ಗುವಾಹಟಿ: ಬಿಹಾರದ (Bihar) ಭಾಗಲ್‌ಪುರ ಜಿಲ್ಲೆಯ ಸುಲ್ತಾನ್‌ಗಂಜ್ ಬಳಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯು 2023ರ ಜೂನ್ 4ರಂದು ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಈ ಘಟನೆಯು 700 ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ (Assam) ರಾಜಧಾನಿ ಗುವಾಹಟಿಯಲ್ಲಿ ರಾಜಕೀಯ ಸಂಚಲನವನ್ನು ಸೃಷ್ಟಿಸಿತು.
ಎಚ್ಚೆತ್ತ ಅಸ್ಸಾಂ ಸರ್ಕಾರವು ತಕ್ಷಣವೇ ಗುವಾಹಟಿ ನಗರದಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗುತ್ತಿರುವ 8.4 ಕಿಲೋಮೀಟರ್ ಉದ್ದದ ಸೇತುವೆಯ ಬಗ್ಗೆ ತನಿಖೆಗೆ ಆದೇಶಿಸಿತು. ಬಿಹಾರದಲ್ಲಿ ಕುಸಿದ ಸೇತುವೆಗೂ ಮತ್ತು ಅಸ್ಸಾಂನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಗೂ ಇರುವ ಸಂಬಂಧ ಏನೆಂದರೆ – ಈ ಎರಡೂ ಸೇತುವೆಗಳು ಎಸ್‌ಪಿಎಸ್ ಕನ್‌ಸ್ಟ್ರಕ್ಷನ್ ಇಂಡಿಯಾ ಎಂಬ ಕಂಪನಿಗೆ ಸೇರಿದವು.
ಅಸ್ಸಾಂನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಗುಣಮಟ್ಟವನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಅಸ್ಸಾಂ ಸರ್ಕಾರವು ಐಐಟಿ-ಗುವಾಹಟಿಗೆ ವಹಿಸಿತು. ಬಿಹಾರ ಸರ್ಕಾರ ಸಹ ಸಂಬಂಧಪಟ್ಟ ಕಂಪನಿಗೆ ನೋಟಿಸ್ ಜಾರಿ ಮಾಡಿದೆ. ಈ ಘಟನೆ ನಡೆದು ಎರಡು ವರ್ಷಗಳು ಕಳೆದರೂ, ಅಸ್ಸಾಂ ಸರ್ಕಾರ ಆದೇಶಿಸಿದ್ದ ಸೇತುವೆ ಗುಣಮಟ್ಟದ ಪರಿಶೀಲನಾ ವರದಿ ಇನ್ನೂ ಬಹಿರಂಗಗೊಂಡಿಲ್ಲ.
ಘಟನೆ ನಡೆದ ಅದೇ ಆರ್ಥಿಕ ವರ್ಷದಲ್ಲಿ, ಸದರಿ ಎಸ್‌ಪಿಎಸ್ ಕನ್‌ಸ್ಟ್ರಕ್ಷನ್ ಕಂಪನಿಯು ಆಡಳಿತಾರೂಢ ಬಿಜೆಪಿಗೆ (BJP) ₹5 ಕೋಟಿ ದೇಣಿಗೆ ನೀಡಿರುವುದು ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಅರ್ಧಕ್ಕಿಂತ ಹೆಚ್ಚು ದೇಣಿಗೆಗಳು ಗುತ್ತಿಗೆ ಪಡೆದ ಕಂಪನಿಗಳಿಂದಲೇ: ಈಶಾನ್ಯ ಭಾರತದಲ್ಲಿನ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆಗಳನ್ನು ಪಡೆದು ಬಿಜೆಪಿಗೆ ದೇಣಿಗೆ ನೀಡಿದ ನಿರ್ಮಾಣ ಕಂಪನಿಗಳಲ್ಲಿ ಕೇವಲ ಎಸ್‌ಪಿಎಸ್ ಮಾತ್ರ ಇಲ್ಲ.
