ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ 4 ರಹಸ್ಯ ಸಭೆಗಳನ್ನು ನಡೆಸಿದ್ದಾರೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಾಯಕ ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಬುಧವಾರ ಆರೋಪಿಸಿದ್ದಾರೆ.

ಪಕ್ಷದ ಪ್ರಚಾರ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಹರಿಪ್ರಸಾದ್ ಈ ಹೇಳಿಕೆ ನೀಡಿದ್ದಾರೆ. ಮುಂಬರುವ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ನಾಗರಿಕ ಸಂಸ್ಥೆ ಚುನಾವಣೆಗೆ ಬಿಜೆಪಿಯ ಉಸ್ತುವಾರಿಯಾಗಿ ರಾಮ್ ಮಾಧವ್ ಅವರನ್ನು ನೇಮಕ ಮಾಡಲಾಗಿದೆ ಎಂಬುದನ್ನು ಹರಿಪ್ರಸಾದ್ ಈ ವೇಳೆ ಉಲ್ಲೇಖಿಸಿದರು.

“ಮಾಧವ್ ಅವರು ಕೊಲಂಬೊ (ಶ್ರೀಲಂಕಾ) ಮತ್ತು ಲಂಡನ್‌ನಲ್ಲಿ (ಯುಕೆ) ಪಾಕಿಸ್ತಾನದೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಜಿಬಿಎ ಚುನಾವಣೆಯ ಕೆಲಸ ಮಾಡಬೇಕಾದ ವ್ಯಕ್ತಿಯೊಬ್ಬರು ಹಿಲ್ಟನ್ ಹೋಟೆಲ್‌ಗೆ ಹೋಗಿ ಪಾಕಿಸ್ತಾನದ ಉನ್ನತ ಅಧಿಕಾರಿಗಳನ್ನು, ಅದರಲ್ಲಿಯೂ ಅಪಾಯಕಾರಿ ಐಎಸ್‌ಐನ (ISI) ಮಾಜಿ ಮೇಜರ್ ಜನರಲ್ ಅವರನ್ನು ಭೇಟಿಯಾಗುತ್ತಾರೆ. ಅವರು ಇಂತಹ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ,” ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಹರಿಪ್ರಸಾದ್ ಹೇಳಿದರು.

ಆದರೆ ರಾಮ್ ಮಾಧವ್ ಈ ಆರೋಪವನ್ನು ಈಗಾಗಲೇ ನಿರಾಕರಿಸಿದ್ದು, ತಾವು ಪಾಕಿಸ್ತಾನದೊಂದಿಗೆ ಯಾವುದೇ ‘ಟ್ರಾಕ್-2’ ಮಾತುಕತೆಯಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ಆಯೋಜಿಸಿದ್ದ ‘ದಕ್ಷಿಣ ಏಷ್ಯಾ ಸಂವಾದ’ಕ್ಕಾಗಿ ತಾವು ಕೊಲಂಬೊಗೆ ಹೋಗಿದ್ದಾಗಿ ಮಾಧವ್ ಜೂನ್ 27 ರಂದು ಟ್ವೀಟ್ ಮೂಲಕ ತಿಳಿಸಿದ್ದರು.

“ಇಷ್ಟೊಂದು ದೇಶಗಳ ಉಪಸ್ಥಿತಿಯಲ್ಲಿ ಯಾವುದೇ ಟ್ರಾಕ್-2 ಮಾತುಕತೆ ನಡೆಯುವುದಿಲ್ಲ. ನಾನು ಎರಡು ದಿನಗಳ ಆ ಸಂವಾದದಲ್ಲಿ ಭಾಗವಹಿಸಿಲ್ಲ. ಕೇವಲ ಒಂದು ಗೋಷ್ಠಿಯಲ್ಲಿ ಮಾತನಾಡಲು ನನಗೆ ಆಹ್ವಾನವಿತ್ತು, ಅದರಲ್ಲಿ ಭಾಗವಹಿಸಿ ನಾನು ಅಲ್ಲಿಂದ ನಿರ್ಗಮಿಸಿದೆ,” ಎಂದು ಅವರು ಹೇಳಿದ್ದಾರೆ.

