ಹಿಂದಿ ರಾಷ್ಟ್ರಭಾಷೆ ಹೇಳಿಕೆ ವಿವಾದ: ಸ್ಪಷ್ಟನೆ ನೀಡಿ ಕ್ಷಮೆ ಕೋರಿದ ನಟ ಶಿವರಾಜ್‌ಕುಮಾರ್

ಭಾರತದಲ್ಲಿ ಹಿಂದಿ ಭಾಷೆಯನ್ನು “ರಾಷ್ಟ್ರಭಾಷೆ” ಎಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದಿ ಕೇವಲ ಭಾರತದ ಭಾಷೆಗಳಲ್ಲಿ ಒಂದು ಭಾಷೆಯಷ್ಟೇ. ನ್ಯಾಷನಲ್ ಲ್ಯಾಂಗ್ವೇಜ್ ಎಂದರೆ ಭಾರತೀಯ ಭಾಷೆ (Indian Language) ಎಂಬ ಅರ್ಥದಲ್ಲಿ ನಾನು ಆ ರೀತಿ ಹೇಳಿದ್ದೆ, ನನಗೆ ಈ ವಿಚಾರದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಿರಲಿ. ಅವರವರ ಭಾಷೆ ಅವರವರಿಗೆ ಮುಖ್ಯ, ಆದರೆ ನಮಗೆ ನಮ್ಮ ಭಾಷೆಯೇ ಸರ್ವಶ್ರೇಷ್ಠ. ನಮಗೆ ಕನ್ನಡವೇ ಅತ್ಯಂತ ಮುಖ್ಯ ಮತ್ತು ಕನ್ನಡವೇ ನಮ್ಮ ಭಾಷೆ,” ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆ:

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್-ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಅವರು ಹಿಂದಿಯನ್ನು “ರಾಷ್ಟ್ರಭಾಷೆ” ಎಂದು ಸಹಜವಾಗಿ ಉಲ್ಲೇಖಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ಷೇಪಕ್ಕೆ ಕಾರಣವಾಗಿತ್ತು. ಭಾರತದ ಸಂವಿಧಾನದಲ್ಲಿ ಯಾವುದೇ ಒಂದು ಭಾಷೆಯನ್ನು ‘ರಾಷ್ಟ್ರಭಾಷೆ’ ಎಂದು ಘೋಷಿಸಿಲ್ಲ, 22 ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಗುರುತಿಸಲಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಮತ್ತು ನೆಟ್ಟಿಗರು ನೆನಪಿಸಿದ್ದರು.

ವಿಶೇಷವಾಗಿ ಕನ್ನಡದ ಅಸ್ಮಿತೆ ಹಾಗೂ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದ ಡಾ. ರಾಜ್‌ಕುಮಾರ್ ಅವರ ಕುಟುಂಬದಿಂದಲೇ ಇಂತಹ ಹೇಳಿಕೆ ಬಂದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಈ ವಿವಾದ ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಶಿವರಾಜ್‌ಕುಮಾರ್ ತಕ್ಷಣವೇ ಮಾಧ್ಯಮಗಳ ಮುಂದೆ ಬಂದು, ಮಾತಿನ ಭರದಲ್ಲಿ ಹಾಗೆ ಹೇಳಿದ್ದಾಗಿ ಒಪ್ಪಿಕೊಂಡು ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು