Home ದೇಶ ಮಹಾಯುತಿಯಲ್ಲಿ ಭಿನ್ನಮತ | ಗಣೇಶೋತ್ಸವದಲ್ಲಿ ಡಿಜೆ ನುಡಿಸುವುದರಿಂದ ತೊಂದರೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ: ನವನೀತ್ ರಾಣಾ

ಮಹಾಯುತಿಯಲ್ಲಿ ಭಿನ್ನಮತ | ಗಣೇಶೋತ್ಸವದಲ್ಲಿ ಡಿಜೆ ನುಡಿಸುವುದರಿಂದ ತೊಂದರೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ: ನವನೀತ್ ರಾಣಾ

0

ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ 11 ದಿನಗಳ ಗಣೇಶೋತ್ಸವದ ಮೆರವಣಿಗೆಗಳಲ್ಲಿ ಹೈ-ಡೆಸಿಬಲ್ ಡಿಜೆ ಸೌಂಡ್ ಸಿಸ್ಟಮ್‌ಗಳ ಬಳಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಪುಣೆಯಲ್ಲಿ ಆರಂಭವಾದ ಡಿಜೆ ನಿಷೇಧದ ಕೂಗು ಇದೀಗ ಇಡೀ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದ್ದು, ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಾಯಕರಲ್ಲೇ ಪರ-ವಿರೋಧದ ನಿಲುವುಗಳು ವ್ಯಕ್ತವಾಗಿವೆ.

ಬಿಜೆಪಿ ನಾಯಕಿ ಹಾಗೂ ಮಾಜಿ ಸಂಸದೆ ನವನೀತ್ ರಾಣಾ ಈ ವಿಚಾರವಾಗಿ ಅತ್ಯಂತ ಕಟು ಹೇಳಿಕೆ ನೀಡಿದ್ದು, “ಗಣೇಶೋತ್ಸವದಲ್ಲಿ ಡಿಜೆ ನುಡಿಸುವುದರಿಂದ ಯಾರಿಗಾದರೂ ತೊಂದರೆ ಅಥವಾ ಸಮಸ್ಯೆಯಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಡಿಜೆ ನಿಷೇಧಿಸುವ ಮೊದಲು ಮಸೀದಿಗಳಲ್ಲಿ ನಮಾಜ್‌ಗಾಗಿ ಬಳಸುವ ಧ್ವನಿವರ್ಧಕಗಳನ್ನು ನಿಷೇಧಿಸಲಿ,” ಎಂದು ಗುಡುಗಿದ್ದಾರೆ. ಪುಣೆ ನಗರ ಬಿಜೆಪಿ ಅಧ್ಯಕ್ಷ ಧೀರಜ್ ಘಾಟೆ ಕೂಡ ಗಣೇಶೋತ್ಸವ ಮತ್ತು ವಿಸರ್ಜನೆ ವೇಳೆ ಡಿಜೆ ಮತ್ತು ಡ್ರಮ್ (ಢೋಲ್-ತಾಶಾ) ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ.

