ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ಜಾರಿ ಮತ್ತು ಪಿಎಲ್‌ಐ (PLI) ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅಖಿಲ ಭಾರತ ಮಟ್ಟದ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದೆ.
ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು ಆಗಸ್ಟ್ 23 ರಂದು ಸುತ್ತೋಲೆ ಹೊರಡಿಸಿದ್ದು, ಸೆಪ್ಟೆಂಬರ್ 11, ಸೆಪ್ಟೆಂಬರ್ 28, 29, 30 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಮತ್ತು ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಘೋಷಿಸಿದೆ.
ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆಯನ್ನು ಜಾರಿಗೊಳಿಸಲು 2024 ರ ಮಾರ್ಚ್ 8 ರಂದು ನಡೆದ 12 ನೇ ದ್ವಿಪಕ್ಷೀಯ ವೇತನ ಪರಿಷ್ಕರಣೆ ಒಪ್ಪಂದದಲ್ಲಿ ಐಬಿಎ (IBA) ಒಪ್ಪಿಗೆ ನೀಡಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಎರಡು ವರ್ಷ ಕಳೆದರೂ ಸರ್ಕಾರ ಈ ಬೇಡಿಕೆಯನ್ನು ಬಾಕಿ ಉಳಿಸಿಕೊಂಡಿದೆ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಇದಲ್ಲದೆ, ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಏಕಪಕ್ಷೀಯವಾಗಿ ಜಾರಿಗೆ ತರಲು ಮುಂದಾಗಿರುವ ಹೊಸ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಧನ (PLI) ಯೋಜನೆಯನ್ನು ಹಿಂಪಡೆಯಬೇಕು ಹಾಗೂ ದ್ವಿಪಕ್ಷೀಯ ಮಾತುಕತೆ ಮೂಲಕ ಮಾರ್ಪಾಡು ಮಾಡಬೇಕು ಎಂದು ಯೂನಿಯನ್‌ಗಳು ಆಗ್ರಹಿಸಿವೆ. ಹಿರಿಯ ಅಧಿಕಾರಿಗಳಿಗೆ ಭಾರಿ ಮೊತ್ತದ ಪ್ರೋತ್ಸಾಹಧನ ನೀಡಿ, ಇತರ ನೌಕರರಿಗೆ ಕಡಿಮೆ ನಿಗದಿಪಡಿಸುವ ಸರ್ಕಾರದ ತಾರತಮ್ಯ ನೀತಿಯು ನೌಕರರ ನಡುವೆ ಭೇದಭಾವ ಉಂಟುಮಾಡುತ್ತದೆ ಎಂದು ಒಕ್ಕೂಟ ಆರೋಪಿಸಿದೆ.
