Home ದೇಶ ನ್ಯೂಸ್‌ಲಾಂಡ್ರಿಯಲ್ಲಿ ಲೈಂಗಿಕ ಕಿರುಕುಳ ದೂರುಗಳು: 2017ರಿಂದ ನಾಲ್ಕು ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪ್ರಕಟಿಸಿದ ಮಾಧ್ಯಮ...

ನ್ಯೂಸ್‌ಲಾಂಡ್ರಿಯಲ್ಲಿ ಲೈಂಗಿಕ ಕಿರುಕುಳ ದೂರುಗಳು: 2017ರಿಂದ ನಾಲ್ಕು ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪ್ರಕಟಿಸಿದ ಮಾಧ್ಯಮ ಸಂಸ್ಥೆ

0

ದೆಹಲಿ: ಮಾಜಿ ಉದ್ಯೋಗಿಗಳು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಮತ್ತು ತಾರತಮ್ಯದ ವಾತಾವರಣದ ಆರೋಪಗಳನ್ನು ಮಾಡಿದ ಬೆನ್ನಲ್ಲೇ, ಖ್ಯಾತ ಸ್ವತಂತ್ರ ಮಾಧ್ಯಮ ಸಂಸ್ಥೆ ‘ನ್ಯೂಸ್‌ಲಾಂಡ್ರಿ’ (Newslaundry) ಮಂಗಳವಾರ ಮಹತ್ವದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 2017 ರಿಂದ ಸಂಸ್ಥೆಯ ಆಂತರಿಕ ದೂರುಗಳ ಸಮಿತಿಯು (ICC) ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನಾಲ್ಕು ದೂರುಗಳನ್ನು ಸ್ವೀಕರಿಸಿದ್ದು, ಆರೋಪಿಗಳನ್ನು ಕೆಲಸದಿಂದ ತೆಗೆದುಹಾಕುವುದು, ಅಮಾನತುಗೊಳಿಸುವುದು ಸೇರಿದಂತೆ ಕಠಿಣ ಶಿಸ್ತುಕ್ರಮಗಳನ್ನು ಕೈಗೊಂಡಿದೆ ಎಂದು ದೃಢಪಡಿಸಿದೆ.

ತನ್ನ ಮಾಜಿ ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲಸದ ಸ್ಥಳದ ವಾತಾವರಣದ ಕುರಿತು ಸಾಲು ಸಾಲು ಆರೋಪಗಳನ್ನು ಮಾಡಿದ ನಂತರ ನ್ಯೂಸ್‌ಲಾಂಡ್ರಿ ಮೊದಲ ಬಾರಿಗೆ ಬಹಿರಂಗವಾಗಿ ಈ ವಿಷಯವನ್ನು ಒಪ್ಪಿಕೊಂಡಿದೆ. ಆದಾಗ್ಯೂ, ತಾನು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆ (POSH) ಕಾಯ್ದೆಯನ್ನು ಸಂಪೂರ್ಣವಾಗಿ ಪಾಲಿಸುತ್ತಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

ದೆಹಲಿ ಮಹಿಳಾ ಆಯೋಗದಿಂದ ಪ್ರಕರಣದ ಪರಿಶೀಲನೆ

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದ್ದ ಈ ವಿಚಾರವು ಈಗ ಅಧಿಕೃತ ಪ್ರಕ್ರಿಯೆಗೆ ಒಳಪಟ್ಟಿದೆ. ಸ್ಟೋರಿಬೋರ್ಡ್18 ವರದಿ ಪ್ರಕಾರ, ದೆಹಲಿ ಮಹಿಳಾ ಆಯೋಗವು (DCW) ನ್ಯೂಸ್‌ಲಾಂಡ್ರಿ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ಆರಂಭಿಸಿದೆ.

ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೇಳಿಕೆ ನೀಡಿರುವ ನ್ಯೂಸ್‌ಲಾಂಡ್ರಿ, “ನಾವು ‘ಪೋಷ್’ (POSH) ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ನಿಯಮ ಪಾಲನೆ ಎಂದರೆ ಅಲ್ಲೇನೂ ಸುಧಾರಣೆಗೆ ಅವಕಾಶವಿಲ್ಲ ಎಂದರ್ಥವಲ್ಲ. ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವವರು ಹಾಗೂ ಮಾಜಿ ಉದ್ಯೋಗಿಗಳು ತಮ್ಮ ಸಲಹೆ-ಸೂಚನೆಗಳನ್ನು ನಮಗೆ ಬರೆದು ಕಳುಹಿಸಬಹುದು” ಎಂದು ತಿಳಿಸಿದೆ.