ಆದರೆ, ಬಿಜೆಪಿಯ ಒಳಗೇ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ ಡಿಜೆ ಬಳಕೆಯನ್ನು ಕಟುವಾಗಿ ವಿರೋಧಿಸಿದ್ದು, “ಹಬ್ಬಗಳನ್ನು ಶಿಸ್ತುಬದ್ಧವಾಗಿ ಮತ್ತು ನಾಗರಿಕ ರೀತಿಯಲ್ಲಿ ಆಚರಿಸಬೇಕು. ಉತ್ಸವಗಳ ಹೆಸರಿನಲ್ಲಿ ಡಿಜೆ ಮತ್ತು ಧ್ವನಿವರ್ಧಕಗಳ ಕರ್ಕಶ ಶಬ್ದವನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಹಬ್ಬಗಳನ್ನು ತಪ್ಪಾಗಿ ಆಚರಿಸುವ ಮೂಲಕ ಹಿಂದುತ್ವದ ಘನತೆಗೆ ಧಕ್ಕೆ ತರಬಾರದು,” ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಕೂಡ ಜನರು ಡಿಜೆ ಬಳಸುವುದನ್ನು ತಪ್ಪಿಸಬೇಕು ಮತ್ತು ಶಾಂತಿಯುತವಾಗಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನೊಂದೆಡೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವಿವಾದದಲ್ಲಿ ಯಾವುದೇ ನೇರ ಅಥವಾ ಕಠಿಣ ನಿಲುವು ತೆಗೆದುಕೊಳ್ಳದೆ ಜಾಣ್ಮೆಯ ಅಂತರ ಕಾಯ್ದುಕೊಂಡಿದ್ದಾರೆ. “ಯಾವುದೇ ನಿರ್ಧಾರವನ್ನು ಜನರ ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಬೇಕು. ಹಬ್ಬಗಳಲ್ಲಿ ನಡೆಯುವ ಸಂಪ್ರದಾಯಗಳನ್ನು ಕೇವಲ ಕಾನೂನಿನ ಮೂಲಕ ದಿಢೀರನೆ ತಡೆಯಲು ಸಾಧ್ಯವಿಲ್ಲ. ಇಂತಹ ಪದ್ಧತಿಗಳನ್ನು ನಿಲ್ಲಿಸಲು ಸಾರ್ವಜನಿಕರನ್ನು ಒಪ್ಪಿಸಿ ಮಧ್ಯಮ ಮಾರ್ಗ ಕಂಡುಕೊಳ್ಳುವುದು ಅಗತ್ಯ,” ಎಂದು ಹೇಳುವ ಮೂಲಕ ನಿರ್ಧಾರವನ್ನು ಪುಣೆಯ ಜನರ ವಿವೇಚನೆಗೇ ಬಿಟ್ಟಿದ್ದಾರೆ.

ಶಿವಸೇನೆಯಲ್ಲೂ ಈ ಕುರಿತು ಪರಸ್ಪರ ವಿರುದ್ಧ ನಿಲುವುಗಳು ಕಂಡುಬಂದಿವೆ. ಸಚಿವ ಸಂಜಯ್ ಶಿರ್ಸಾಟ್ ಡಿಜೆ ನಿಷೇಧವನ್ನು ಬೆಂಬಲಿಸಿದ್ದು, ಅತಿಯಾದ ಕರ್ಕಶ ಶಬ್ದದಿಂದ ಮಕ್ಕಳು, ಹಿರಿಯ ನಾಗರಿಕರು ಮತ್ತು ರೋಗಿಗಳ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮತ್ತೊಬ್ಬ ಸಚಿವ ಯೋಗೇಶ್ ಕದಮ್, “ಹಿಂದೂ ಹಬ್ಬಗಳ ವೇಳೆ ಸೌಂಡ್ ಲಿಮಿಟ್ ಹೇರಬಾರದು. ಶಬ್ದವಿಲ್ಲದೆ ಹಬ್ಬವನ್ನು ಹೇಗೆ ಸಂಭ್ರಮಿಸಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಈ ವಿವಾದವು ಆಗಸ್ಟ್ 24 ರಂದು ಪುಣೆಯ ನಾರಾಯಣ ಪೇಟ ನಿವಾಸಿ ವಿದ್ಯಾನಂದ ಬಾಪಟ್ ಎಂಬುವವರು ಡಿಜೆ ನಿಷೇಧಿಸಬೇಕೆಂದು ಸಾರ್ವಜನಿಕ ಸಭೆಯಲ್ಲಿ ಆಗ್ರಹಿಸಿದ ನಂತರ ಶುರುವಾಯಿತು. ಈ ಬೇಡಿಕೆಯ ನಂತರ ಸೆಪ್ಟೆಂಬರ್ 3 ರಂದು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಬಾಪಟ್ ಅವರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದನು. ಈ ಘಟನೆಯ ಬಳಿಕ ಪುಣೆಯ ನಾಗರಿಕರು ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಡಿಜೆ ಹಾವಳಿಯ ವಿರುದ್ಧ ನಿಂತಿದ್ದು, ಮಹಾಯುತಿ ಸರ್ಕಾರದೊಳಗೆ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ.

You cannot copy content of this page

Exit mobile version