ಆದರೆ, ಹರಿಪ್ರಸಾದ್ ಅವರು ಈ ಬೆಳವಣಿಗೆಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಇತ್ತೀಚೆಗೆ ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಬೆಂಬಲಿಸಿ ನೀಡಿದ್ದ ಹೇಳಿಕೆಗೆ ಲಿಂಕ್ ಮಾಡಿದ್ದಾರೆ.

“ಆಪರೇಷನ್ ಸಿಂಧೂರ್ ನಡೆದ ಎರಡು ತಿಂಗಳ ನಂತರ, ರಾಮ್ ಮಾಧವ್ ಲಂಡನ್‌ನಲ್ಲಿ ಪಾಕಿಸ್ತಾನದೊಂದಿಗೆ ಸಭೆ ನಡೆಸಿದ್ದಾರೆ,” ಎಂದು ಹರಿಪ್ರಸಾದ್ ಹೇಳಿದರು. “ಮನ್ಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಅಧಿಕಾರದಲ್ಲಿದ್ದಾಗ ನಮ್ಮ ನಿಲುವು ಸ್ಪಷ್ಟವಾಗಿತ್ತು: ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುವವರೆಗೆ ನಾವು ಅದರೊಂದಿಗೆ ಮಾತನಾಡುವುದಿಲ್ಲ ಎಂಬುದು ನಮ್ಮ ನಿಲುವಾಗಿತ್ತು,” ಎಂದರು.

ಈ ಸಭೆಗಳನ್ನು ನಡೆಸಲು ತಮಗೆ ಅಧಿಕಾರವಿತ್ತೇ ಎಂಬುದನ್ನು ರಾಮ್ ಮಾಧವ್ ಸ್ಪಷ್ಟಪಡಿಸಬೇಕು ಎಂದು ಹರಿಪ್ರಸಾದ್ ಪ್ರಶ್ನಿಸಿದರು. “ಅವರು ವಿದೇಶಾಂಗ ಸಚಿವರೂ ಅಲ್ಲ, ಶಾಸಕರೂ ಅಲ್ಲ ಅಥವಾ ಸಂಸದರೂ ಅಲ್ಲ. ಹಾಗಿರುವಾಗ ಆರ್‌ಎಸ್‌ಎಸ್ ವಿದೇಶಾಂಗ ನೀತಿಯ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಿದೆ?” ಎಂದು ಅವರು ಪ್ರಶ್ನಿಸಿದರು.

ಇದೇ ವೇಳೆ ಹರಿಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ 2015 ರ ದಿಢೀರ್ ಪಾಕಿಸ್ತಾನ ಭೇಟಿ ಮತ್ತು 2005 ರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಶ್ಲಾಘಿಸಿದ್ದನ್ನು ನೆನಪಿಸಿಕೊಂಡರು.

“ಆದರೆ ಚುನಾವಣೆ ಬಂದಾಗ, (ಬಿಜೆಪಿ) ಪಾಕಿಸ್ತಾನ, ಚಿಕನ್, ಮಟನ್, ಮೀನು, ಮಂಗಳಸೂತ್ರ, ಹಲಾಲ್, ಹಿಜಾಬ್ ಮತ್ತು ಅಜಾನ್ ಬಗ್ಗೆ ಮಾತನಾಡುತ್ತದೆ. ಅವರು ಸಾಮಾನ್ಯ ಕಾರ್ಮಿಕರು ಅಥವಾ ರೈತರ ಬಗ್ಗೆ ಮಾತನಾಡುವುದಿಲ್ಲ,” ಎಂದು ಹರಿಪ್ರಸಾದ್ ಕಿಡಿಕಾರಿದರು.

Related Articles

ಇತ್ತೀಚಿನ ಸುದ್ದಿಗಳು