ಅಲ್ಲದೆ, ಕೆಲವು ಉದ್ಯೋಗಿಗಳ ವಿರುದ್ಧ ಕೇಳಿಬಂದಿರುವ “ಸಾಕ್ಷ್ಯಾಧಾರಗಳಿಲ್ಲದ ಮತ್ತು ಕಾಲ್ಪನಿಕ ಆರೋಪಗಳನ್ನು” ಸಂಸ್ಥೆ ತಳ್ಳಿಹಾಕಿದೆ. ಸುಳ್ಳು ಆರೋಪಗಳಿಗೆ ಉತ್ತರಿಸದಿರುವುದನ್ನು ಸಂಸ್ಥೆಯ ದೌರ್ಬಲ್ಯವೆಂದು ಭಾವಿಸಬಾರದು ಎಂದೂ ಹೇಳಿದೆ.

ಮಾಜಿ ಉದ್ಯೋಗಿಗಳ ಗಂಭೀರ ಆರೋಪಗಳು

ನ್ಯೂಸ್‌ಲಾಂಡ್ರಿಯ ಮಾಜಿ ಹಿರಿಯ ವರದಿಗಾರ್ತಿ ಸುಮೇಧಾ ಮಿತ್ತಲ್ ಸೇರಿದಂತೆ ಪ್ರಿಯಾಂಕಾ ಈಶ್ವರಿ ಎಂಬ ಮಾಜಿ ಉದ್ಯೋಗಿ, ಸಂಸ್ಥೆಯ ಹಿರಿಯ ಪತ್ರಕರ್ತರು ಮಹಿಳಾ ಸಹದ್ಯೋಗಿಗಳೊಂದಿಗೆ ನಡೆದುಕೊಳ್ಳುವ ರೀತಿ ಹಾಗೂ ಸುದ್ದಿ ಕೊಠಡಿಯಲ್ಲಿದ್ದ ವಾತಾವರಣದ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದರು. ಇದರ ಬೆನ್ನಲ್ಲೇ ಈ ಆಂತರಿಕ ದೂರುಗಳ ವಿಚಾರ ಹೊರಬಿದ್ದಿದೆ.

ತರುಣ್ ತೇಜ್‌ಪಾಲ್ ಲೇಖನ ತೆರವು ಗೊಂದಲ

ಇತ್ತೀಚೆಗೆ ‘ತೆಹಲ್ಕಾ’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೇಜ್‌ಪಾಲ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ ನ್ಯೂಸ್‌ಲಾಂಡ್ರಿ 2014 ರಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಲೇಖನವೊಂದನ್ನು ತೆಗೆದುಹಾಕಿತ್ತು. ಆ ಲೇಖನದಲ್ಲಿ ಸಂತ್ರಸ್ತೆಯ ನಡವಳಿಕೆಯನ್ನು ಪ್ರಶ್ನಿಸಲಾಗಿತ್ತು.

ಲೇಖನ ತೆರವುಗೊಳಿಸಿ ಸಂಪಾದಕೀಯ ಟಿಪ್ಪಣಿ ಬರೆದಿದ್ದ ನ್ಯೂಸ್‌ಲಾಂಡ್ರಿ, “ಆ ಹಳೆಯ ಲೇಖನವು ಪ್ರಸ್ತುತ ನಮ್ಮ ಮಾಧ್ಯಮ ಮೌಲ್ಯಗಳಿಗೆ ಬದ್ಧವಾಗಿಲ್ಲ” ಎಂದು ಹೇಳಿತ್ತು. ಆದರೆ, 12 ವರ್ಷಗಳ ಕಾಲ ಆ ಲೇಖನವನ್ನು ತನ್ನ ಜಾಲತಾಣದಲ್ಲೇ ಉಳಿಸಿಕೊಂಡಿದ್ದರ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ವಿವಾದದ ಬೆನ್ನಲ್ಲೇ ಮಾಜಿ ಉದ್ಯೋಗಿಗಳು ಸಂಸ್ಥೆಯ ಆಂತರಿಕ ಪರಿಸ್ಥಿತಿಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ.

ಯಾವುದೇ ಬೆದರಿಕೆಗಳಿಗೆ ಮಣಿಯುವುದಿಲ್ಲ ಎಂದಿರುವ ನ್ಯೂಸ್‌ಲಾಂಡ್ರಿ, 2012 ರಲ್ಲಿ ಸಂಸ್ಥೆ ಆರಂಭವಾದಾಗಿನಿಂದಲೂ “ಯಾರೂ ವಿಮರ್ಶೆ ಅಥವಾ ಪರಿಶೀಲನೆಯಿಂದ ಹೊರತಲ್ಲ, ನ್ಯೂಸ್‌ಲಾಂಡ್ರಿ ಕೂಡ ಇದಕ್ಕೆ ಹೊರತಲ್ಲ” ಎಂಬ ತತ್ವಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ.

You cannot copy content of this page

Exit mobile version