ಬೊಗಸೆಗೆ ದಕ್ಕಿದ್ದು-86 : ಇಟಲಿ-ಜರ್ಮನ್ ಫಾದರ್‌ಲ್ಯಾಂಡಿನ ಫ್ಯಾಸಿಸ್ಟ್-ನಾಜಿ ಸಂತಾನ!

“..ಆರೆಸ್ಸೆಸ್ ಎಂಬ ಸಂಘಟನೆಯು ನಕಲಿ “ಹಿಂದೂತ್ವ”ದ “ವಿಷ ವೃಕ್ಷ” ಹೇಗಾಯಿತು ಎಂಬ ಕುರಿತು ಮತ್ತೊಮ್ಮೆ ಸರಣಿ ಬರಹ ಬರೆಯಲು ಅದುವೇ ತಕ್ಷಣದ ಪ್ರಚೋದನೆಯಾಯಿತು. ಅದಕ್ಕಾಗಿ ಬೊಮ್ಮಾಯಿಯವರಿಗೆ ಧನ್ಯವಾದ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಇತ್ತೀಚೆಗೆ “ಕಾಂಗ್ರೆಸನ್ನು ಸ್ಥಾಪನೆ ಮಾಡಿದ್ದು ಬ್ರಿಟಿಷರು. ಆರೆಸ್ಸೆಸ್ ಸ್ಥಾಪನೆ ಮಾಡಿದ್ದು ಭಾರತೀಯರು. ಆದುದರಿಂದ ನೋಂದಣಿ ಮಾಡಬೇಕಾದ ಅಗತ್ಯವಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದಾಗ, “ಕಾಂಗ್ರೆಸನ್ನು ಬ್ರಿಟಿಷರ ದಬ್ಬಾಳಿಕೆಗೆ ರೋಸಿದ, ಭಾರತೀಯನೇ ಆಗಿಬಿಟ್ಟ ಆತ್ಮಸಾಕ್ಷಿಯುಳ್ಳ ಬ್ರಿಟಿಷ್ ಪ್ರಜೆಯೊಬ್ಬರು (ಎ.ಓ.ಹ್ಯೂಮ್) ಸ್ಥಾಪಿಸಿದರು. ಅದು ಬ್ರಿಟಿಷರ ವಿರುದ್ಧ ಹೋರಾಡಿತು. ಭಾರತೀಯವಾಗಿದ್ದೂ ಆತ್ಮಸಾಕ್ಷಿಯಿಲ್ಲದೇ ಬ್ರಿಟಿಷರ ಚಾಕರಿ ಮಾಡಿದ ಆರೆಸ್ಸೆಸ್ಸನ್ನು ಸ್ಥಾಪನೆ ಮಾಡಿದ ಮೂಂಜೆ ಮತ್ತು ಹೆಡ್ಗೇವಾರ್ ವಿಶ್ವವೇ ಇಂದು ದ್ವೇಷಿಸುವ ವಿದೇಶಿ ಸರ್ವಾಧಿಕಾರಿಗಳಾದ ಇಟಲಿಯ ಮುಸ್ಸೋಲಿನಿ ಮತ್ತು ಜರ್ಮನಿಯ ಹಿಟ್ಲರ್‌ನ ತತ್ವ ಮತ್ತು ಸಂಘಟನೆಯನ್ನೇ ಕಾಪಿ ಮಾಡಿದರು ಎಂಬುದು ನಿಮಗೆ ಗೊತ್ತೆ? ಮೂಂಜೆ ಸ್ವತಃ ಮುಸ್ಸೋಲಿನಿಯನ್ನು ಭೇಟಿ ಮಾಡಿದ್ದರು. ಹಾಗಾದರೆ, ಭಾರತೀಯರು ಸ್ಥಾಪಿಸಿರುವ ಆರೆಸ್ಸೆಸ್ ಹೊರತಾದ ಇತರ ಸಂಘಟನೆಗಳು ಮಾತ್ರ ಯಾಕೆ ನೋಂದಣಿ ಮಾಡಬೇಕು?” ಮುಂತಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದೆ.

