Home ರಾಜಕೀಯ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ | ಬಿಜೆಪಿಯದು ಎಸ್‌ಸಿ/ಎಸ್‌ಟಿ ವಿರೋಧಿ ಧೋರಣೆ: ಬಿ.ಕೆ. ಹರಿಪ್ರಸಾದ್

ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ | ಬಿಜೆಪಿಯದು ಎಸ್‌ಸಿ/ಎಸ್‌ಟಿ ವಿರೋಧಿ ಧೋರಣೆ: ಬಿ.ಕೆ. ಹರಿಪ್ರಸಾದ್

0

ಕರ್ನಾಟಕದ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದು, ಕೇಂದ್ರದ ಬಿಜೆಪಿ ಸರ್ಕಾರವು ದಲಿತ ಮತ್ತು ಹಿಂದುಳಿದ ಸಮುದಾಯದ ಮುಖಂಡರನ್ನೇ ವ್ಯವಸ್ಥಿತವಾಗಿ ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಬಕಾರಿ ಅಧಿಕಾರಿ ಹಾಗೂ ಸತೀಶ್ ಜಾರಕಿಹೊಳಿ ಅವರ ಸೋದರಮಾವ ಮಂಜುನಾಥ್ ಅವರಿಗೆ ಸಂಬಂಧಿಸಿದ ಪ್ರಕರಣವೆಂದು ಹೇಳಿ ದಾಳಿ ನಡೆಸಲಾಗಿದೆ. ಆದರೆ ಮಂಜುನಾಥ್ ಅವರ ತಂದೆ ದೇವೇಂದ್ರಪ್ಪ ಅವರು ಬಿಜೆಪಿಯ ಮಾಜಿ ಸಂಸದರು, ಅವರ ಮೇಲೆ ಏಕೆ ದಾಳಿ ಮಾಡಿಲ್ಲ? ಇನ್ನು ಮಂಜುನಾಥ್ ಅವರು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ಎಂಎಲ್ಸಿ ಲಖನ್ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸಂಬಂಧಿಕರಲ್ಲವೇ? ಅವರ ಮೇಲೆ ಏಕೆ ಇಡಿ ದಾಳಿ ನಡೆಸಿಲ್ಲ? ಅವರು ಬಿಜೆಪಿಯಲ್ಲಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಮುಟ್ಟುತ್ತಿಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ದಲಿತ ಮತ್ತು ಬುಡಕಟ್ಟು ಸಮುದಾಯದ ನಾಯಕರನ್ನು ಗುರಿಯಾಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಹರಿಪ್ರಸಾದ್, “ಕಳೆದ ತಿಂಗಳು ವಾಲ್ಮೀಕಿ ಸಮುದಾಯದ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಗುರಿಯಾಗಿಸಲಾಯಿತು, ಈಗ ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಲಾಗಿದೆ.

ಇದು ಬಿಜೆಪಿಯ ಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರೂ ಇಡಿ ಯಾವುದೇ ಪಾಠ ಕಲಿತಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲದೆ ಬಂಗಾಳದ ಟಿಎಂಸಿ, ಶಿವಸೇನೆ, ಆರ್‌ಜೆಡಿ, ಸಮಾಜವಾದಿ ಪಕ್ಷ ಹೀಗೆ ಒಟ್ಟಾರೆ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಮೇಲಷ್ಟೇ ಇಡಿ, ಸಿಬಿಐ ದಾಳಿಗಳು ನಡೆಯುತ್ತಿವೆ,” ಎಂದರು.

ಇದೇ ವೇಳೆ, ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವೇದಿಕೆ ಶುದ್ಧೀಕರಣ ಘಟನೆ ಕುರಿತು ಮಾತನಾಡಿದ ಅವರು, ಸಂಸತ್ ಭವನದ ಪೊಲೀಸ್ ಠಾಣೆಗೆ 20ಕ್ಕೂ ಹೆಚ್ಚು ಸಂಸದರು ತೆರಳಿ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ತಡವಾಗಿ ಕಾಟಾಚಾರಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ, ಇದು ಸಂವಿಧಾನ ಮತ್ತು ದೇಶದ ದಲಿತರಿಗೆ ಬಗೆದ ಅಪಮಾನ ಎಂದರು.

ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಆಸ್ತಿಯಾಗಲಿ, ವಹಿವಾಟಾಗಲಿ ಇಡಿಗೆ ಕಾಣಿಸುವುದಿಲ್ಲವೇ? ಬಿಜೆಪಿಯ ಪ್ರಬಲ ಬೆಂಬಲಿಗರ ಮೇಲೆ ಎಂದಾದರೂ ಇಡಿ ಅಥವಾ ಐಟಿ ದಾಳಿ ನಡೆದ ದಾಖಲೆ ಇದೆಯೇ? ಬಿಜೆಪಿಯು ಕೇವಲ ಎಸ್‌ಸಿ, ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನಾಯಕರನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಹರಿಪ್ರಸಾದ್ ಕಿಡಿಕಾರಿದರು.

You cannot copy content of this page

Exit mobile version