ಕನ್ನಡ ನಟ ದರ್ಶನ್ ಭಾಗಿಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಅಪ್ರೂವರ್ (ಸರ್ಕಾರಿ ಸಾಕ್ಷಿ) ಆಗಲು ಬಯಸಿದ್ದ ಆರೋಪಿ ಪ್ರದೋಷ್ ಎಸ್. ರಾವ್ಗೆ ಷರತ್ತುಬದ್ಧ ಕ್ಷಮಾದಾನ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕ್ಷಮಾದಾನ ನೀಡುವಲ್ಲಿ ಕಾನೂನು ಪ್ರಕ್ರಿಯೆಯ ಲೋಪಗಳು (procedural aberrations) ಕಂಡುಬಂದಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್, ಪ್ರದೋಷ್ಗೆ ಕ್ಷಮಾದಾನ ನೀಡಿ ಅಪ್ರೂವರ್ ಆಗಿ ಪರಿಗಣಿಸಿದ ಆದೇಶ ಹಾಗೂ ಪ್ರೊಬೇಷನ್ ಅಧಿಕಾರಿಯಿಂದ ವರದಿ ಕೇಳಿದ್ದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಂ. ಸಾಂಬ್ರಾಣಿ ಅವರ ಎರಡು ಪ್ರತ್ಯೇಕ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಪ್ರಕ್ರಿಯಾತ್ಮಕ ಲೋಪಗಳ ಹಿನ್ನೆಲೆಯಲ್ಲಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿತು. ವಿಚಾರಣಾ ನ್ಯಾಯಾಲಯವು ಹೊರಡಿಸಿದ್ದ 2026ರ ಆಗಸ್ಟ್ 20 ಮತ್ತು ಆಗಸ್ಟ್ 25ರ ಆದೇಶಗಳನ್ನು ರದ್ದುಗೊಳಿಸಿದ ಹೈಕೋರ್ಟ್, ಸಿಆರ್ಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಯ ಮೇಲೆ ಹೈಕೋರ್ಟ್ನ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಪ್ರಕಾರ ಹೊಸದಾಗಿ ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಪ್ರಕರಣವನ್ನು ಹಿಂತಿರುಗಿಸಿದೆ. ಇದೇ ವೇಳೆ, ಪ್ರಕರಣದ ಮರು ವಿಚಾರಣೆ ನಡೆಸದೆ, ಕೇವಲ ಹೊಸದಾಗಿ ಆದೇಶವನ್ನಷ್ಟೇ ಪ್ರಕಟಿಸಬೇಕು ಎಂದೂ ಹೈಕೋರ್ಟ್ ಮೌಖಿಕವಾಗಿ ಸ್ಪಷ್ಟಪಡಿಸಿದೆ.
ಪ್ರದೋಷ್ಗೆ ಆಗಸ್ಟ್ 25ರಂದು ವಿಚಾರಣಾ ನ್ಯಾಯಾಲಯವು ಕ್ಷಮಾದಾನ ನೀಡಿ ಅಪ್ರೂವರ್ ಆಗಿ ಒಪ್ಪಿಕೊಂಡಿತ್ತು. ನಂತರ ತನ್ನ ಹೇಳಿಕೆಯನ್ನು ತಕ್ಷಣ ದಾಖಲಿಸಿಕೊಳ್ಳುವಂತೆ ಕೋರಿದ್ದ ಪ್ರದೋಷ್, ತನ್ನ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿಚಾರಣಾ ನ್ಯಾಯಾಲಯವು ಪ್ರದೋಷನನ್ನು ಸೆಪ್ಟೆಂಬರ್ 2 ರಂದು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿ ಸಮನ್ಸ್ ಜಾರಿ ಮಾಡಿತ್ತು. ಆದರೆ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದರಿಂದ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಇದೀಗ ಹೈಕೋರ್ಟ್ ಆ ಆದೇಶವನ್ನೇ ರದ್ದುಗೊಳಿಸಿ ಹೊಸದಾಗಿ ಆದೇಶ ನೀಡಲು ಸೂಚಿಸಿದೆ.