ಆದರೆ, ಕಾಂಗ್ರೆಸ್ ಸ್ಥಾಪನೆ ಮಾಡಿದ್ದು ವಿದೇಶಿ ವ್ಯಕ್ತಿ ಎಂಬ ಆರೆಸ್ಸೆಸ್ಸಿನ ಕುತ್ಸಿತ ಪ್ರಚಾರ ತೀರಾ ಹಳೆಯದಾದರೂ, ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದ ಒಬ್ಬ ವ್ಯಕ್ತಿ ಬೀದಿಬದಿಯ ಗಮಾರನಂತೆ ಈ ಅತಾರ್ಕಿಕ, ಸತ್ಯ ಮರೆಮಾಚುವ ಹೇಳಿಕೆ ನೀಡಿದುದು ನನಗೆ ಕಿರಿಕಿರಿ ಉಂಟುಮಾಡಿತು. “ಫಾದರ್‌ಲ್ಯಾಂಡ್” ಪರಿಕಲ್ಪನೆಯ ಜರ್ಮನಿ ಮತ್ತು ಇಟಲಿಯಲ್ಲಿ ಹುಟ್ಟಿದ ಎರಡು ರಾಷ್ಟ್ರೀಯವಾದಿ ಸೋಗಿನ ಭಯಾನಕ ನರಹಂತಕ ಸಂಘಟನೆಗಳ ಪ್ರಭಾವದಲ್ಲಿ ನೆರಳಿನಂತೆ ಹುಟ್ಟಿದ- ಆರ್ಯನ್ ಶ್ರೇಷ್ಟತೆಯ ಅದೇ ಭ್ರಮೆಯ ಮತ್ತು “ಪಿತೃಭೂಮಿ” ಪರಿಕಲ್ಪನೆ ಅನುಸರಿಸುವ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯ ಚಿತ್ಪಾವನ ಬ್ರಾಹ್ಮಣರಿಂದ ಹುಟ್ಟಿ, ಅವರ ನಿಯಂತ್ರಣದಲ್ಲೇ ಬೆಳೆದಿರುವ- ಆರೆಸ್ಸೆಸ್ ಎಂಬ ಸಂಘಟನೆಯು ನಕಲಿ “ಹಿಂದೂತ್ವ”ದ “ವಿಷ ವೃಕ್ಷ” ಹೇಗಾಯಿತು ಎಂಬ ಕುರಿತು ಮತ್ತೊಮ್ಮೆ ಸರಣಿ ಬರಹ ಬರೆಯಲು ಅದುವೇ ತಕ್ಷಣದ ಪ್ರಚೋದನೆಯಾಯಿತು. ಅದಕ್ಕಾಗಿ ಬೊಮ್ಮಾಯಿಯವರಿಗೆ ಧನ್ಯವಾದ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್ ಸಂಘಟನೆಯನ್ನು 1925ರಲ್ಲಿ ಡಾ. ಬಿ.ಎಸ್. ಮೂಂಜೆ ಮತ್ತು ಡಾ. ಕೆ.ಬಿ. ಹೆಡ್ಗೆವಾರ್ ಎಂಬ ಇಬ್ಬರು ವಿಫಲ ವೈದ್ಯರು ಸ್ಥಾಪಿಸಿದರು. ಈ ಅವಧಿಯಲ್ಲಿ ಯುರೋಪಿಯನ್ ಫ್ಯಾಸಿಸ್ಟ್ ಮಾದರಿಗಳು ಅಂತರರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದವು. ಆರ್‌ಎಸ್‌ಎಸ್ ಮತ್ತು ಯುರೋಪಿಯನ್ ಅರೆಸೈನಿಕ ಗುಂಪುಗಳಾದ ಬೆನಿಟೊ ಮುಸೊಲಿನಿಯ ಬ್ಲ್ಯಾಕ್‌ಶರ್ಟ್‌ಗಳು ಅಥವಾ ಅಡಾಲ್ಫ್ ಹಿಟ್ಲರ್‌ನ ಶುಟ್ಜ್‌ಸ್ಟಾಫೆಲ್ (ಎಸ್‌ಎಸ್) ಮತ್ತು ಸ್ಟರ್ಮಾಬ್ಟೀಲುಂಗ್ (ಎಸ್‌ಎ, ಬ್ರೌನ್‌ಶರ್ಟ್‌ಗಳು) ನಡುವಿನ ಹೋಲಿಕೆಗಳನ್ನು ಅರ್ಥಮಾಡಿಕೊಳ್ಳಲು ಇವುಗಳ ನಡುವಿನ ನೇರ ಐತಿಹಾಸಿಕ ಸಂಪರ್ಕಗಳು ಮತ್ತು ತತ್ವ ಮತ್ತು ಸಂಘಟನೆಗಳ ರಚನೆಗಳಲ್ಲಿ ಇರುವ ಕಣ್ಣಿಗೆ ರಾಚುವ ಸಾಮ್ಯತೆಗಳನ್ನು ನೋಡಬೇಕು! ಹಿಟ್ಲರನ “ಎಸ್ಎಸ್” ಮತ್ತು ಹೆಡ್ಗೆವಾರ್‌ನ “ಆರ್‌ಎಸ್‌ಎಸ್” ಹೆಸರುಗಳ ನಡುವಿನ ಸಾಮ್ಯತೆಗಳನ್ನೇ ನೋಡಿ. ಅದು ಕಾಕತಾಳೀಯವಲ್ಲ; ಮತ್ತು ಅದು ಅಲ್ಲಿಗೆ ಮುಗಿಯುವುದಿಲ್ಲ. (ಶಿವಸೇನೆಯೂ ಎಸ್‌ಎಸ್ ಎಂಬುದನ್ನು ಮರೆಯದಿರಿ!)

​ಐತಿಹಾಸಿಕ ಕೊಂಡಿ ಮತ್ತು ನೇರ ಸ್ಫೂರ್ತಿ
​ಇವುಗಳ ನಡುವಿನ ಸಂಬಂಧವು ಕೇವಲ ಊಹಾತ್ಮಕವಲ್ಲ; ಇದನ್ನು ಐತಿಹಾಸಿಕವಾಗಿ ದಾಖಲಿಸಲಾಗಿದೆ. ಮಾರ್ಚ್ 1931ರಲ್ಲಿ, ಹೆಡ್ಗೆವಾರ್ ಅವರ ಮಾರ್ಗದರ್ಶಕ ಮತ್ತು ಆರಂಭಿಕವಾಗಿ ಆರ್‌ಎಸ್‌ಎಸ್‌ನ ಪ್ರಮುಖ ವ್ಯಕ್ತಿ ಬಿ.ಎಸ್. ಮೂಂಜೆ ಇಟಲಿಗೆ ಪ್ರಯಾಣ ಬೆಳೆಸಿದರು. ಈ ಪ್ರವಾಸದ ಸಮಯದಲ್ಲಿ, ಅವರು ವೈಯಕ್ತಿಕವಾಗಿ ಬೆನಿಟೊ ಮುಸೊಲಿನಿಯನ್ನು ಭೇಟಿಯಾದರು ಮತ್ತು “ಒಪೇರಾ ನಾಜಿಯೋನೇಲ್ ಬಾಲಿಲ್ಲಾ” (Opera Nazionale Balilla- ಫ್ಯಾಸಿಸ್ಟ್ ಯುವ ಸಂಘಟನೆ) ಸೇರಿದಂತೆ ಹಲವಾರು ಫ್ಯಾಸಿಸ್ಟ್ ಮಿಲಿಟರಿ ತರಬೇತಿ ಶಾಲೆಗಳಿಗೆ ಭೇಟಿ ನೀಡಿದರು.

