ಈಗಾಗಲೇ ವಿವಾದದಲ್ಲಿ ಸಿಲುಕಿ ನಲುಗುತ್ತಿರುವ ಬಿಜೆಪಿಗೆ ಇರುವ ತಲೆನೋವು ಸಾಲದೆನ್ನುವಂತೆ ಹೊಸದೊಂದು ತಲೆನೋವು ಎದುರಾಗಿದೆ. ಉತ್ತರ ಪ್ರದೇಶದ ಬಿಜೆಪಿ ನಾಯಕ, 70 ವರ್ಷದ ಬಬನ್ ಸಿಂಗ್ ರಘುವಂಶಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಕ್ಷಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿಡಿಯೋದಲ್ಲಿ ಇವರು ಒಬ್ಬ ಮಹಿಳಾ ಡ್ಯಾನ್ಸರ್ ಜೊತೆ “ಅಶ್ಲೀಲ” ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಜೆಪಿ ತಕ್ಷಣದ ಪರಿಣಾಮವಾಗಿ ಇವರನ್ನು ಪಕ್ಷದಿಂದ ಕಿತ್ತುಹಾಕಿದೆ!
ಮದುವೆಯ ಕಾರ್ಯಕ್ರಮದಲ್ಲಿ ಶೂಟ್ ಆಗಿರುವ ಈ ವಿಡಿಯೋದಲ್ಲಿ, ಬಬನ್ ಸಿಂಗ್ ರಘುವಂಶಿ ಅವರು ಡ್ಯಾನ್ಸರ್ ಒಬ್ಬಳನ್ನು ಮಡಿಲಲ್ಲಿ ಕೂರಿಸಿಕೊಂಡು, ಅನುಚಿತವಾಗಿ ವರ್ತಿಸಿದ್ದಾರೆ. ಈ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡಿದೆ. ಬಿಜೆಪಿಯ ಬಲ್ಲಿಯಾ ಜಿಲ್ಲಾ ಅಧ್ಯಕ್ಷ ಸಂಜಯ್ ಮಿಶ್ರಾ, “ಈ ವಿಡಿಯೋ ಗಂಭೀರವಾದದ್ದು. ರಾಜ್ಯ ಘಟಕದ ಸಾಮಾನ್ಯ ಕಾರ್ಯದರ್ಶಿ ಗೋವಿಂದ್ ನಾರಾಯಣ್ ಶುಕ್ಲಾ ಅವರು ರಘುವಂಶಿಯವರನ್ನು ಪಕ್ಷದಿಂದ ತಕ್ಷಣ ಉಚ್ಚಾಟಿಸಿದ್ದಾರೆ” ಎಂದು ಹೇಳಿದ್ದಾರೆ.
ಬಬನ್ ಸಿಂಗ್ ರಘುವಂಶಿ ತಮ್ಮ ಮೇಲಿನ ಆರೋಪವನ್ನು ತೀವ್ರವಾಗಿ ತಳ್ಳಿಹಾಕಿದ್ದಾರೆ. “ಈ ವಿಡಿಯೋ ಫೇಕ್! ನನ್ನ ಇಮೇಜ್ ಖರಾಬ್ ಮಾಡೋಕೆ ಒಳಗಿನವರೇ ಷಡ್ಯಂತ್ರ ಮಾಡಿದ್ದಾರೆ” ಅಂತ ಗುಡುಗಿದ್ದಾರೆ. “ನಾನು 70 ವರ್ಷದವನು, ಬಿಹಾರದಲ್ಲಿ ಒಂದು ಮದುವೆಗೆ ಹೋಗಿದ್ದೆ, ಡ್ಯಾನ್ಸರ್‌ಗೆ ಹಣ ಕೊಟ್ಟಿದ್ದೆ, ಆದರೆ ಯಾವುದೇ ತಪ್ಪು ಮಾಡಿಲ್ಲ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿಯ ಬಾನ್ಸ್‌ದಿಹ್ ಶಾಸಕ ಕೇತಕೀ ಸಿಂಗ್ ಕುಟುಂಬದವರ ಕೈವಾಡ ಇದೆ ಅಂತಲೂ ಆರೋಪಿಸಿದ್ದಾರೆ.
ಬಿಜೆಪಿಗೆ ಈ ವಿವಾದ ತಲೆನೋವು ತಂದಿತ್ತು. ಪಕ್ಷದ ಮೇಲಿನ ಒತ್ತಡ ಹೆಚ್ಚಾದ ಕೂಡಲೇ, ರಘುವಂಶಿಯವರನ್ನು ಪಕ್ಷದಿಂದ ಹೊರಗಿಟ್ಟು ತಾನು ಕೈ ತೊಳೆದುಕೊಂಡಿದೆ. ಇದೇ ವಿಚಾರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದು, ವಿಡಿಯೋದ ಸತ್ಯಾಸತ್ಯತೆಯನ್ನು ತನಿಖೆ ಮಾಡಬೇಕು ಅಂತ ಕೇಳಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಬಿಜೆಪಿಯ “ನೈತಿಕತೆ”ಯನ್ನೇ ಪ್ರಶ್ನೆ ಮಾಡಿದ್ದಾರೆ. “70 ವರ್ಷದವನಿಗೆ ಇಂತಹ ವರ್ತನೆ ಶೋಭೆಯೇ?” ಅಂತ ಕೆಲವರು ಕಿಡಿಕಾರಿದ್ದಾರೆ. ಇನ್ನೊಂದು ಕಡೆ, ವಿರೋಧ ಪಕ್ಷಗಳು ಈ ವಿಚಾರವನ್ನು ಒಗ್ಗರಾಣೆಯಾಗಿ ಬಳಸಿಕೊಂಡು ಬಿಜೆಪಿಯ ವಿರುದ್ಧ ಟೀಕೆಯ ಗುಂಡು ಸಿಡಿಸಿವೆ.
ಬಬನ್ ಸಿಂಗ್ ರಘುವಂಶಿ, ಬಾನ್ಸ್‌ದಿಹ್ ಕ್ಷೇತ್ರದಿಂದ 1993ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರು. ರಾಸ್ರಾದ ಕಿಸಾನ್ ಕೋ-ಆಪರೇಟಿವ್ ಮಿಲ್‌ನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಈ ವಿವಾದದಿಂದ ಅವರ ರಾಜಕೀಯ ಭವಿಷ್ಯದ ಮೇಲೆ ದೊಡ್ಡ ಕಾರ್ಮೋಡ ಕವಿದಿದೆ.