಗಿದ್ದ ವಿಚಾರವನ್ನೂ ಪ್ರಶ್ನಿಸಿ ಅವರು ಸುದ್ದಿಯಾಗಿದ್ದರು. 2024ರಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪದವಿ ಸಾಲದು, ಕೌಶಲ್ಯಾಧಾರಿತ ಉದ್ಯೋಗಗಳತ್ತ ಗಮನ ಹರಿಸಬೇಕು ಎಂದು ಹೇಳಿದ ಸಂದರ್ಭವೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಬಿಜೆಪಿ ಒಳಗೇ ಭಿನ್ನ ಧ್ವನಿ
ಇತ್ತೀಚಿನ ಘಟನೆಯ ವಿಶೇಷತೆ ಎಂದರೆ ಇದು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವಿನ ವಾಗ್ವಾದವಾಗಿರದೆ, ಒಂದೇ ಪಕ್ಷದ ಇಬ್ಬರು ಶಾಸಕರ ನಡುವೆ ಸಾರ್ವಜನಿಕ ವೇದಿಕೆಯಲ್ಲಿ ನಡೆದಿರುವುದು. ಮಹಿಳೆಯರ ಕುರಿತ ಹೇಳಿಕೆಗೆ ಮಹಿಳಾ ಶಾಸಕಿಯೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related Articles

ಇತ್ತೀಚಿನ ಸುದ್ದಿಗಳು