Home ರಾಜಕೀಯ ವಿಜಯೇಂದ್ರ ಕಾಂಗ್ರೆಸ್ ಕಚೇರಿಯ ಬಾಗಿಲುಗಳ ಲೆಕ್ಕ ಹಾಕುವುದನ್ನು ಬಿಟ್ಟು ಯತ್ನಾಳ್‌ ಮಾಡಿರುವ ಆರೋಪಗಳ ಕಡೆ ಗಮನಕೊಡಲಿ:...

ವಿಜಯೇಂದ್ರ ಕಾಂಗ್ರೆಸ್ ಕಚೇರಿಯ ಬಾಗಿಲುಗಳ ಲೆಕ್ಕ ಹಾಕುವುದನ್ನು ಬಿಟ್ಟು ಯತ್ನಾಳ್‌ ಮಾಡಿರುವ ಆರೋಪಗಳ ಕಡೆ ಗಮನಕೊಡಲಿ: ಬಿಕೆ ಹರಿಪ್ರಸಾದ್

0

ಕಾಂಗ್ರೆಸ್ ಪಕ್ಷದ ಒಳವಿಚಾರಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲು ತಮ್ಮ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮನೆ ಮೂರು ಬಾಗಿಲು ಎನ್ನುವ ಬಿಜೆಪಿಯ ಮನೆ ಇಂದು ‘ನೂರು ಬಾಗಿಲು’ ಆಗಿದೆ ಎಂದು ಲೇವಡಿ ಮಾಡಿರುವ ಅವರು, ಕೆಪಿಸಿಸಿ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಎಣಿಸಲು ವಿಜಯೇಂದ್ರ ಕಾಂಗ್ರೆಸ್ ಕಚೇರಿಯ ವಾಚ್‌ಮ್ಯಾನ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆದಿರುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, ಈ ವಿಚಾರದಲ್ಲಿ ತಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪ್ರತಿಯೊಬ್ಬರ ಮೇಲೂ ‘ದೇಶದ್ರೋಹ’ದ ಹಣೆಪಟ್ಟಿ ಕಟ್ಟುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಯಾರ ಮೇಲಾದರೂ ಪ್ರಕರಣ ದಾಖಲಾದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ. ನ್ಯಾಯಾಲಯಗಳು ಖಾಲಿದ್ ಅವರನ್ನು ದೇಶದ್ರೋಹಿ ಎಂದು ಘೋಷಿಸಿಲ್ಲದಿರುವಾಗ, ಆರು ವರ್ಷಗಳಿಂದ ಸೂಕ್ತ ವಿಚಾರಣೆಯೇ ನಡೆಯದಿರುವಾಗ ಅವರನ್ನು ಅಪರಾಧಿ ಎಂದು ಬಿಂಬಿಸುವುದು ಬಿಜೆಪಿಯ ಅವಿವೇಕಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ದೇಶಪ್ರೇಮದ ಪ್ರಮಾಣಪತ್ರ ನೀಡುವ ಹಕ್ಕು ಬಿಜೆಪಿಗೆ ಯಾರೂ ಕೊಟ್ಟಿಲ್ಲ ಎಂದ ಅವರು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುವುದೂ ದೇಶಪ್ರೇಮವೇ ಆಗಿದೆ ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟ, ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ವಿರೋಧಿಸಿದ ಹಿನ್ನೆಲೆ ಹೊಂದಿರುವವರಿಂದ ದೇಶಪ್ರೇಮದ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ. ಉಮರ್ ಖಾಲಿದ್ ಸಂಘಪರಿವಾರದವರಂತೆ ಪಾಕಿಸ್ತಾನದ ಜೊತೆ ಚರ್ಚೆ ನಡೆಸಿಲ್ಲ, ಆಹ್ವಾನವಿಲ್ಲದೆ ಪಾಕ್ ಪ್ರಧಾನಿ ಮನೆಗೆ ಹೋಗಿ ಬಿರಿಯಾನಿ ತಿಂದಿಲ್ಲ; ಜನರ ಪರ ಧ್ವನಿ ಎತ್ತಿದ ವಿದ್ವಾಂಸ ಚಳವಳಿಗಾರನನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಆರೋಪಿಸಿದ್ದಾರೆ.

ವಿಜಯೇಂದ್ರ ಕಾಂಗ್ರೆಸ್ ಕಚೇರಿಯ ಬಾಗಿಲುಗಳ ಲೆಕ್ಕ ಹಾಕುವುದನ್ನು ಬಿಟ್ಟು, ಕೆಪಿಎಸ್‌ಸಿ ನೇಮಕಾತಿ ವಿಚಾರ ಹಾಗೂ ಪೇಮೆಂಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಗಂಭೀರ ಆರೋಪಗಳಿಗೆ ಮೊದಲು ಉತ್ತರಿಸಲಿ ಎಂದು ಹರಿಪ್ರಸಾದ್ ಸವಾಲು ಹಾಕಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ವಿಜಯೇಂದ್ರಗೆ ಇದೇ ಕೆಲಸ ಉಳಿಯಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.

You cannot copy content of this page

Exit mobile version