Home ಜನ-ಗಣ-ಮನ ಇತಿಹಾಸ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮತ್ತೆ ಬಿಜೆಪಿ ಕಿರಿಕ್; ವಂದೇ ಮಾತರಂ ವಿವಾದಕ್ಕೆ ಕಿಡಿ

ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಮತ್ತೆ ಬಿಜೆಪಿ ಕಿರಿಕ್; ವಂದೇ ಮಾತರಂ ವಿವಾದಕ್ಕೆ ಕಿಡಿ

0

ಬೆಂಗಳೂರು: ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದ ಮೊದಲ ದಿನವೇ ‘ವಂದೇ ಮಾತರಂ’ ಗೀತೆಯ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಪದ್ಯಗಳನ್ನು ಮಾತ್ರ ಹಾಡುವಂತೆ ಹೊರಡಿಸಿರುವ ಆದೇಶವನ್ನು ವಿರೋಧಿಸಿದ ಬಿಜೆಪಿ ಸದಸ್ಯರು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪೂರ್ಣ ವಂದೇ ಮಾತರಂ ಹಾಡುವ ಮೂಲಕ ಪ್ರತಿಭಟನೆ ನಡೆಸಿದರು.

ತೀವ್ರ ಬರಗಾಲ ಹಾಗೂ ಪಶ್ಚಿಮ ಘಟ್ಟಗಳ ಕುರಿತ ಡಾ. ಕಸ್ತೂರಿರಂಗನ್ ವರದಿಯ ಪರಿಣಾಮಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಸೋಮವಾರ ವಿಧಾನಸಭೆಯ ಕಲಾಪ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು.

ಗೀತೆಯ ಎರಡು ಪದ್ಯಗಳು ಮುಕ್ತಾಯಗೊಂಡ ಬಳಿಕ, ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡಿದರು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ವಂದೇ ಮಾತರಂನ ಉಳಿದ ಪದ್ಯಗಳನ್ನು ತಾವೇ ಹಾಡುವ ಮೂಲಕ ಪ್ರತಿಭಟನೆ ದಾಖಲಿಸಿದರು.

ವಿಧಾನ ಪರಿಷತ್‌ನಲ್ಲಿಯೂ ಇದೇ ರೀತಿಯ ಬೆಳವಣಿಗೆ ನಡೆಯಿತು. ಸಭಾಪತಿ ಸಲೀಂ ಅಹ್ಮದ್ ಅವರು ಸಂವಿಧಾನದ ಪೀಠಿಕೆಯನ್ನು ಓದಲು ಮುಂದಾದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ವಂದೇ ಮಾತರಂನ ಉಳಿದ ಪದ್ಯಗಳನ್ನು ಹಾಡುವುದನ್ನು ಮುಂದುವರಿಸಿದರು.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಇತರೆ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಪದ್ಯಗಳನ್ನು ಮಾತ್ರ ಹಾಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿರುವುದು ಈ ವಿವಾದಕ್ಕೆ ಕಾರಣವಾಗಿದೆ.

You cannot copy content of this page

Exit mobile version