ತನ್ನ ವೈಯಕ್ತಿಕ ದಿನಚರಿಗಳಲ್ಲಿ, ಮೂಂಜೆ ಈ ಸಂಘಟನಾ ವ್ಯವಸ್ಥೆಗಳ ಪರವಾಗಿ ಬರೆದಿದ್ದಾರೆ ಮತ್ತು ಹಿಂದೂಗಳ “ಮಿಲಿಟರಿ ಮರುಅನ್ವೇಷಣೆ”ಗಾಗಿ ಭಾರತಕ್ಕೆ ಇದೇ ರೀತಿಯ ಸಂಸ್ಥೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅವರು ಇಟಲಿಯಿಂದ ಹಿಂದಿರುಗಿದ ನಂತರ, ಆರ್‌ಎಸ್‌ಎಸ್‌ನ ರಚನಾತ್ಮಕ ಚೌಕಟ್ಟನ್ನು ತ್ವರಿತವಾಗಿ ಬಲಪಡಿಸಲಾಯಿತು. ಇಟಲಿಯಲ್ಲಿ ಅವರು ಗಮನಿಸಿದ ಸಂಗತಿಗಳಿಂದ ಆರೆಸ್ಸೆಸ್ ನೇರವಾಗಿ ಸಾಂಸ್ಥಿಕ ಸ್ಫೂರ್ತಿಯನ್ನು ಪಡೆಯಿತು. ಭಾರತೀಯ ಬ್ರಾಹ್ಮಣ್ಯದ ಅಗತ್ಯಗಳಿಗೆ ಅನುಗುಣವಾಗಿ ಅದು ಅದೇ ಕುಟಿಲತೆಯಿಂದ ರೂಪುಗೊಂಡಿತು.

​ರಚನಾತ್ಮಕ ಮತ್ತು ಅರೆಸೈನಿಕ ಹೋಲಿಕೆಗಳು
​ಸಂಪೂರ್ಣ ವಿಧೇಯತೆ ಮತ್ತು ಸಾಮೂಹಿಕ ಗುರುತನ್ನು ಬೆಳೆಸಲು ಫ್ಯಾಸಿಸ್ಟ್ ಸಂಘಟನೆಗಳು ನಿರ್ದಿಷ್ಟ ಚಿಹ್ನೆಗಳು, ನಾಯಕ- ಹಿಂಬಾಲಕ ಶ್ರೇಣಿಗಳು ಮತ್ತು ಹೊರಗಿನ ತೋರಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆರ್‌ಎಸ್‌ಎಸ್ ಈ ಯುರೋಪಿಯನ್ ಮಾದರಿಗಳನ್ನು ರೀತಿಗಳಲ್ಲಿ ಹೋಲುವ ಒಂದು ವಿವರವಾದ ಚೌಕಟ್ಟನ್ನು ಅಳವಡಿಸಿಕೊಂಡಿದೆ. ಅವುಗಳನ್ನು ಕೆಳಗೆ ನೋಡೋಣ.

​ಸರ್ವೋಚ್ಚ ನಾಯಕ (ಸರಸಂಘಚಾಲಕ): ಯುರೋಪಿಯನ್ ಫ್ಯಾಸಿಸಂ ಅನ್ನು ಫ್ಯೂರರ್‌ಪ್ರಿಂಜಿಪ್ (Führerprinzip- ನಾಯಕತ್ವ ತತ್ವ) ಎಂಬ ಪದದಿಂದ ವ್ಯಾಖ್ಯಾನಿಸಲಾಗಿದೆ. ಇದರ ಪ್ರಕಾರ ಒಬ್ಬ ಸರ್ವೋಚ್ಚ ನಾಯಕನಲ್ಲಿ ಸಂಪೂರ್ಣ ಅಧಿಕಾರವು ಕೇಂದ್ರೀಕೃತವಾಗಿರಬೇಕು. ಆರೆಸ್ಸೆಸ್ಸಿನಲ್ಲಿ, “ಸರಸಂಘಚಾಲಕ”ನೇ ಅಂತಿಮ ಸೈದ್ಧಾಂತಿಕ ಮತ್ತು ಸಾಂಸ್ಥಿಕ ಪ್ರಾಧಿಕಾರ. ಆತನೇ “ಫ್ಯುರರ್” ಅಂದರೆ, ಹಿಟ್ಲರನಂತೆ ಪರಮೋಚ್ಛ, ಪರಮಪೂಜ್ಯ, ಪ್ರಶ್ನಾತೀತ ನಾಯಕ. ಆತನಿಗೆ, ಹೆಸರಿಗೆ ಸಲಹಾ ಮಂಡಳಿ ಇರುತ್ತದಾದರೂ (ಸಹಸಂಘಚಾಲಕರು/ಸಹ ಕಾರ್ಯವಾಹರು) ನಿರ್ಧಾರಗಳು ಆಂತರಿಕ ಪ್ರಜಾಪ್ರಭುತ್ವ ಅಥವಾ ಮತದಾನಕ್ಕೆ ಒಳಪಡುವುದಿಲ್ಲ. ಇವರು ಇರುವುದು ಆತನ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾದ ಅಡಿಯಾಳುಗಳಾಗಿ. (ಇಟಾಲಿಯನ್ ಮೂಲದ ಮಾಫಿಯಾ ಮತ್ತು ಅದರ ಅಮೆರಿಕನ್ ರೂಪ ಕೂಡಾ ಇದೇ ಮಾದರಿಯನ್ನು ಇಂದಿಗೂ ಅನುಸರಿಸುತ್ತಿವೆ).

