Home ಕೋಮುವಾದ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶ ನಿಷೇಧ ಅಸಂವಿಧಾನಿಕ: ವಿಎಚ್‌ಪಿ ಕರೆಯನ್ನು ವಿರೋಧಿಸಿದ ಕೇಂದ್ರ ಸಚಿವ ರಾಮದಾಸ್...

ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶ ನಿಷೇಧ ಅಸಂವಿಧಾನಿಕ: ವಿಎಚ್‌ಪಿ ಕರೆಯನ್ನು ವಿರೋಧಿಸಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

0

ಮಹಾರಾಷ್ಟ್ರದಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಪ್ರವೇಶವನ್ನು ತಡೆಯಬೇಕೆಂಬ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕರೆಯನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಬಲವಾಗಿ ವಿರೋಧಿಸಿದ್ದಾರೆ. ಧರ್ಮದ ಆಧಾರದ ಮೇಲೆ ಜನರನ್ನು ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹೊರಗಿಡುವುದು ಸಂವಿಧಾನ ವಿರೋಧಿ ಎಂದು ಅವರು ಹೇಳಿದ್ದಾರೆ.

ರಾಯ್‌ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ, ಹಾಗಾಗಿ ಇಂತಹ ನಿಲುವು ಸರಿಯಲ್ಲ. ಮುಸ್ಲಿಮರು ಗರ್ಬಾ ಉತ್ಸವದಲ್ಲಿ ಭಾಗವಹಿಸಬಾರದು ಎಂದು ಹೇಳುವುದು ಸರಿಯಾದ ಕ್ರಮವಲ್ಲ. ನಮ್ಮ ದೇಶದಲ್ಲಿ ವಿವಿಧ ಧರ್ಮಗಳ ಜನರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುವ ಪರಂಪರೆಯಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಗ್ಗೂಡಿ ದೇಶಕ್ಕಾಗಿ ಕೆಲಸ ಮಾಡಬೇಕಿದೆ,” ಎಂದು ತಿಳಿಸಿದರು. ಇದೇ ವೇಳೆ ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾಕ್ಕೆ ಎಲ್ಲ ಧರ್ಮದ ಜನರು ತೆರಳುವ ಉದಾಹರಣೆಯನ್ನು ನೀಡಿದ ಅವರು, ವಿಎಚ್‌ಪಿಯ ಈ ನಿಲುವು ಸಂವಿಧಾನ ನೀಡಿರುವ ಸಮಾನ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ನವರಾತ್ರಿ ವೇಳೆ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶ ನಿರ್ಬಂಧಿಸುವುದಾಗಿ ವಿಎಚ್‌ಪಿ ಘೋಷಿಸಿದೆ. ಕಾರ್ಯಕ್ರಮ ಆಯೋಜಕರು ಪ್ರವೇಶದ್ವಾರದಲ್ಲಿ ಗುರುತಿನ ಚೀಟಿಗಳನ್ನು ಪರಿಶೀಲಿಸಬೇಕು ಹಾಗೂ ಹಣೆಗೆ ತಿಲಕ ಇಡಬೇಕೆಂದು ಮಾರ್ಗಸೂಚಿ ಹೊರಡಿಸಿದೆ. ನವರಾತ್ರಿಯು ದೇವಿ ಆರಾಧನೆಯ ಧಾರ್ಮಿಕ ಉತ್ಸವವಾಗಿದ್ದು, ಮೂರ್ತಿಪೂಜೆಯನ್ನು ನಂಬದವರು ಇದರಲ್ಲಿ ಏಕೆ ಭಾಗವಹಿಸಬೇಕು ಎಂದು ವಿಎಚ್‌ಪಿ ವಕ್ತಾರ ಶ್ರೀರಾಜ್ ನಾಯರ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಸಚಿವ ನಿತೇಶ್ ರಾಣೆ ಕೂಡ ಹಬ್ಬಗಳ ಸಂದರ್ಭದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಆರೋಪಿಸಿ ವಿಎಚ್‌ಪಿಯ ನಿಲುವಿಗೆ ಬೆಂಬಲ ಸೂಚಿಸಿದ್ದರು. ಆದರೆ, ಎನ್‌ಡಿಎ ಮಿತ್ರಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಅಠಾವಳೆ) ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಈ ನಿಲುವನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಎಲ್ಲ ಧರ್ಮೀಯರನ್ನು ಒಳಗೊಳ್ಳುವ ಸಾಂವಿಧಾನಿಕ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ.

You cannot copy content of this page

Exit mobile version