Home ಜನ-ಗಣ-ಮನ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಕಟ : ಸೆ.17ರಂದು ನಾಲ್ವರಿಗೆ ದತ್ತಿ...

ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಕಟ : ಸೆ.17ರಂದು ನಾಲ್ವರಿಗೆ ದತ್ತಿ ಪ್ರಶಸ್ತಿ, ಐವರು ಸಂಪಾದಕರಿಗೆ ಗೌರವ

0

ಬೆಂಗಳೂರು : ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಚಿಂತಕರು ಹಾಗೂ ಹೋರಾಟಗಾರರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಸಂಘವು ಕಳೆದ 26 ವರ್ಷಗಳಿಂದ ರಾಜ್ಯ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿರುವ ದಲಿತರ ಮಾಲಿಕತ್ವ ಹಾಗೂ ಸಂಪಾದಕತ್ವದ ಪತ್ರಿಕೆಗಳ ಹಿತಾಸಕ್ತಿ ಕಾಪಾಡುವುದು, ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವುದು ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣಕ್ಕೆ ಸಂಬಂಧಿಸಿದ ಹಲವು ರಚನಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಸಂಘದ ಅಧ್ಯಕ್ಷ ಚೆಲುವರಾಜು ತಿಳಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ದಲಿತ ಚಳವಳಿಯ ಪ್ರಮುಖ ನಾಯಕ ಪ್ರೊ.ಬಿ.ಕೃಷ್ಣಪ್ಪ, ದಲಿತರ ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ರಾಜಕೀಯವಾಗಿ ಧ್ವನಿ ಎತ್ತಿದ ಮಾಜಿ ಸಚಿವರಾದ ಬಿ.ಬಸವಲಿಂಗಪ್ಪ ಹಾಗೂ ಬಿ.ರಾಚಯ್ಯ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.

ದತ್ತಿ ಪ್ರಶಸ್ತಿ ಪುರಸ್ಕೃತರು

  • ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ – ಕೆ.ದೀಪಕ್, ಸಂಪಾದಕರು, ‘ವಿಜಯ ಕಾಲ’ ಕನ್ನಡ ದಿನಪತ್ರಿಕೆ, ಮೈಸೂರು.
  • ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿ – ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಂಡ್ಯ.
  • ಬಿ.ರಾಚಯ್ಯ ದತ್ತಿ ಪ್ರಶಸ್ತಿ – ಬದ್ರುದ್ದೀನ್ ಕೆ., ಆಯುಕ್ತರು, ಮಾಹಿತಿ ಆಯೋಗ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತರು.
  • ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿ – ಯತಿರಾಜ್ ಬಿ.ಸಿ. (ಯತಿರಾಜ್ ಬ್ಯಾಲಹಳ್ಳಿ), ಪತ್ರಕರ್ತರು, ಬೆಂಗಳೂರು.
    ಪ್ರತಿ ದತ್ತಿ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ.

ಐವರು ಸಂಪಾದಕರಿಗೆ ಗೌರವ
ಪರಿಶಿಷ್ಟ ಜಾತಿ/ವರ್ಗಗಳ ಸಾಧಕ ಪತ್ರಿಕಾ ಸಂಪಾದಕರನ್ನು ಗುರುತಿಸಿ ಸಂಘದ ವಾರ್ಷಿಕ ಗೌರವ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ. ಪ್ರಶಸ್ತಿ ಫಲಕ ಹಾಗೂ ಗೌರವ ಸ್ಮರಣಿಕೆಯನ್ನು ನೀಡಲಾಗುತ್ತದೆ.

ಗೌರವಕ್ಕೆ ಆಯ್ಕೆಯಾದವರು:

  1. ಚಂದ್ರಣ್ಣ – ಸಂಪಾದಕರು, ‘ಕರ್ನಾಟಕ ಎಕ್ಸ್‌ಪ್ರೆಸ್’, ದಾವಣಗೆರೆ.
  2. ದೇವೇಂದ್ರಪ್ಪ ಕಪ್ಪನೂರು – ಸಂಪಾದಕರು, ‘ಬುದ್ಧಲೋಕ’, ಗುಲ್ಬರ್ಗಾ.
  3. ಬಿ.ಓ.ಕರಿಯಮ್ಮ – ಸಂಪಾದಕರು, ‘ಜಗಳೂರು ವಾಯ್ಸ್’, ದಾವಣಗೆರೆ.
  4. ಸುಭಾಷ್ ಹೊದ್ಲೂರು – ಸಂಪಾದಕರು, ‘ಸುದಿನ’ ಕನ್ನಡ ದಿನಪತ್ರಿಕೆ, ಬಾಗಲಕೋಟೆ.
  5. ಅನೂಪ್ ಕುಮಾರ್ – ಕಾರ್ಯನಿರ್ವಾಹಕ ಸಂಪಾದಕರು, ‘ಬಳ್ಳಾರಿ ಬೆಳಗಾಯಿತು’, ಬಳ್ಳಾರಿ.

ಸೆ.17ರಂದು ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘ ತಿಳಿಸಿದೆ.

ಸಂಘದ ಅಧ್ಯಕ್ಷ ಚೆಲುವರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಪ್ರಕಟಣೆಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

You cannot copy content of this page

Exit mobile version