ಸಮವಸ್ತ್ರ ಮತ್ತು ಪ್ಯಾರಾಮಿಲಿಟರಿ ಕವಾಯತು: ಹಿಟ್ಲರ್‌ನ ಎಸ್‌ಎಸ್ ಕಪ್ಪು ಸಮವಸ್ತ್ರ ಧರಿಸಿದಂತೆ ಮತ್ತು ಎಸ್‌ಎ ಕಂದು ಬಣ್ಣವನ್ನು ಧರಿಸಿದಂತೆ, ಆರೆಸ್ಸೆಸ್ ಆರಂಭಿಕವಾಗಿಯೇ ಕಟ್ಟುನಿಟ್ಟಾದ ಸಮವಸ್ತ್ರವನ್ನು ಅಳವಡಿಸಿಕೊಂಡಿತು – ಖಾಕಿ ಚಡ್ಡಿ, ಬಿಳಿ ಅಂಗಿಗಳು, ಕಪ್ಪು ಕ್ಯಾಪ್‌ಗಳು ಮತ್ತು ಮಿಲಿಟರಿ ಶೈಲಿಯ ಬೂಟುಗಳು – ಜೊತೆಗೆ ಕೈಯಲ್ಲಿ ಆಯುಧವಾಗಿ ಲಾಠಿ, ಭಾರತೀಯ ಎಂದು ತೋರಿಸಿಕೊಳ್ಳಲು ಒಂದು ಬಿಂದಿ ಅಥವಾ ತಿಲಕ. ಅಂದು ಬ್ಲ್ಯಾಕ್ ಶರ್ಟ್ಸ್‌ ಮತ್ತು ಬ್ರೌನ್ ಶರ್ಟ್ಸ್ ಕುಖ್ಯಾತವಾಗಿದ್ದಂತೆ ಇಂದು ಭಾರತದಲ್ಲಿ ಖಾಕಿ ಚಡ್ಡಿ ಕುಖ್ಯಾತ. ಅಲ್ಲಿ ಸದಸ್ಯರು ಸ್ಥಳೀಯ ಘಟಕಗಳಲ್ಲಿ ಸೇರುತ್ತಿದ್ದಂತೆ ಇಲ್ಲಿ “ಶಾಖೆ”ಗಳಲ್ಲಿ ಒಟ್ಟುಗೂಡುತ್ತಾರೆ. ಅಲ್ಲಿನಂತೆಯೇ ಇಲ್ಲಿಯೂ ಮಿಲಿಟರಿ ಶೈಲಿಯ ಕವಾಯತುಗಳು, ಪಥಸಂಚಲನ ಮತ್ತು ದೈಹಿಕ ತರಬೇತಿಯನ್ನು ನಡೆಸುತ್ತಾರೆ. ವಾಸ್ತವದಲ್ಲಿ ಇವೆಲ್ಲವೂ ತೋರಿಕೆಯ ಮತ್ತು ಒಂದು ರೀತಿಯ ಅಂಜಿಕೆ ಹುಟ್ಟಿಸುವ ಸಲುವಾಗಿ ಇವೆಯೇ ಹೊರತು ತೀವ್ರವಾದ ಮಿಲಿಟರಿ ತರಬೇತಿಗಳಲ್ಲ! ಇವು ಸದಸ್ಯರ ತಲೆಯಲ್ಲಿ ತಾವು “ದೇಶ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾದ ವೀರಯೋಧರು” ಎಂಬ ಭ್ರಮೆಯನ್ನು ತುಂಬುತ್ತದೆ. ವಯಸ್ಸಾದವರು, ನರಪೇತಲರು ದೊಗಳೆ ಚಡ್ಡಿ ಹಾಕಿ, ಲಾಟಿ ತಿರುಗಿಸಿ, ದಯನೀಯ ಕಾರ್ಟೂನುಗಳಂತೆ ಕವಾಯತು ಮಾಡುವ ನಗೆಪಾಟಲು ವಿಡಿಯೋಗಳನ್ನು ನೀವು ನೋಡಿರಬಹುದು. ಇವರ ಪರವಾಗಿ ಹಿಂಸಾಚಾರ ನಡೆಸುವವರು ಬೇರೆಯೇ ಜನರು- ಬೀದಿಗೂಂಡಾಗಳು, ವಸೂಲಿ ಗಿರಾಕಿಗಳು ಮತ್ತು ವೃತ್ತಿಪರ ಸಮಾಜಘಾತುಕರು. ಒಂದು ಉದ್ದದ ಕೆಂಪು ನಾಮ ಮತ್ತು ಕೇಸರಿ ಶಾಲು ಹಾಕಿದ ಕೂಡಲೇ ಇವರು ಹಿಂದೂ ಧರ್ಮದ ರಕ್ಷಕರಾಗುತ್ತಾರೆ!

​ಧ್ಯೇಯವಾಕ್ಯ ಮತ್ತು ಪ್ರತಿಜ್ಞೆಗಳು: ಫ್ಯಾಸಿಸ್ಟ್ ಸಂಘಟನೆಗಳು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಚಿಂತನೆಯನ್ನು ಮೀರಿ ರಾಷ್ಟ್ರ ಅಥವಾ ಸಾಮೂಹಿಕ ಗುರುತಿಗೆ ಸಂಪೂರ್ಣ ನಿಷ್ಠೆಯ ಪ್ರತಿಜ್ಞೆಯನ್ನು ಮಾಡಿಸುತ್ತವೆ. ಆರೆಸ್ಸೆಸ್ಸಿನ ಪ್ರತಿಜ್ಞೆ ಎಂದರೆ ಸದಸ್ಯರು ತಮ್ಮ ದೇಹ, ಮನಸ್ಸು ಮತ್ತು ಸಂಪತ್ತನ್ನು ಹಿಂದೂ ರಾಷ್ಟ್ರದ “ಸಾಕ್ಷಾತ್ಕಾರ”ಕ್ಕಾಗಿ “ಸಮರ್ಪಣೆ” ಮಾಡುವುದು. ಘನ ಹೆಸರುಗಳನ್ನು ಹೊಂದಿರುವ ಈ ಪ್ರತಿಜ್ಞೆಯ ಅರ್ಥವೆಂದರೆ, ಸ್ವಂತ ಚಿಂತನೆ ಬದಿಗಿಟ್ಟು, ನಾಯಕ ಹೇಳಿದ್ದನ್ನು ವಿಧೇಯವಾಗಿ ಪ್ರತಿ ಪ್ರಶ್ನೆ ಕೇಳದೇ, ಚಾಚೂ ತಪ್ಪದೇ ಪಾಲಿಸುವುದು! (“ಮಿಲಿಟರಿಯಲ್ಲಿ ಯಾರಾದರೂ ಪ್ರಶ್ನೆ ಮಾಡುತ್ತಾರ? ಮಾಡಿದರೆ, ಏನೂಂತ ಗೊತ್ತುಂಟಲ್ಲ! ಕೋರ್ಟ್ ಮಾರ್ಷಲ್!”). ರಾಷ್ಟ್ರ ಗೀಷ್ಟ್ರ ಮಣ್ಣಾಂಗಟ್ಟಿ! ಇದು ನಿಷ್ಟ, ಭ್ರಮಾಧೀನ, ತಲೆ ತೊಳೆದು ವಿಷ ಚಿಂತನೆಗಳನ್ನು ತುಂಬಲಾದ “ಅಗ್ರಹಾರದ ಗೇಟ್ ಕೀಪರ್‌”ಗಳ ಒಂದು ಪಡೆಯನ್ನು ಸೃಷ್ಟಿ ಮಾಡುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕುತರ್ಕ ಮಾಡುವ, ತಂದೆ-ತಾಯಿ-ಅಕ್ಕ-ತಂಗಿ ಎಂದು ಅಶ್ಲೀಲವಾಗಿ ಬೈಯ್ಯುವ, ಸಮಾಜದ ಬೇರೆಬೇರೆ ಸ್ತರಗಳಲ್ಲಿರುವ ಕ್ರಿಮಿಗಳ ಉತ್ಪಾದನೆ ಇಲ್ಲಿಯೇ ಆಗುತ್ತದೆ. ಇವುಗಳನ್ನು ಐಟಿ ಸೆಲ್ಲುಗಳು ನಿಯಂತ್ರಿಸುತ್ತವೆ. ಅಲ್ಲಿಯೇ ನಯ ಮಾತಿನ, ಸಭ್ಯ ನಡವಳಿಗೆಯ, ಶಿಸ್ತಿನ, ಚತುರ ಬುದ್ಧಿಯ ಒಂದು ನಿಷ್ಟಾವಂತ ಕಾರ್ಯಕರ್ತರ ಪಡೆಯೂ ಸಿದ್ಧವಾಗುತ್ತದೆ.

