Home ದೇಶ ಉಳಿತಾಯಕ್ಕಿಂತ ಸಾಲವೇ ಹೆಚ್ಚು: ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಕುರಿತು ಆರ್‌ಬಿಐ ವರದಿ

ಉಳಿತಾಯಕ್ಕಿಂತ ಸಾಲವೇ ಹೆಚ್ಚು: ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಕುರಿತು ಆರ್‌ಬಿಐ ವರದಿ

0

ಭಾರತೀಯ ಕುಟುಂಬಗಳ ಹಣಕಾಸು ಉಳಿತಾಯಕ್ಕಿಂತ ಸಾಲದ ಪ್ರಮಾಣವೇ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ 2026ರ ಆಗಸ್ಟ್ ಬುಲೆಟಿನ್ ವರದಿಯಲ್ಲಿ ಬಹಿರಂಗಪಡಿಸಿದೆ. ನಾಲ್ಕು ವರ್ಷಗಳ ಹಿಂದೆ ಪ್ರತಿ 100 ರೂಪಾಯಿ ಆರ್ಥಿಕ ಉಳಿತಾಯಕ್ಕೆ ಸರಾಸರಿ 27 ರೂಪಾಯಿ ಸಾಲವಿದ್ದದ್ದು, ಪ್ರಸ್ತುತ 32 ರೂಪಾಯಿಗೆ ಏರಿಕೆಯಾಗಿದೆ. ಜನರು ಉಳಿತಾಯ ಮಾಡುವುದನ್ನು ನಿಲ್ಲಿಸಿಲ್ಲವಾದರೂ, ಉಳಿತಾಯದ ದರಕ್ಕಿಂತ ಸಾಲದ ಬೆಳವಣಿಗೆಯ ದರವೇ ದುಪ್ಪಟ್ಟಾಗಿದೆ.

2026ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಕುಟುಂಬಗಳ ಬಳಿ ಒಟ್ಟು 490.3 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಆಸ್ತಿಗಳಿದ್ದು, ಇದೇ ವೇಳೆ ಅವರ ಮೇಲಿರುವ ಒಟ್ಟು ಸಾಲದ ಹೊರೆ 158.5 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಲೆಕ್ಕಾಚಾರದಲ್ಲಿ ಸ್ಥಿರಾಸ್ತಿ ಮತ್ತು ಬಂಗಾರವನ್ನು ಹೊರತುಪಡಿಸಿ ಕೇವಲ ಹಣಕಾಸು ಆಸ್ತಿ ಹಾಗೂ ಸಾಲಗಳನ್ನು ಮಾತ್ರ ಪರಿಗಣಿಸಲಾಗಿದೆ.

2022ರ ಜೂನ್‌ನಿಂದ 2026ರ ಮಾರ್ಚ್‌ವರೆಗಿನ 16 ತ್ರೈಮಾಸಿಕಗಳ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ. 41ರಷ್ಟು ವೃದ್ಧಿ ಕಂಡಿದ್ದರೆ, ಇದೇ ಅವಧಿಯಲ್ಲಿ ಕುಟುಂಬಗಳ ಉಳಿತಾಯ ಶೇ. 49ರಷ್ಟು ಮತ್ತು ಸಾಲದ ಪ್ರಮಾಣ ಬರೋಬ್ಬರಿ ಶೇ. 78ರಷ್ಟು ಏರಿಕೆಯಾಗಿದೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ದರಕ್ಕಿಂತ ಸಾಲದ ಹೆಚ್ಚಳ ದರವು ಸುಮಾರು ದುಪ್ಪಟ್ಟಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷಾಂತ್ಯಕ್ಕೂ ಕುಟುಂಬಗಳ ಬಳಿ ಇರುವ ಒಟ್ಟು ಆಸ್ತಿಯ ಮೌಲ್ಯ ಹೆಚ್ಚಾಗುತ್ತಾ ಬಂದಿದೆಯಾದರೂ, ಅದಕ್ಕೆ ತಕ್ಕಂತೆ ಅವರು ಮಾಡಿಕೊಂಡಿರುವ ಸಾಲದ ಹೊರೆಯೂ ಅಪಾಯಕಾರಿ ಮಟ್ಟದಲ್ಲಿ ವಿಸ್ತರಿಸಿದೆ.

ಇನ್ನೊಂದೆಡೆ ಭಾರತೀಯರು ಹಣ ಉಳಿತಾಯ ಮಾಡುವ ವಿಧಾನದಲ್ಲೂ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಕುಟುಂಬಗಳ ಒಟ್ಟು ಆರ್ಥಿಕ ಉಳಿತಾಯದಲ್ಲಿ ಬ್ಯಾಂಕ್ ಠೇವಣಿಗಳ ಪಾಲು ಶೇ. 36ರಿಂದ ಶೇ. 34.4ಕ್ಕೆ ಕುಸಿದಿದ್ದರೂ, ಇಂದಿಗೂ ಅವುಗಳೇ ಅಗ್ರಸ್ಥಾನದಲ್ಲಿ ಮುಂದುವರಿದಿವೆ. ಇದಕ್ಕೆ ವ್ಯತಿರಿಕ್ತವಾಗಿ ಮ್ಯೂಚುವಲ್ ಫಂಡ್‌ಗಳು ಗರಿಷ್ಠ ಬೆಳವಣಿಗೆ ದಾಖಲಿಸಿದ್ದು, ಅವುಗಳ ಪಾಲು ಶೇ. 6.4ರಿಂದ ಶೇ. 10.5ಕ್ಕೆ ಜಿಗಿದಿದೆ.

ಇದೇ ವೇಳೆ ನೇರ ಷೇರು ಹೂಡಿಕೆಯ ಪಾಲು ಶೇ. 20.1ರಿಂದ ಶೇ. 18.1ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಕುಟುಂಬಗಳ ಪ್ರತಿ 100 ರೂಪಾಯಿ ಉಳಿತಾಯದಲ್ಲಿ ಸುಮಾರು 29 ರೂಪಾಯಿಗಳು ಷೇರು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲೇ ಹೂಡಿಕೆಯಾಗಿದ್ದು, ಈ ಮೂಲಕ ಕುಟುಂಬಗಳ ಉಳಿತಾಯವು ಮಾರುಕಟ್ಟೆಯ ಏರಿಳಿತದ ಅಪಾಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒಡ್ಡಿಕೊಂಡಿದೆ.

You cannot copy content of this page

Exit mobile version