ಬೆಂಗಳೂರು: ಮೇಕೆದಾಟು ಬಹುಉದ್ದೇಶಿತ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಹೊಸ ಮುಖ್ಯ ಇಂಜಿನಿಯರ್ ಹಾಗೂ ಅಧೀಕ್ಷಕ ಇಂಜಿನಿಯರ್ ಕಚೇರಿಗಳನ್ನು ಸೃಜಿಸುವಂತೆ ಆದೇಶಿಸಿದೆ.
ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ 18.11.2025 ರಂದು ಜರುಗಿದ ಸಭೆಯ ನಿರ್ದೇಶನದಂತೆ, ಯೋಜನೆಯನ್ನು ಯಾವುದೇ ಅಡೆತಡೆಗಳಿಲ್ಲದೆ ವೇಗವಾಗಿ ಪೂರ್ಣಗೊಳಿಸಲು ಪ್ರತ್ಯೇಕ ವಲಯ ಮತ್ತು ವೃತ್ತ ಕಚೇರಿಗಳನ್ನು ಸ್ಥಾಪಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂಬಂಧ 10.12.2025 ರಂದು ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಹೊಸ ಕಚೇರಿಗಳು ಹಾಗೂ ಹುದ್ದೆಗಳ ಸೃಷ್ಟಿಗೆ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿದ್ದು, ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುವ ಹಿನ್ನೆಲೆ, ತಾತ್ಕಾಲಿಕ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ.
ತಾತ್ಕಾಲಿಕವಾಗಿ KERSಗೆ ಕಾರ್ಯಭಾರ
ಹೊಸ ಕಚೇರಿಗಳ ಸ್ಥಾಪನೆ ಆಗುವವರೆಗೆ, ಮೇಕೆದಾಟು ಯೋಜನೆಯ ಕಾರ್ಯಭಾರವನ್ನು ಹೆಚ್ಚುವರಿಯಾಗಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ (KERS) ನಿರ್ದೇಶಕರಿಗೆ ವಹಿಸಲಾಗಿದೆ. ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಯೋಜನೆ ಅನುಷ್ಠಾನಕ್ಕೆ ಆದೇಶಿಸಲಾಗಿದೆ.
ರಚಿಸಲಾದ ತಂಡದ ಹುದ್ದೆಗಳ ವಿವರ
ಉಪ ಮುಖ್ಯ ಇಂಜಿನಿಯರ್ (ಕಾರ್ಯಪಾಲಕ ಇಂಜಿನಿಯರ್) – 01
ತಾಂತ್ರಿಕ ಸಹಾಯಕರು (ಸಹಾಯಕ ಕಾರ್ಯಪಾಲಕ ಇಂಜಿನಿಯರ್) – 03
ಸಹಾಯಕ ಇಂಜಿನಿಯರ್‌ಗಳು – 06
ಸಹಾಯಕ ಆಡಳಿತಾಧಿಕಾರಿ – 01
ಲೆಕ್ಕಾಧೀಕ್ಷಕರು – 01
ಅಧೀಕ್ಷಕರು – 01
ಪ್ರಥಮ ದರ್ಜೆ ಲೆಕ್ಕ ಸಹಾಯಕರು – 01
ಪ್ರಥಮ ದರ್ಜೆ ಸಹಾಯಕರು – 02
ದ್ವಿತೀಯ ದರ್ಜೆ ಲೆಕ್ಕ ಸಹಾಯಕರು – 01
ದ್ವಿತೀಯ ದರ್ಜೆ ಸಹಾಯಕರು – 04
ಶೀಘ್ರಲಿಪಿಗಾರರು – 01
ಬೆರಳಚ್ಚುಗಾರರು – 04
ವಾಹನ ಚಾಲಕ – 01
ಗ್ರೂಪ್–ಡಿ ಸಿಬ್ಬಂದಿ – 02
ಕಾವಲುಗಾರ – 01
ಕಚೇರಿ ವ್ಯವಸ್ಥೆ ಮತ್ತು ವೆಚ್ಚ
ತಂಡವು ರಾಮನಗರದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಕಟ್ಟಡ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗಿದೆ.
ಯೋಜನೆಗೆ ಸಂಬಂಧಿಸಿದ ಕಚೇರಿ ನಿರ್ವಹಣೆ, ಮೂಲಭೂತ ಸೌಕರ್ಯಗಳು ಹಾಗೂ ಇತರ ವೆಚ್ಚಗಳನ್ನು ಪ್ರಸ್ತುತ ಕಾವೇರಿ ಅನುದಾನದಿಂದ ಭರಿಸಲಾಗುತ್ತದೆ.
ಇದಲ್ಲದೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಎಲ್ಲಾ ಕಡತಗಳು, ಪತ್ರ ವ್ಯವಹಾರಗಳು ಮತ್ತು ದಾಖಲೆಗಳನ್ನು KERS ನಿರ್ದೇಶಕರಿಗೆ ಹಸ್ತಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಕ್ರಮದಿಂದ ಮೇಕೆದಾಟು ಯೋಜನೆಗೆ ಹೊಸ ಚೈತನ್ಯ ದೊರಕಲಿದ್ದು, ಯೋಜನೆಯ ಅನುಷ್ಠಾನ ಪ್ರಕ್ರಿಯೆ ಇನ್ನಷ್ಟು ವೇಗ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