​ಸೈದ್ಧಾಂತಿಕ ಜೋಡಣೆ ಮತ್ತು ಶ್ರೇಷ್ಟತೆಯ ಮಂಪರು
​ನಾಜಿ ಜರ್ಮನಿಯ ಸೈದ್ಧಾಂತಿಕ ತಿರುಳು ಜನಾಂಗೀಯ ಶ್ರೇಷ್ಟತೆ- ಆರ್ಯನ್ ಜನಾಂಗದ ಶುದ್ಧತೆ ಮತ್ತು ಶ್ರೇಷ್ಟತೆಯ ಮೇಲಿನ ನಂಬಿಕೆ ಅಥವಾ ಸ್ವಯಂಪೂರಿತ ಭ್ರಮೆ. ಭಾರತದ ಸಂದರ್ಭದಲ್ಲಿ, ಆರಂಭಿಕ ಆರೆಸ್ಸೆಸ್ ಸಿದ್ಧಾಂತಿಗಳು ಈ ಪರಿಕಲ್ಪನೆಯನ್ನೇ “ಹಿಂದುತ್ವ” (ಹಿಂದೂ ರಾಷ್ಟ್ರೀಯತೆ)ಕ್ಕೆ ಅಳವಡಿಸಿಕೊಂಡರು. ರಾಷ್ಟ್ರವನ್ನು ಕಟ್ಟುನಿಟ್ಟಾಗಿ ರಕ್ತಸಂಬಂಧ, ಸಂಸ್ಕೃತಿ ಮತ್ತು “ಪವಿತ್ರ” ಭೂಮಿಯಿಂದ ವ್ಯಾಖ್ಯಾನಿಸಿದರು.

ಈ ಸೈದ್ಧಾಂತಿಕ ಜೋಡಣೆಯ ಅತ್ಯಂತ ಸ್ಪಷ್ಟವಾದ ಅಭಿವ್ಯಕ್ತಿಯನ್ನು ಎರಡನೇ “ಸರಸಂಘಚಾಲಕ” ಮತ್ತು ಆರ್‌ಎಸ್‌ಎಸ್‌ನ ಪ್ರಮುಖ ತೀವ್ರಗಾಮಿ ಕುಟಿಲ ಸಿದ್ಧಾಂತಿ ಎಂ.ಎಸ್. ಗೋಲ್ವಾಲ್ಕರ್ ನೀಡಿದ್ದಾರೆ. 1939ರ ತನ್ನ “ನಾವು, ಅಥವಾ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ” (We, or Our Nationhood Defined) ಪುಸ್ತಕದಲ್ಲಿ, ಗೋಲ್ವಾಲ್ಕರ್- ಭಾರತಕ್ಕೆ ಮಾದರಿಯಾಗಿ- ಅಲ್ಪಸಂಖ್ಯಾತರನ್ನು (ಯಹೂದಿ, ಪೋಲ್, ಜಿಪ್ಸಿ ಮತ್ತು ಇತರ ಜನಾಂಗ/ಬುಡಕಟ್ಟು ಮತ್ತು ಕಮ್ಯುನಿಸ್ಟರು) ಜೊತೆಗೆ ನಾಜಿ ಜರ್ಮನಿಯ ಭೀಭತ್ಸ, ಅಮಾನವೀಯ ನಡವಳಿಕೆಯನ್ನು ಸ್ಪಷ್ಟವಾಗಿ ಹೊಗಳಿದ್ದಾರೆ:

​”ಜನಾಂಗ ಮತ್ತು ಅದರ ಸಂಸ್ಕೃತಿಯ ಶುದ್ಧತೆಯನ್ನು ಉಳಿಸಿಕೊಳ್ಳಲು, ಜರ್ಮನಿಯು ಸೆಮಿಟಿಕ್ ಜನಾಂಗಗಳಾದ ಯಹೂದಿಗಳನ್ನು ದೇಶದಿಂದ ಶುದ್ಧೀಕರಿಸುವ (ನಿರ್ಮೂಲನ ಮಾಡುವ) ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. ಜನಾಂಗದ ಹೆಮ್ಮೆಯನ್ನು ಅದರ ಅತ್ಯುನ್ನತ ಮಟ್ಟದಲ್ಲಿ ಇಲ್ಲಿ ವ್ಯಕ್ತಪಡಿಸಲಾಗಿದೆ… ಹಿಂದೂಸ್ತಾನದಲ್ಲಿ ನಾವು ಕಲಿಯಲು ಮತ್ತು ಲಾಭ ಪಡೆಯಲು ಇದು ಉತ್ತಮ ಪಾಠ.”

