Home ಜನ-ಗಣ-ಮನ ಭರವಸೆ ಮರೆತರೆ ಮತ್ತೆ ಬೀದಿಗಿಳಿಯುತ್ತೇವೆ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ

ಭರವಸೆ ಮರೆತರೆ ಮತ್ತೆ ಬೀದಿಗಿಳಿಯುತ್ತೇವೆ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ

0

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದಿದ್ದ ಯುವಜನರ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಒತ್ತಾಯಿಸಿದೆ. ಸರ್ಕಾರ ತನ್ನ ಬದ್ಧತೆಗಳಿಂದ ಹಿಂದೆ ಸರಿಯಲು ಮುಂದಾದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರಗಳನ್ನು ನ್ಯಾಯಾಲಯ ಹಲವು ಬಾರಿ ಕೇಳಿದ್ದರೂ ಕೇಂದ್ರ ಸರ್ಕಾರ ಇನ್ನೂ ಸಂಬಂಧಿತ ಪಟ್ಟಿಯನ್ನು ಸಲ್ಲಿಸಿಲ್ಲ ಎಂದು ಸಿಜೆಪಿ ಆರೋಪಿಸಿದೆ. ಪ್ರತಿಭಟನೆ ಹಿಂಪಡೆದ ಬಳಿಕ ಸರ್ಕಾರ ತನ್ನ ಭರವಸೆಗಳನ್ನು ದುರ್ಬಲಗೊಳಿಸುವ ಅಥವಾ ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಶಾಂತಿಯುತ ಪ್ರತಿಭಟನೆಯನ್ನು ಅಂತ್ಯಗೊಳಿಸಲು ನೀಡಿದ ಭರವಸೆಗಳನ್ನು ನಂತರ ಮರು ವ್ಯಾಖ್ಯಾನಿಸುವುದು ಅಥವಾ ನಿರ್ಲಕ್ಷಿಸುವುದು ಯುವಜನರೊಂದಿಗೆ ನಂಬಿಕೆ ದ್ರೋಹ ಮಾಡಿದಂತಾಗುತ್ತದೆ. ಕೇಂದ್ರ ಸರ್ಕಾರವು ಯುವಕರಿಗೆ ನೀಡಿರುವ ಮಾತನ್ನು ಅಕ್ಷರಶಃ ಮತ್ತು ಅದರ ಆಶಯದಂತೆ ಈಡೇರಿಸಬೇಕು ಎಂದು ಸಿಜೆಪಿ ಹೇಳಿದೆ.

ಆಗಸ್ಟ್ 24ರಂದು ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಸೇರಲಿದ್ದು, ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಸಂಘಟನೆ ತಿಳಿಸಿದೆ. ದೇಶಾದ್ಯಂತ ವಿದ್ಯಾರ್ಥಿಗಳು, ಯುವಕರು, ಬೆಂಬಲಿಗರು ಹಾಗೂ ಸ್ವಯಂಸೇವಕರು ಸಭೆಯ ಬಳಿಕ ನಡೆಯಬಹುದಾದ ಕಾರ್ಯಕ್ರಮಗಳಿಗೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದೆ.

ನೀಟ್‌ ಪರೀಕ್ಷೆಗೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರ ಸೇರಿದಂತೆ ಸರ್ಕಾರ ಒಪ್ಪಿಕೊಂಡಿದ್ದ ಬೇಡಿಕೆಗಳ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಸಿಜೆಪಿ ಆರೋಪಿಸಿದೆ. ಕೇಂದ್ರ ಸರ್ಕಾರದ ನಿಯೋಗವೂ ಈ ವಿಚಾರದಲ್ಲಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸಂಘಟನೆ ತಿಳಿಸಿದೆ.

ಜುಲೈ 25ರಂದು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಸಿದ್ದ ಪ್ರತಿಭಟನೆಯನ್ನು ಸಿಜೆಪಿ ಹಿಂಪಡೆದಿತ್ತು. ಸರ್ಕಾರ ತನ್ನ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನೆಲೆಯಲ್ಲಿ ಚಳವಳಿ ಅಂತ್ಯಗೊಳಿಸುವುದಾಗಿ ಆಗ ಸಂಘಟನೆ ಘೋಷಿಸಿತ್ತು.

ಸಿಜೆಪಿ ಪ್ರಕಾರ, ಸರ್ಕಾರ ಒಪ್ಪಿಕೊಂಡಿದ್ದ ಪ್ರಮುಖ ಬೇಡಿಕೆಗಳಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಂಬಂಧಿತ ಘಟನೆಗಳಿಂದ ಮೃತಪಟ್ಟವರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವುದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಕೇಂದ್ರ ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸೇರಿವೆ.

ಇದರ ಜೊತೆಗೆ ಸಿಜೆಪಿಯ ಐದು ಅಂಶಗಳ ಪರೀಕ್ಷಾ ಸುಧಾರಣಾ ಪ್ರಸ್ತಾವನೆಯನ್ನು ಪರಿಗಣಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಂಘಟನೆಯೊಂದಿಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುವುದಾಗಿ ಭರವಸೆ ನೀಡಿತ್ತು.

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸೇರಿದಂತೆ ಕೆಲವು ಬೇಡಿಕೆಗಳು ಈಡೇರಿವೆ. ಆದರೆ ಯುವಜನರಿಗೆ ನೀಡಿರುವ ಪ್ರತಿಯೊಂದು ಭರವಸೆಯೂ ಜಾರಿಯಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

You cannot copy content of this page

Exit mobile version