ಅಂತಹ ಕಂಪನಿಗಳು ಇನ್ನೂ ಹಲವಿವೆ. 2022-24 ರ ನಡುವಿನ ಎರಡು ಆರ್ಥಿಕ ವರ್ಷಗಳಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರಾದಂತಹ ನಾಲ್ಕು ಈಶಾನ್ಯ ರಾಜ್ಯಗಳಿಂದ ಚೆಕ್‌ಗಳು ಮತ್ತು ಎಲೆಕ್ಟ್ರಾನಿಕ್ ವರ್ಗಾವಣೆಗಳ ರೂಪದಲ್ಲಿ ಬಿಜೆಪಿ ₹77.63 ಕೋಟಿ ದೇಣಿಗೆ ಸಂಗ್ರಹಿಸಿದೆ. ಇವುಗಳಲ್ಲಿ 54.89% ದೇಣಿಗೆಗಳು ಬಿಜೆಪಿ ಸರ್ಕಾರಗಳು ಅಥವಾ ಕೇಂದ್ರದ ಅಧೀನದಲ್ಲಿರುವ ಏಜೆನ್ಸಿಗಳಿಂದ ಟೆಂಡರ್‌ಗಳು ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆದ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಬಂದಿರುವುದು ಗಮನಾರ್ಹ.
ರಾಜ್ಯವಾರು ಅಂಕಿಅಂಶಗಳು: ಅಸ್ಸಾಂ: 2023-24ರ ಆರ್ಥಿಕ ವರ್ಷದಲ್ಲಿ ಬಿಜೆಪಿ ಸಂಗ್ರಹಿಸಿದ ಒಟ್ಟು ದೇಣಿಗೆಗಳಲ್ಲಿ 52.34% ರಷ್ಟು ಸರ್ಕಾರಿ ಗುತ್ತಿಗೆಗಳನ್ನು ಪಡೆದ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಬಂದಿವೆ. ಹಿಂದಿನ ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದ ರಾಜಕೀಯ ದೇಣಿಗೆಗಳಲ್ಲಿ 64.48% ರಷ್ಟು ಸರ್ಕಾರಿ ಗುತ್ತಿಗೆ ಪಡೆದವರಿಂದಲೇ ಬಂದಿವೆ.
ಅರುಣಾಚಲ ಪ್ರದೇಶ: 2023-24ರ ಆರ್ಥಿಕ ವರ್ಷದಲ್ಲಿ ಅರುಣಾಚಲ ಪ್ರದೇಶದಿಂದ ಬಿಜೆಪಿ ಸಂಗ್ರಹಿಸಿದ ₹20,000 ಕ್ಕಿಂತ ಹೆಚ್ಚಿನ ದೇಣಿಗೆಗಳಲ್ಲಿ ಅರ್ಧಕ್ಕಿಂತ ಹೆಚ್ಚು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಗುತ್ತಿಗೆ ಪಡೆದ ಕಂಪನಿಗಳೇ ನೀಡಿವೆ. ತ್ರಿಪುರಾ: ಅದೇ ವರ್ಷ ತ್ರಿಪುರಾದಲ್ಲಿ ಬಿಜೆಪಿಗೆ ಲಭಿಸಿದ ದೇಣಿಗೆಗಳಲ್ಲಿ 61.7% ಕ್ಕಿಂತ ಹೆಚ್ಚು ದೇಣಿಗೆಗಳು ಸರ್ಕಾರಿ ಗುತ್ತಿಗೆದಾರರಿಂದ ಬಂದಿವೆ. ಅದಕ್ಕೂ ಹಿಂದಿನ ವರ್ಷ ಇದು 84.12% ಇತ್ತು ಎಂಬುದು ಗಮನಾರ್ಹ.
ಮಣಿಪುರ: ಮಣಿಪುರದ ವಿಷಯಕ್ಕೆ ಬಂದರೆ, 2022-23 ರಲ್ಲಿ ಬಿಜೆಪಿ ಸಂಗ್ರಹಿಸಿದ ದೇಣಿಗೆಗಳಲ್ಲಿ 5% ರಷ್ಟು ಸರ್ಕಾರಿ ಗುತ್ತಿಗೆ ಪಡೆದವರಿಂದ ಬಂದಿವೆ. 2023 ರ ಮೇ 8 ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳು ಪ್ರಾರಂಭವಾದ ಕಾರಣ ಬಿಜೆಪಿಯ ದೇಣಿಗೆ ಸಂಗ್ರಹ ಕೂಡ ಕುಂಠಿತವಾಯಿತು.
ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿ ಬಿಜೆಪಿ ಕೇವಲ ₹29.8 ಲಕ್ಷ ದೇಣಿಗೆ ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು. ಆ ವರ್ಷ ಸರ್ಕಾರಿ ಗುತ್ತಿಗೆದಾರರು ಯಾರೂ ಬಿಜೆಪಿಗೆ ದೇಣಿಗೆ ನೀಡದಿರುವುದು ವಿಶೇಷ.