​ಭಾರತದಲ್ಲಿರುವ ಹಿಂದೂಯೇತರ ಸಂಸ್ಕೃತಿಗಳು “ಹಿಂದೂತ್ವ” ಸಂಸ್ಕೃತಿಯಲ್ಲಿ ಸಂಪೂರ್ಣವಾಗಿ ಸೇರಿಕೊಳ್ಳಬೇಕು, ತಮ್ಮ ಪ್ರತ್ಯೇಕ ಗುರುತನ್ನು (ಅಸ್ಮಿತೆಯನ್ನು) ಕಳೆದುಕೊಳ್ಳಬೇಕು ಅಥವಾ ಯಾವುದೇ ಸವಲತ್ತುಗಳು ಅಥವಾ ನಾಗರಿಕ ಹಕ್ಕುಗಳನ್ನು ಪಡೆಯದೆ, “ಹಿಂದೂ ರಾಷ್ಟ್ರ”ಕ್ಕೆ ಸಂಪೂರ್ಣವಾಗಿ ಅಧೀನವಾಗಿರುವ ದೇಶದಲ್ಲಿ ಬದುಕಬೇಕು ಎಂದು ಗೋಲ್ವಾಲ್ಕರ್ ವಾದಿಸಿದರು.

ಸಂಘಟನೆಯ ಈ ಮೂರು ಅಂಶಗಳ ಜೊತೆಗೆ ಯುರೋಪಿಯನ್ ಫ್ಯಾಸಿಸಂ- ಒಂದು ಸರ್ವವ್ಯಾಪಿ ಸಮಾನಾಂತರ ಮತ್ತು ಪ್ರತ್ಯೇಕ ಸಮಾಜವನ್ನು ರಚಿಸುವ ಮೂಲಕ ಉಳಿದುಕೊಂಡಿತು ಮತ್ತು ವಿಸ್ತರಿಸಿತು. ನಾಜಿ ಪಕ್ಷವು ತನ್ನ ಮಿಲಿಟರಿ ವಿಭಾಗಗಳನ್ನು ಮಾತ್ರ ಅವಲಂಬಿಸಲಿಲ್ಲ; ನಾಗರಿಕ ಸಮಾಜದ ಪ್ರತಿಯೊಂದು ವಿಭಾಗವನ್ನು ಬುಟ್ಟಿಗೆ ಹಾಕಿಕೊಳ್ಳಲು ಅದು ವ್ಯವಸ್ಥಿತವಾಗಿ ವಿಶೇಷ ಮುಂಚೂಣಿ ಸಂಘಟನೆಗಳನ್ನು ನಿರ್ಮಿಸಿತು. ಸಂಘ ಪರಿವಾರ (ಸಂಘಟನೆಗಳ “ಕುಟುಂಬ”) ಎಂದು ಕರೆಯಲ್ಪಡುವ ವಿಶಾಲ ಜಾಲವನ್ನು ನಿರ್ಮಿಸುವ ಮೂಲಕ ಆರ್‌ಎಸ್‌ಎಸ್ ಅದೇ ರೀತಿಯ ತಂತ್ರವನ್ನು ಅಳವಡಿಸಿಕೊಂಡಿತು.

ಮುಂಚೂಣಿ ಸಂಘಟನೆಗಳ ಸಂರಚನೆ
ಸಮಾಜವನ್ನು ತಳಮಟ್ಟದಿಂದ ನಿಯಂತ್ರಿಸಲು, ನಾಜಿಗಳಂತೆ ಆರೆಸ್ಸೆಸ್ ಕೂಡಾ ನಿರ್ದಿಷ್ಟ ಜನ ವರ್ಗಗಳನ್ನು ರೂಪಿಸಿತು ಮತ್ತು ಅವುಗಳಿಗೇ ಮೀಸಲಾದ ಸಂಘಟನೆ, ವಿಭಾಗಗಳನ್ನು ರಚಿಸಿತು. ನಾಜಿ ನಾಯಕತ್ವವು ಜರ್ಮನಿಯ ಯುವಕರು ಮತ್ತು ವಿದ್ಯಾರ್ಥಿಗಳ ಮನಸ್ಸನ್ನು ಸೆರೆಹಿಡಿಯಲು ಹಿಟ್ಲರ್-ಜುಗೆಂಡ್ (ಹಿಟ್ಲರ್ ಯುವ) ಮತ್ತು ರಾಷ್ಟ್ರೀಯ “ಸಮಾಜವಾದಿ” ಜರ್ಮನ್ ವಿದ್ಯಾರ್ಥಿಗಳ ಲೀಗ್ ಎಂಬ ಸಂಘಟನೆಗಳನ್ನು ಸ್ಥಾಪಿಸಿತು. ಅದೇ ರೀತಿಯಲ್ಲಿ ಆರ್‌ಎಸ್‌ಎಸ್ ಕೂಡಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸ್ಥಾಪಿಸಿತು. ಮಹಿಳೆಯರನ್ನು ಸಜ್ಜುಗೊಳಿಸಲು ಮತ್ತು ಸಂಘಟಿಸಲು, ನಾಜಿ ಆಡಳಿತವು ಫ್ರೌಯೆನ್‌ಶಾಫ್ಟ್ (NS-Frauenschaft -ರಾಷ್ಟ್ರೀಯ ಸಮಾಜವಾದಿ ಮಹಿಳಾ ಲೀಗ್) ಎಂಬ ಸಂಘಟನೆಯನ್ನು ಬಳಸಿಕೊಂಡಿತು, ಇದನ್ನು ಕೂಡಾ ಆರೆಸ್ಸೆಸ್ ತನ್ನ ಮಹಿಳಾ ವಿಭಾಗವಾದ “ರಾಷ್ಟ್ರ ಸೇವಿಕಾ ಸಮಿತಿ”ಯ ಮೂಲಕ ಪ್ರತಿಬಿಂಬಿಸಿತು.

