Home ಜನ-ಗಣ-ಮನ ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ರಾಜ್ಯದ ಪತ್ರಕರ್ತರ ಬಳಗದಿಂದ ಸರ್ಕಾರಕ್ಕೆ ಮನವಿ

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ರಾಜ್ಯದ ಪತ್ರಕರ್ತರ ಬಳಗದಿಂದ ಸರ್ಕಾರಕ್ಕೆ ಮನವಿ

0

ಬೆಂಗಳೂರು: ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಪೌರಕಾರ್ಮಿಕರಿಗಾಗಿ ಪತ್ರಕರ್ತರು’ ಬಳಗದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಎನ್. ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ. ಗುರುರಾಜ್, ಮಹಾಂತೇಶ ಹಿರೇಮಠ ಹಾಗೂ ಸೋಮಶೇಖರ್ ಕವಚೂರು ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ನಾಗರಿಕ ಸಮಾಜದ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೆ, ಸೌಲಭ್ಯ ಹಾಗೂ ಹಕ್ಕುಗಳನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಬಳಗ ಮನವಿಯಲ್ಲಿ ತಿಳಿಸಿದೆ.

ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಸಾಮಾಜಿಕವಾಗಿ ಕಡೆಗಣಿಸುವ ಅಥವಾ ತಾರತಮ್ಯದಿಂದ ನೋಡುವ ಮನೋಭಾವ ಬದಲಾಗಬೇಕಿದ್ದು, ಅವರ ಸೇವೆಗೆ ಗೌರವ ನೀಡುವ ಜತೆಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಮುಖ ಬೇಡಿಕೆಗಳು

  • ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಬೇಕು.
  • ಪೌರಕಾರ್ಮಿಕರು ಹಾಗೂ ಇತರೆ ಸರ್ಕಾರಿ ನೌಕರರ ನಡುವಿನ ತಾರತಮ್ಯ ನಿವಾರಿಸಿ, ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
  • ಪೌರಕಾರ್ಮಿಕರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ, ಮೂಲ ವೇತನವನ್ನು ಹೆಚ್ಚಿಸಬೇಕು.
  • ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು.
  • ನಗದುರಹಿತ ಆರೋಗ್ಯ ಚಿಕಿತ್ಸಾ ಯೋಜನೆ ಜಾರಿಗೊಳಿಸಬೇಕು.
  • ಕಸ ಸಾಗಣೆ ಲೋಡರ್‌ಗಳ ಸಿಬ್ಬಂದಿ, ತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರು, ಸಹಾಯಕರು, ಆಪರೇಟರ್‌ಗಳು ಹಾಗೂ ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನೂ ಪೌರಕಾರ್ಮಿಕರೆಂದು ಪರಿಗಣಿಸಿ ಖಾಯಂಗೊಳಿಸಬೇಕು.
  • ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ಹಾಗೂ ವಿಶೇಷ ಅನುದಾನ ಮೀಸಲಿಡಬೇಕು.
  • ಸೇವೆಯಲ್ಲಿರುವ ಸಂದರ್ಭದಲ್ಲಿ ಪೌರಕಾರ್ಮಿಕರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಬೇಕು.
  • ರಾಜ್ಯದ ಪೌರಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಲು ತಕ್ಷಣ ಸಮಿತಿ ರಚಿಸಿ, ಮೂರು ತಿಂಗಳೊಳಗೆ ವರದಿ ಪಡೆದು ಅದರ ಶಿಫಾರಸುಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.

ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಿ, ಕಾಲಮಿತಿಯೊಳಗೆ ಈಡೇರಿಸುವ ಮೂಲಕ ಅವರ ಸೇವೆಗೆ ಸೂಕ್ತ ಗೌರವ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಪತ್ರಕರ್ತರ ಬಳಗ ಮನವಿ ಮಾಡಿದೆ.

You cannot copy content of this page

Exit mobile version