Home ಇನ್ನಷ್ಟು ಕೋರ್ಟು - ಕಾನೂನು ‘ಜಿರಳೆ’ ಹೇಳಿಕೆ ವಿವಾದ: ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

‘ಜಿರಳೆ’ ಹೇಳಿಕೆ ವಿವಾದ: ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

0

ನವದೆಹಲಿ: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯನ್ನು ಸಂದರ್ಭದಿಂದ ಬೇರ್ಪಡಿಸಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ ಹಾಗೂ ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪದ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಿಬಿಐಯಿಂದ ಪ್ರತಿಕ್ರಿಯೆ ಕೇಳಿದೆ.

CJI ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ಸಂಬಂಧಪಟ್ಟ ಕೇಂದ್ರ ಸರ್ಕಾರದ ಇಲಾಖೆಗಳಿಗೆ, ಸಿಬಿಐ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ನಿಗದಿಪಡಿಸಲಾಗಿದೆ.

ವಿವಾದಕ್ಕೆ ಕಾರಣವಾಯ್ತು ‘ಜಿರಳೆ’ ಹೇಳಿಕೆ
ಮೇ 15ರಂದು ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನಕಲಿ ವಕೀಲರು ಮತ್ತು ಕಾನೂನು ಪದವಿಗಳ ವಿಚಾರ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ CJI ಸೂರ್ಯಕಾಂತ್ ಅವರು ‘ಜಿರಳೆ’ ಎಂಬ ಪದವನ್ನು ರೂಪಕವಾಗಿ ಬಳಸಿದ್ದರು.

ನಂತರ ನ್ಯಾಯಾಲಯದ ವರ್ಚುವಲ್ ಕಲಾಪದ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಹೇಳಿಕೆಯ ಮೂಲ ಸಂದರ್ಭಕ್ಕೆ ಭಿನ್ನವಾದ ಅರ್ಥ ನೀಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿದಾರರ ಆರೋಪಗಳಿವು
ವಕೀಲ ರಾಜಾ ಚೌಧರಿ ಸಲ್ಲಿಸಿರುವ ಅರ್ಜಿಯಲ್ಲಿ, ನ್ಯಾಯಾಲಯದ ಮೌಖಿಕ ಹೇಳಿಕೆಗಳನ್ನು ಸಂದರ್ಭದಿಂದ ಬೇರ್ಪಡಿಸಿ ವಿಡಿಯೋ ಕ್ಲಿಪ್‌ಗಳು, ಮೀಮ್‌ಗಳು ಹಾಗೂ ಸಾಮಾಜಿಕ ಜಾಲತಾಣದ ವಿಷಯಗಳಾಗಿ ಪರಿವರ್ತಿಸಿ ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ದೂರಲಾಗಿದೆ.

ನ್ಯಾಯಾಲಯದ ಹೇಳಿಕೆಗಳು ಹಾಗೂ ರೂಪಕಗಳನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುವುದು, ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸುವುದು ಅಥವಾ ಹಣಗಳಿಕೆಯ ಉದ್ದೇಶದಿಂದ ಪ್ರಸಾರ ಮಾಡುವವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ಯೂ ಮುನ್ನೆಲೆಗೆ
CJI ಅವರ ‘ಜಿರಳೆ’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವ್ಯಂಗ್ಯಾತ್ಮಕ ಅಭಿಯಾನವೂ ಗಮನ ಸೆಳೆದಿತ್ತು. ಈ ಅಭಿಯಾನವು ಯುವಜನರು, ನಿರುದ್ಯೋಗ, ಪರೀಕ್ಷಾ ಅಕ್ರಮಗಳು ಹಾಗೂ NEET-UG ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.

ಅರ್ಜಿದಾರರ ಪ್ರಕಾರ, ನ್ಯಾಯಾಲಯದ ಹೇಳಿಕೆಗಳನ್ನು ತಿರುಚಿ ಪ್ರಸಾರ ಮಾಡುವ ಮೂಲಕ ನ್ಯಾಯಾಂಗದ ಘನತೆ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಇಂತಹ ಡಿಜಿಟಲ್ ವಿಷಯಗಳನ್ನು ವಾಣಿಜ್ಯವಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಪರಿಣಾಮಕಾರಿ ವ್ಯವಸ್ಥೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೀಗ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಿಬಿಐ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳಿಂದ ಪ್ರತಿಕ್ರಿಯೆ ಕೇಳಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಕಲಾಪಗಳ ಆಯ್ದ ವಿಡಿಯೋಗಳನ್ನು ಎಡಿಟ್ ಮಾಡಿ ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಬಳಸುವ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ನಿರ್ದೇಶನಗಳು ಹೊರಬರುವ ಸಾಧ್ಯತೆ ಇದೆ.

You cannot copy content of this page

Exit mobile version