​ಈ ಸಾಂಸ್ಥಿಕವಾದ “ಅಜೈವಿಕ” ಸಂತಾನೋತ್ಪತ್ತಿಯನ್ನು ಆರ್ಥಿಕ ಮತ್ತು ಅನುಷ್ಟಾನ ವಲಯಗಳಿಗೂ ಆಳವಾಗಿ ವಿಸ್ತರಿಸಿತು. ನಾಜಿ ಜರ್ಮನಿಯಲ್ಲಿ ಸ್ವತಂತ್ರ ಕಾರ್ಮಿಕ ಸಂಘಗಳನ್ನು ರದ್ದುಪಡಿಸಲಾಯಿತು ಮತ್ತು ಕಾರ್ಮಿಕ ವರ್ಗವನ್ನು ನಿಯಂತ್ರಿಸಲು ಪ್ರಭುತ್ವ-ನಿಯಂತ್ರಿತ ಡಾಯ್ಷ್ ಅರ್ಬೀಟ್ಸ್‌ಫ್ರಂಟ್ (Deutsche Arbeitsfront- ಜರ್ಮನ್ ಲೇಬರ್ ಫ್ರಂಟ್) ಸ್ಥಾಪಿಸಲಾಯಿತು; ಅದೇ ರೀತಿ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದಲ್ಲಿದ್ದ ಕಾರ್ಮಿಕ ಚಳುವಳಿಗಳನ್ನು ಹತ್ತಿಕ್ಕಿ ತನ್ನ ರಾಷ್ಟ್ರೀಯತಾವಾದಿ ಚೌಕಟ್ಟಿನೊಳಗೆ ಹೀರಿಕೊಳ್ಳಲು ಆರೆಸ್ಸೆಸ್ ಇಲ್ಲಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸ್ಥಾಪಿಸಿತು. ಕೊನೆಯದಾಗಿ, ಜರ್ಮನ್ ಬೀದಿಗಳಲ್ಲಿ ತಮ್ಮ ದ್ವೇಷ ಕಾರ್ಯಕ್ರಮದ ಅನುಷ್ಟಾನಕ್ಕಾಗಿ- ಆಕ್ರಮಣಕಾರಿ, ಹಿಂಸಾಚಾರಿಯಾದ ಸ್ಟರ್ಮಾಬ್ಟೀಲುಂಗ್ (Sturmabteilung- SA) ಕಾರ್ಯನಿರ್ವಹಿಸಿದಂತೆಯೇ ಇಲ್ಲಿ ಆರೆಸ್ಸೆಸ್ ತನ್ನ ವಿಶ್ವ ಹಿಂದೂ ಪರಿಷತ್ (ವಿಹಿಂಪ- ವಿಎಚ್‌ಪಿ) ಮತ್ತು ಬಜರಂಗ ದಳದಂತಹ ಸಾಂಸ್ಕೃತಿಕ ಮತ್ತು ಉಗ್ರಗಾಮಿ ಸಂಘಟನೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.

ವಾಸ್ತವದಲ್ಲಿ “ಕೊನೆಯದಾಗಿ” ಎಂದು ಹೇಳಿದ್ದು ತಪ್ಪಾಯಿತು! ಹಿಂದೂತ್ವದ ಹೆಸರು ಹೇಳಿ ಗೂಂಡಾಗಿರಿ ಮತ್ತು “ಹಿಂದೂತ್ವ ರಕ್ಷಣೆ” ಮಾಡುವ ಪುಡಿ ಸಂಘಟನೆಗಳಿಗೆ, ಗೂಂಡಾ ಪಡೆಗಳಿಗೆ ಕೊನೆಮೊದಲೆಂಬುದಿಲ್ಲ ಮತ್ತು ಸಂಘಪರಿವಾರದ ವ್ಯವಹಾರದಂತೆ ಲೆಕ್ಕವೂ ಇಲ್ಲ. ಇಂದು ಪುಡಿ ರೌಡಿಗಳು, ವಸೂಲಿಕೋರರು, ಕಳ್ಳಕಾಕರು, ವ್ಯಭಿಚಾರಿಗಳು, ತೊಗಲು ವ್ಯಾಪಾರಿಗಳು, ತಲೆಹಿಡುಕರು “ಹಿಂದೂತ್ವ”ದ ಹೆಸರಿನಲ್ಲಿ ಢೋಂಗಿ ಸ್ವಾಮಿಗಳಾಗಿದ್ದಾರೆ; ಇಲ್ಲವೇ ಒಂದು ಸಂಘಟನೆ ಕಟ್ಟಿಕೊಂಡಿದ್ದಾರೆ. ಹೆಸರುಗಳು ನಿಮಗೆ ಗೊತ್ತೇ ಇವೆ. ಹಿಂದೂ ಧರ್ಮಗ್ರಂಥಗಳು, ಪುರಾಣಗಳು, ಮಹಾಕಾವ್ಯಗಳು ಅಥವಾ ಸಾಂಸ್ಕೃತಿಕವಾಗಿ ಎಳ್ಳಿನಷ್ಟೂ ಗೊತ್ತಿಲ್ಲದ ಇವುಗಳು, ದನ ಹಿಡಿಯುವುದು, ಮುಸ್ಲಿಮರಿಗೆ “ಜೈ ಶ್ರೀರಾಮ್” ಇತ್ಯಾದಿ ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸುವುದರ ಜೊತೆ, ಇದು ತಂದುಕೊಡುವ ಬಿಜೆಪಿಯ ರಾಜಕೀಯ ರಕ್ಷಣೆಯ ಅಡಿಯಲ್ಲಿ ತಮ್ಮ ಅಕ್ರಮ ದಂಧೆಗಳಲ್ಲಿ ತೊಡಗಿ ಹುಲುಸಾಗಿ ಬೆಳೆಯುತ್ತಿವೆ. ಚಕ್ರವರ್ತಿ ಸೂಲಿಬೆಲೆ ಎಂಬ ಹೆಸರಿನಲ್ಲಿ ಕುಖ್ಯಾತನಾದ ಬಾಡಿಗೆ ಸುಳ್ಳು ಭಾಷಣಕಾರನ “ನಮೋ ಬ್ರಿಗೇಡ್” ಎಂಬ ನಾಟಕ ಮೇಳದ ಹೆಸರು- “ಹಿಟ್ಲರ್ ಯೂತ್” ರೀತಿಯಲ್ಲೇ ವ್ಯಕ್ತಿಗತ ಭಟ್ಟಂಗಿತನದ ಮೇಲೆ ನಿಂತಿದೆ ಎಂಬುದನ್ನು ನೀವು ಗಮನಿಸಬಹುದು. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸರಿಯಾಗಿ ಬರೆಯಲು ಬಾರದ, ಎಲ್ಲದಕ್ಕೂ ಜೈ ಶ್ರೀರಾಮ್, ಜೈ ಮೋದಿ, ಅಥವಾ ಐಟಿ ಸೆಲ್ಲುಗಳ ನೀಡುವ ಸಿದ್ಧ ಉತ್ತರ, ಪ್ರತಿಕ್ರಿಯೆಗಳನ್ನು ಕಟ್ ಎಂಡ್ ಪೇಸ್ಟ್ ಮಾಡುವ, ವಿರೋಧಿಗಳ ಖಾತೆಗಳಿಗೆ ನಕಲಿ ಅಕೌಂಟುಗಳ ಮೂಲಕ ಬಂದು ಅಶ್ಲೀಲವಾಗಿ ಬೈಯ್ಯುವ ಬಾಡಿಗೆ “ಸೆಗಣಿ ತಲೆ”ಗಳ ದಂಡು ಇದ್ದೇ ಇದೆ. ಜೊತೆಗೆ ಗೋದಿ ಮೀಡಿಯಾ ಎಂದು ಕರೆಯಲಾಗುವ “ಮಾರಿಕೊಂಡವರು” ತುಂಬಿರುವ ಮಾಧ್ಯಮಗಳ ಬಗ್ಗೆ ನಿಮಗೆ ಗೊತ್ತೇ ಇದೆ.

