Home ದೇಶ ನಾವು ಈ ಭೂಮಿ ಇರುವ ತನಕ ಇಲ್ಲಿಯೇ ಇರುತ್ತೇವೆ, ನೀವು ಒಡೆದ ಮಸೀದಿಗಳನ್ನು ಮತ್ತೆ ಕಟ್ಟುತ್ತೇವೆ:...

ನಾವು ಈ ಭೂಮಿ ಇರುವ ತನಕ ಇಲ್ಲಿಯೇ ಇರುತ್ತೇವೆ, ನೀವು ಒಡೆದ ಮಸೀದಿಗಳನ್ನು ಮತ್ತೆ ಕಟ್ಟುತ್ತೇವೆ: ಅಸಾದುದ್ದೀನ್ ಓವೈಸಿ ಗುಡುಗು

0

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಹಾಗೂ ಮಸೀದಿಗಳ ಮೇಲಿನ ಕ್ರಮಗಳ ಕುರಿತಂತೆ ಎಐಎಂಐಎಂ (AIMIM) ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಆಡಳಿತಾರೂಢ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲಿದ್ದೇವೆ ಎಂದು ಅವರು ಸಾರ್ವಜನಿಕ ಸಭೆಯಲ್ಲಿ ಗುಡುಗಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿದ ಸಂದರ್ಭದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಓವೈಸಿ, ‘ಈ ದೇಶದಲ್ಲಿ ಇರಬೇಕಾದರೆ ಹೀಗೆಯೇ ಇರಬೇಕು ಎಂದು ಹೇಳಲು ನೀವ್ಯಾರು? ಮುಖ್ಯಮಂತ್ರಿಗಳೇ, ನಿಮ್ಮ ಈ ಮಾತನ್ನು ನಾನು ಒಪ್ಪುವುದಿಲ್ಲ, ನೀವು ನನ್ನ ವಿರುದ್ಧ ಏನು ಮಾಡುತ್ತೀರೋ ಮಾಡಿಕೊಳ್ಳಿ’ ಎಂದು ಬಹಿರಂಗವಾಗಿ ಸವಾಲು ಹಾಕಿದರು. ನಾವು ಸ್ವಾಭಿಮಾನಿ ಮುಸ್ಲಿಂ ಆಗಿ ಈ ದೇಶದಲ್ಲಿ ಇದ್ದೆವು, ಇದ್ದೇವೆ ಮತ್ತು ಪ್ರಳಯದ (ಖಯಾಮತ್) ದಿನದವರೆಗೂ ಇಲ್ಲೇ ಜೀವಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅನ್ಯಾಯ ಮತ್ತು ದೌರ್ಜನ್ಯದ ಮೂಲಕ ಮಸೀದಿಗಳನ್ನು ಕೆಡವುತ್ತಿರುವವರಿಗೆ ಎಚ್ಚರಿಕೆ ನೀಡಿದ ಅವರು, ತಮ್ಮ ಈಮಾನ್ ಮತ್ತು ಒಗ್ಗಟ್ಟಿನ ಶಕ್ತಿಯಿಂದ ಕೆಡವಲಾದ ಮಸೀದಿಗಳ ಒಂದೊಂದು ಇಟ್ಟಿಗೆಯನ್ನು ಮರಳಿ ಜೋಡಿಸಿ ಪುನಃ ನಿರ್ಮಿಸುತ್ತೇವೆ ಹಾಗೂ ಅಲ್ಲಿ ಪ್ರಾರ್ಥನೆಯನ್ನು ಜೀವಂತವಾಗಿಡುತ್ತೇವೆ ಎಂದರು. ಮಸೀದಿಗಳನ್ನು ಧ್ವಂಸಗೊಳಿಸುವ ಅನ್ಯಾಯಗಾರರಿಗೆ ಈ ಲೋಕದಲ್ಲೂ ಮುಖಭಂಗ ಮತ್ತು ಪರಲೋಕದಲ್ಲೂ ತಕ್ಕ ಶಿಕ್ಷೆ ಕಾದಿದೆ ಎಂದು ಕುರಾನ್‌ನ ವಚನಗಳನ್ನು ಉಲ್ಲೇಖಿಸಿ ಹೇಳಿದರು. ಮುಸ್ಲಿಮರನ್ನು ದುರ್ಬಲರು ಎಂದು ಭಾವಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ, ಆದರೆ ದುರ್ಬಲ ವರ್ಗ ಜಾಗೃತಗೊಂಡಾಗ ಸಾವು ಮತ್ತು ದಬ್ಬಾಳಿಕೆಯ ಭಯ ತೊಲಗುತ್ತದೆ; ಅಂತಹ ಶಕ್ತಿಯನ್ನು ಯಾರೂ ಅಡಗಿಸಿಡಲು ಸಾಧ್ಯವಿಲ್ಲ ಎಂದು ಓವೈಸಿ ಎಚ್ಚರಿಸಿದರು.

You cannot copy content of this page

Exit mobile version