ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಸತೀಶ್ ಮಹಾನಾ ಅವರು ಎದ್ದು ಹೊರನಡೆದಿದ್ದಾರೆ ಎಂದು ಆರೋಪಿಸಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ಹಾಗಾದರೆ ‘ಮೋಟಾ ಭಾಯ್’ ಅಮಿತ್ ಶಾ ಅವರು ಇವರನ್ನು ದೇಶದ್ರೋಹಿ ಎಂದು ಯಾವಾಗ ಘೋಷಿಸುತ್ತಾರೆ? ಸ್ವಘೋಷಿತ ನಾನ್-ಬಯೋಲಾಜಿಕಲ್ ನರೇಂದ್ರ ಮೋದಿ ಅವರು ದೇಶವನ್ನು ಗೌರವಿಸುವ ಬಗ್ಗೆ ಇವರಿಗೆ ಯಾವಾಗ ಉಪದೇಶ ನೀಡಲಿದ್ದಾರೆ? ‘ದೇಶಭಕ್ತ’ ಮೋಹನ್ ಭಾಗವತ್ ಅವರು ಇವರ ದೇಶಭಕ್ತಿಯ ಪ್ರಮಾಣಪತ್ರವನ್ನು ಯಾವಾಗ ರದ್ದುಗೊಳಿಸುತ್ತಾರೆ? ಮತ್ತು ಅರ್ನಾಬ್ ನೇತೃತ್ವದ ನಮ್ಮ ಪ್ರೈಮ್-ಟೈಮ್ ರಾಷ್ಟ್ರವಾದಿಗಳು ಇದರ ಬಗ್ಗೆ ಕೂಗಾಡುವ ಚರ್ಚೆಯನ್ನು ಯಾವಾಗ ನಡೆಸಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ವ್ಯವಸ್ಥೆಗೆ ರಾಷ್ಟ್ರೀಯತೆ ಎಂಬುದು ಇತರರನ್ನು ಪ್ರಶ್ನಿಸಲು ಬಳಸುವ ಅಸ್ತ್ರ ಮಾತ್ರವೇ ಹೊರತು, ಆ ಮಾನದಂಡಗಳನ್ನು ಅವರು ಎಂದಿಗೂ ತಮಗೆ ಅನ್ವಯಿಸಿಕೊಳ್ಳುವುದಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ. ಇತಿಹಾಸದಲ್ಲಿ ಅವರು ಎಂದಿಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಗಾನ ಅಥವಾ ಸಂವಿಧಾನವನ್ನು ಗೌರವಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