​ಸಂಘಟನೆಯನ್ನು ಈ ರೀತಿಯಲ್ಲಿ ವಿಶೇಷ ಘಟಕಗಳಾಗಿ ವಿಭಜಿಸುವ ಮೂಲಕ, ಅದರ ಅಂಗಸಂಸ್ಥೆ ವಿಭಾಗಗಳು ತನ್ನದೇ ಛತ್ರದ ಅಡಿಯಲ್ಲಿ ಆಕ್ರಮಣಕಾರಿ ಬೀದಿ ರಾಜಕೀಯ, ಹಲ್ಲೆ, ಗೂಂಡಾಗಿರಿ, ಕೊಲೆ, ಅಕ್ರಮ-ಅನೈತಿಕ ಪೊಲೀಸ್‌ಗಿರಿ ಮತ್ತು ರಾಜಕೀಯ ಬೆದರಿಕೆಯಲ್ಲಿ ತೊಡಗಿದಾಗ- ಇಡೀ ಪರಿವಾರದ ಪ್ರಮುಖ ನಾಯಕರು ತಮ್ಮ ಗೌರವಾನ್ವಿತ, “ಸಾಂಸ್ಕೃತಿಕ” ಸಾರ್ವಜನಿಕ ಗೋಮುಖವನ್ನು ಕಾಪಾಡಿಕೊಳ್ಳಬಹುದು. ಈ ಮಾಡ್ಯುಲರ್ ರಚನೆಯು ಹಿಂಸಾಚಾರವು ಏಕಾಏಕಿ ಸಂಭವಿಸಿದಾಗ ನಾಯಕತ್ವಕ್ಕೆ “ತೋರಿಕೆಯ ನಿರಾಕರಣೆ”ಗೆ ಅವಕಾಶ ಒದಗಿಸುತ್ತದೆ. “ಅವರಿಗೂ ನಮಗೂ ಸಂಬಂಧವೇ ಇಲ್ಲ”, “ಜನರು ಸ್ವಯಂಸ್ಫೂರ್ತಿಯಿಂದ ವರ್ತಿಸಿದ್ದಾರೆ”, “ಅವರು ಮಾಡಿಲ್ಲವೇ? ಇವರು ಮಾಡಿದರೆ ತಪ್ಪೇನು?”, “ಅವರು ನಮ್ಮವರಲ್ಲ. ನಾವಂತೂ ಮಾಡಿಸಿಲ್ಲ!” ಮುಂತಾದ ಹೇಳಿಕೆಗಳು ಇದರಿಂದಾಗಿಯೇ ಸಾಧ್ಯವಾಗುವುದು.

ನಾಜಿ ಸಂಘಟನೆಗಳು ಮತ್ತು ಆರೆಸ್ಸೆಸ್ ಯಾವ ರೀತಿಯಲ್ಲಿ ಸಾಮ್ಯ ಹೊಂದಿವೆ ಎಂಬುದನ್ನು ಸರಳವಾಗಿ, ಆದರೆ ಸ್ಥೂಲವಾಗಿ ನೋಡಿದೆವು. ಹೀಗಿದ್ದರೂ, ಅದು ಅಷ್ಟೊಂದು ಸರಳವಲ್ಲ. ಅದೊಂದು ಸಂಕೀರ್ಣವಾದ, ಭೂಗತ ಮಾಫಿಯಾವನ್ನೂ ಮೀರಿಸುವ ಜಾಲ. ಅದು ಹೇಗೆ ಇಡೀ ಸಮಾಜದಲ್ಲಿ ಮತ್ತು ಬಿಜೆಪಿಯೇತರ ಪಕ್ಷಗಳಲ್ಲೂ ತನ್ನ ಅಕ್ಟೋಪಸ್ ಬಾಹುಗಳನ್ನು ವಿಸ್ತರಿಸಿದೆ ಎಂಬುದನ್ನು ಮುಂದಿನ ಕಂತಿನಲ್ಲಿ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು